ಒಟ್ಟು 18 ಶಾಸಕರ ಪೈಕಿ ಮೂರನೇ ಎರಡು ಭಾಗ ಅಂದರೆ, 12ಕ್ಕಿಂತ ಶಾಸಕರನ್ನು ಸೆಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿವಕುಮಾರ್ ಪ್ರಯತ್ನ ನಡೆಸಿದ್ದು, ಇದರ ಕೊನೆ ಹಂತದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು(ಜ.10): ಪಕ್ಷಾಂತರ ಕಾಯ್ದೆಗೆ ಧಕ್ಕೆಯಾಗದಂತೆ, ಉಪಚುನಾವಣೆಗಳ ಗೊಡವೆಯೇ ಎದುರಾಗದಂತೆ ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರ ಸೆಳೆಯಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಜೆಡಿಎಸ್ ಪಾಳೆಯದಿಂದ ಹೊರಬಿದ್ದಿದೆ.
ಒಟ್ಟು 18 ಶಾಸಕರ ಪೈಕಿ ಮೂರನೇ ಎರಡು ಭಾಗ ಅಂದರೆ, 12ಕ್ಕಿಂತ ಶಾಸಕರನ್ನು ಸೆಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿವಕುಮಾರ್ ಪ್ರಯತ್ನ ನಡೆಸಿದ್ದು, ಇದರ ಕೊನೆ ಹಂತದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಬುಧವಾರ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರ ಪೈಕಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಮ್ಮ ನಿವಾಸಕ್ಕೆ ಉಪಹಾರಕ್ಕಾಗಿ ಆಹ್ವಾನಿಸಿದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಅಧಿಕಾರ ಹಂಚಿಕೆ ತಡೆಗೆ ಡಿನ್ನರ್ ಮೀಟಿಂಗ್ ಅಸ್ತ್ರ?
ಡಿಕೆಶಿ ಆಮಿಷ:
ಈಗಾಗಲೇ ಶಿವಕುಮಾರ್ ನಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿ ಭಾರಿ ಪ್ರಮಾಣದ ಆಮಿಷ ಒಡ್ಡಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋಗುವುದಿಲ್ಲ ಎಂಬುದಾಗಿ ನಮ್ಮ ಶಾಸಕರು ಹೇಳುತ್ತಿದ್ದಾರೆ. ಆದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಂಬುವುದು ಕಷ್ಟವಾಗುತ್ತಿದೆ. ಇದನ್ನು ಹೇಗಾದರೂ ತಡೆಗಟ್ಟಬೇಕು ಎಂಬ ಅಭಿಪ್ರಾಯವನ್ನು ಕುಮಾರಸ್ವಾಮಿ ಅವರು ಬೇಸರದಿಂದ ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಈ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆಸಿದ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ಅವರು ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರ ರೂಪಿಸುವ ನಿಲುವಿಗೆ ಬಂದರು ಎಂದು ತಿಳಿದು ಬಂದಿದೆ.
ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ, ಬೇರೆ ಬೇರೆ ಹೇಳಿಕೆಗೆ ಬೆಲೆ ಇಲ್ಲ: ಡಿಕೆಶಿ ಸ್ಪಷ್ಟನೆ
ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದಲ್ಲಿ ಬೇರೆ ಬೇರೆ ಹೇಳಿಕೆಗಳಿಗೆ ಯಾವ ಬೆಲೆಯೂ ಇಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ನನ್ನ ಮತ್ತು ಸರ್ಕಾರದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯೇ ಅಂತಿಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮದ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.
