ಮಿಸ್ಟರ್ ಕ್ಲೀನ್ ಸ್ವಾಮಿ (ಕುಮಾರಸ್ವಾಮಿ) ವಿರುದ್ಧ 50 ಡಿನೋಟಿಫಿಕೇಷನ್ ಪ್ರಕರಣ ಇರುವುದು ಗೊತ್ತಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರಾಜ್ಯಪಾಲರ ಮುಂದೆ ಲೋಕಾಯುಕ್ತ ಪೊಲೀಸರ ಪ್ರಾಸಿಕ್ಯೂಷನ್ ಅರ್ಜಿಯೂ ಬಾಕಿಯಿದೆ. ಎಲ್ಲಾ ಹಗರಣಗಳನ್ನೂ ಬಿಚ್ಚಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮೈಸೂರು(ಆ.10): ‘ಮಿಸ್ಟರ್ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಕೇವಲ 19 ಸೀಟು ಗೆದ್ದ ನಿನಗೆ 136 ಸ್ಥಾನ ಗೆದ್ದು ಜನಾಶೀರ್ವಾದದಿಂದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕಾ? ಈ ಕನಕಪುರ ಬಂಡೆ ಸಿದ್ದರಾಮಯ್ಯ ಹಿಂದೆ ಇದೆ. ಈ ಬಂಡೆ ಹಿಂದಿನ 136 ಶಾಸಕರೂ ಸಿದ್ದರಾಮಯ್ಯ ಹಿಂದೆ ಇದ್ದಾರೆ. ಹತ್ತು ತಿಂಗಳಲ್ಲ ಹತ್ತು ವರ್ಷವಾದರೂ ನಿಮಗೆ ಈ ಸರ್ಕಾರ ಮುಟ್ಟಲಾಗಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಎಸೆದಿದ್ದಾರೆ.
ಇದೇ ವೇಳೆ, ‘ಮಿಸ್ಟರ್ ಕ್ಲೀನ್ ಸ್ವಾಮಿ (ಕುಮಾರಸ್ವಾಮಿ) ವಿರುದ್ಧ 50 ಡಿನೋಟಿಫಿಕೇಷನ್ ಪ್ರಕರಣ ಇರುವುದು ಗೊತ್ತಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರಾಜ್ಯಪಾಲರ ಮುಂದೆ ಲೋಕಾಯುಕ್ತ ಪೊಲೀಸರ ಪ್ರಾಸಿಕ್ಯೂಷನ್ ಅರ್ಜಿಯೂ ಬಾಕಿಯಿದೆ. ಎಲ್ಲಾ ಹಗರಣಗಳನ್ನೂ ಬಿಚ್ಚಿಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಜನಾಂದೋಲನ ಸಮಾವೇಶದ ಉದ್ದಕ್ಕೂ ಜೆಡಿಎಸ್-ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅನಿವಾರ್ಯತೆ ಬರುತ್ತೆ; ನಾವು ಹೋರಾಟ ನಿಲ್ಲಿಸೊಲ್ಲ: ಸಂಸದ ಬಿವೈ ರಾಘವೇಂದ್ರ ವಾಗ್ದಾಳಿ
‘ಹೇಯ್ ವಿಜಯೇಂದ್ರ, ಹೇಯ್ ಅಶೋಕ, ಕುಮಾರಸ್ವಾಮಿ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? 19 ಸ್ಥಾನ ಗೆದ್ದ ನಿನಗೆ ರಾಜೀನಾಮೆ ಕೇಳುವ ನೈತಿಕತೆ ಇದೆಯಾ? ಮಾಧ್ಯಮಗಳು ನನ್ನನ್ನು ಬಂಡೆ ಎಂದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. ಈ ಬಂಡೆ ಜತೆಗೆ 135 ಶಾಸಕರೂ ಸಿದ್ದರಾಮಯ್ಯ ಹಿಂದೆ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಬೆನ್ನಿಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಿ’ ಎಂದು ತಿರುಗೇಟು ನೀಡಿದರು.
10 ತಿಂಗಳಲ್ಲ, 10 ವರ್ಷ ಮುಟ್ಟಲಾಗಲ್ಲ:
2023ರಲ್ಲಿ ರಾಜ್ಯದ ಜನ ನಮಗೆ ಶೇ.43ರಷ್ಟು ಮತ ನೀಡಿದ್ದಾರೆ, ಲೋಕಸಭೆಯಲ್ಲಿ ಶೇ.45ರಷ್ಟು ಮತ ನೀಡಿದ್ದಾರೆ. 136 ಸ್ಥಾನ ಗೆದ್ದಿರುವ ಈ ಸರ್ಕಾರವನ್ನು ಮುಂದಿನ 10 ತಿಂಗಳಲ್ಲಿ ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರ್ಕಾರವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.
