ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. 136 ಶಾಸಕರೂ ನಮ್ಮವರೆ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್.ಪಟೇಲರ ಭಾಷಣ ಕೇಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ
ಬೆಳಗಾವಿ(ಅ.19): ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ. ವಿನಾಕಾರಣ ಮಾಧ್ಯಮದಲ್ಲಿ ಸುದ್ದಿ ಬರುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. 136 ಶಾಸಕರೂ ನಮ್ಮವರೆ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್.ಪಟೇಲರ ಭಾಷಣ ಕೇಳಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಿನ್ನೆ, ಮೊನ್ನೆ ಸತೀಶ್ ಅವರು ಮತ್ತು ನಾನು ಜೊತೆಯಲ್ಲಿಯೇ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಲಕ್ಷ್ಮೀ ಹೆಬ್ಬಾಳಕರ್ ಅವರು ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಭಾರಿ ಮುಜುಗರ: ಸತೀಶ್ ಜಾರಕಿಹೊಳಿ ದಸರಾ ಟೀಮ್‌ನಿಂದ ತಿರುಗೇಟು!
ಇಲ್ಲಿನ ಶಾಸಕರು, ಸಚಿವರು ಆಗಮಿಸದಿರುವುದಕ್ಕೆ ಕಾರಣ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಸಚಿವ, ಶಾಸಕರು ಮೈಸೂರು, ಬೆಂಗಳೂರುನಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಯಲ್ಲಿ ಕಾರ್ಯಕ್ರಮ ಇದೆ. ಮಹಾಂತೇಶ ಕೌಜಲಗಿ ಅವರಿಗೆ ಹುಷಾರಿಲ್ಲ ಎಂಬ ಮಾಹಿತಿ ಇದೆ. ನಾನು ಬೆಳಗಾವಿಗೆ ಬಂದಿರುವುದು ಖಾಸಗಿ ಕಾರ್ಯಕ್ರಮದ ನಿಮಿತ್ತ ಎಂದರು.
ಬೆಳಗಾವಿಯಿಂದಲೇ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಕೇಳಿದಾಗ ಜೆ.ಎಚ್.ಪಟೇಲರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ ಎಂದು ತಿರುಗೇಟು ನೀಡಿದರು.
ಇದು ಕೇವಲ ಟ್ರೇಲರ್, ಪಿಚ್ಚರ್ ಅಭಿ ಬಾಕಿ ಹೈ: ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಶ್ರೀಮಂತ ಪಾಟೀಲ
ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ, ಸತೀಶ ಗೈರು
ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ , ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗೈರಾಗಿರುವುದು ಕಂಡುಬಂತು. ಈ ಮೂಲಕ ಕಾಂಗ್ರೆಸ್‌ನಲ್ಲಿ ವೈಮನಸ್ಸು ಇರುವುದು ಸಾಬೀತಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ.ಶಿವಕುಮಾರ ಅವರನ್ನು ಪಕ್ಷದ ಕಾರ್ಯಕರ್ತರೇ ಹಾರ ಮತ್ತು ಗಾಂಧಿ ಟೋಪಿ ತೊಡಿಸಿ ಸ್ವಾಗತಿಸಿದರು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೇ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಗೈರಾದರು. ಡಿಕೆಶಿ ವಿರುದ್ಧ ಮುನಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಮಾನ ನಿಲ್ದಾಣದಲ್ಲಿ ಕಾಣಿಸಲೇ ಇಲ್ಲ. ಇಬ್ಬರು ಸಚಿವರು ಸೇರಿದಂತೆ ಜಿಲ್ಲೆಯ 11 ಶಾಸಕರು ಗೈರಾದರು. ಜಲಸಂಪನ್ಮೂಲ ಇಲಾಖೆ ಕಚೇರಿಯಲ್ಲಿ ಕರೆದ ಅಧಿಕಾರಿಗಳ ಸಭೆಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೆ ಜಿಲ್ಲೆಯ ಶಾಸಕರು ಗೈರಾಗಿರುವುದು ಕಂಡುಬಂತು.