ಗಾಂಧಿ ಭಾರತ ಕಾರ್ಯಕ್ರಮದ ದಿನ ಜ.21ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜಿಸಿರುವ ಕಾರಣ ಏನು? ಪಕ್ಷದಲ್ಲಿನ ಬಿಕ್ಕಟ್ಟು ಶಮನಕ್ಕಾಗಿ ಈ ಸಭೆಯೇ ಎಂಬ ಪ್ರಶ್ನೆಗೆ, ನಮ್ಮಲ್ಲಿ ಬಿಕ್ಕಟ್ಟಿದೆ ಎಂದು ಹೇಳಿದವರು ಯಾರು? ನಮ್ಮಲ್ಲಿ ಯಾರಿಗೂ ಬಿಕ್ಕಟ್ಟಿಲ್ಲ. ಬಿಕ್ಕಟ್ಟಿದ್ದರೆ ನಿಮ್ಮಲ್ಲೇ (ಮಾಧ್ಯಮದವರಿಗೆ) ಇರಬೇಕು. ಸದ್ಯಕ್ಕೆ ಈ ಬಗ್ಗೆ ಹೆಚ್ಚೇನೂ ಮಾತನಾಡುವುದಿಲ್ಲ ಎಂದರು. ಅಧಿಕಾರ ಹಂಚಿಕೆ ಬಗ್ಗೆ ಬೇರೆ ಬೇರೆ ಹೇಳಿಕೆ ಕೇಳಿಬರುತ್ತಿವೆಯಲ್ಲ ಎಂದು ಕೇಳಿದಾಗ, ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಕಚೇರಿಯಲ್ಲಿ ನಾನು, ಸರ್ಕಾರದ ವಿಚಾರದಲ್ಲಿ ಮುಖ್ಯಮಂತ್ರಿ ಅವರ ಹೇಳಿಕೆಯೇ ಅಂತಿಮ. ಬೇರೆ ಹೇಳಿಕೆಗಳಿಗೆ ಬೆಲೆ ಇರುವುದಿಲ್ಲ ಎಂದು ಹೇಳಿದರು
ಸಿಎಂ-ಡಿಸಿಎಂ ಕುರಿತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಭವಿಷ್ಯವಾಣಿ
ರಾಜಣ್ಣ ಹೇಳಿಕೆ ಗೊತ್ತಿಲ್ಲ:
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕರೆದಿದ್ದ ಎಸ್ಸಿ, ಎಸ್ಟಿ ಸಚಿವರು, ಶಾಸಕರ ಔತಣ ಕೂಟ ರದ್ದು ಮಾಡಲು ದಲಿತ ವಿರೋಧಿಗಳೇ ಕಾರಣ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆರೋಪಿಸಿದ್ದಾರಲ್ವಾ ಎಂದಾಗ, ನನಗೆ ಆ ವಿಚಾರವಾಗಿ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಿಧಾನವಾಗಿ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು. ಸದ್ಯದಲ್ಲೇ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಒಡೆಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ಈ ವಿಚಾರವಾಗಿ ಮಾತನಾಡಲು ಪ್ರತ್ಯೇಕವಾಗಿ ಮತ್ತೊಂದು ಮಾಧ್ಯಮಗೋಷ್ಠಿ ಕರೆಯುತ್ತೇನೆ.
ಯಾರೆಲ್ಲ ಏನೇನು ಹೇಳಿದ್ದಾರೆ ಎಂದು ಪಟ್ಟಿ ಮಾಡಿಕೊಂಡಿರಿ. ಎಲ್ಲರಿಗೂ ಉತ್ತರ ನೀಡುತ್ತೇನೆ. ಅವರಿಗೆ ಸೂಜಿದಾರ ಕಳುಹಿಸಿಕೊಡುತ್ತೇನೆ. ಮೊದಲು ಅವರು ತಮ್ಮ ಒಡೆದ ಮನೆಯನ್ನು ಹೊಲಿದುಕೊಳ್ಳಲಿ ಎಂದು ತಿರುಗೇಟು ನೀಡಿದರು. ವಿಧಾನ ಪರಿಷತ್ ಸದಸ್ಯತ್ವಕ್ಕೆ ನಾಮನಿರ್ದೇಶನದ ಬಗ್ಗೆ ಕೇಳಿದಾಗ, ಅದಕ್ಕೆ ಇನ್ನು ಸಮಯವಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಿದ್ದೇವೆ. ಖಾಲಿಯಾಗುವ ಎಲ್ಲಾ ಸ್ಥಾನಗಳಿಗೂ ಒಟ್ಟಿಗೆ ನಾಮನಿರ್ದೇಶನ ಮಾಡಲಾಗುವುದು. ಹೈಕಮಾಂಡ್ ನಾಯಕರ ಜತೆ ಚರ್ಚಿಸಿ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.