ಅಣ್ಣನ ಮಗನ ವಿರುದ್ಧವೇ ಎಚ್‌ಡಿಕೆ ಪಿತೂರಿ:
ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಮೊದಲು ನನ್ನ ಮೇಲೆ ಆರೋಪ ಮಾಡಿದರು. ನಂತರ ಪ್ರೀತಂ ಗೌಡನ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ನೀಡದೆ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನೂ ಬಿಡಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಜೆಡಿಎಸ್ ಪಕ್ಷದಲ್ಲಿಲ್ಲ. ತಮ್ಮ ಮಕ್ಕಳಿಗೆ ರಾಜಕೀಯ ದಾರಿ ಮಾಡಿಕೊಡಲು ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದು ಜನತಾದಳದ ಇತಿಹಾಸ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ಅಂಥವರು ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ? ಎಂದರು.
ಆ.9ರ ಹೋರಾಟಗಳು ಐತಿಹಾಸಿಕ: 1942ರಲ್ಲಿ ಈ ದಿನ ಆಗಸ್ಟ್ 9ರಂದು ಮಹಾತ್ಮಾ ಗಾಂಧಿ ಅವರ ನಾಯಕತ್ವದಲ್ಲಿ ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಎಂಬ ಹೋರಾಟ ನಡೆದಿತ್ತು. 2010ರಲ್ಲಿ ಇದೇ ದಿನ ಬಳ್ಳಾರಿ ಪಾದಯಾತ್ರೆ ಮಾಡಿ ದೇಶದ ಸಂಪತ್ತು ಲೂಟಿ ಹೊಡೆಯುತ್ತಿರುವ ಬಳ್ಳಾರಿ ಗಣಿಲೂಟಿಕೋರರ ವಿರುದ್ಧ ಹೋರಾಟ ಮಾಡಿದ್ದೆವು. ಪ್ರಸ್ತುತ ನಾವು ಸಂವಿಧಾನ ವಿರೋಧಿ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ.
ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ ಪಾಪ ವಿಮೋಚನಾ ಯಾತ್ರೆ. ನಮ್ಮದು ಅಧರ್ಮಿಗಳ ವಿರುದ್ಧದ ಧರ್ಮ ಯುದ್ಧ. ಅನ್ಯಾಯದ ವಿರುದ್ಧ ನ್ಯಾಯದ ಯುದ್ಧ, ನಮ್ಮದು ಅಸತ್ಯದ ವಿರುದ್ಧ ಸತ್ಯದ ಯುದ್ಧ ಎಂದು ಹೇಳಿದರು.
14 ಸೈಟ್: ಸಿದ್ದು ವಿರುದ್ಧ ಕೋರ್ಟ್‌ಗೆ ನೇರ ದೂರು, ಸಿದ್ದರಾಮಯ್ಯ ಸಂಕಷ್ಟ ಮತ್ತಷ್ಟು ಜಟಿಲ..!
ಬಿಜೆಪಿಗೆ ಡಿಕೆಶಿ 4 ಸವಾಲ್
1. ಬಿ.ವೈ.ವಿಜಯೇಂದ್ರ ನಿಮ್ಮ ತಂದೆ ಎರಡು ಬಾರಿ ರಾಜೀನಾಮೆ ಕೊಟ್ಟಿದ್ದೇಕೆ?
2. ಮೈಸೂರಿಗೆ ಬಂದು ಸಭೆ ಮಾಡುವಾಗ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನಿಂದ ವಿದೇಶಕ್ಕೆ ಆರ್‌ಟಿಜಿಎಸ್ ಮಾಡಿದ್ದೀಯಲ್ವಾ ಅದು ಯಾಕೆ? ನಿನ್ನಿಂದ ನಿಮ್ಮ ತಂದೆ ಕಣ್ಣೀರು ಹಾಕಿದ್ದು ಏಕೆ?
3. ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಅವರದ್ದು ಭ್ರಷ್ಟರ ಕುಟುಂಬ, ವಿಜಯೇಂದ್ರನೇ ಭ್ರಷ್ಟ ಎಂದಿದ್ದಾರಲ್ಲ ಅದಕ್ಕೇನು ಹೇಳುತ್ತೀರಿ?
4. ಬಿ.ಎಸ್. ಯಡಿಯೂರಪ್ಪ ಜೆಡಿಎಸ್ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಎಚ್‌ಡಿಕೆ ಉತ್ತರಿಸಲಿ
ಎಚ್‌ಡಿಕೆ ಯಾರನ್ನೂ ಬೆಳೆಯಲು ಬಿಡಲ್ಲ
ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಜೆಡಿಎಸ್ ಪಕ್ಷದಲ್ಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.