
ಬೆಂಗಳೂರು (ಆ.16): ‘ಎಲ್ಲ ಬಿಚ್ಚಿಡುವವರು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವೇ? ಏನು ಬೇಕಾದರೂ ಮಾಡಲಿ. ಅವರ ಹತ್ತಿರ ಏನು ಮಾಹಿತಿ ಇದೆಯೋ ಇಡಲಿ. ನಾನೂ ಮಾತನಾಡುತ್ತೇನೆ. ಎಲ್ಲದಕ್ಕೂ ಶುಭ ಸಮಯ, ಶುಭ ಲಗ್ನ, ಮಹೂರ್ತ ಬರಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
‘ಬಿಬಿಎಂಪಿಯಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಇನ್ನೆರಡು ದಿನದಲ್ಲಿ ಬಿಚ್ಚಿಡುತ್ತೇನೆ. ಗುತ್ತಿಗೆದಾರ ಹೇಮಂತ್‌ಗೆ ನೀವು ಬೆದರಿಕೆ ಹಾಕಿ ಕ್ಷಮೆ ಕೇಳುವಂತೆ ಮಾಡಿದ್ದೀರಿ’ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಎಲ್ಲ ಬಿಚ್ಚಿಡುವವರು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವೇ. ಏನು ಬೇಕಾದರೂ ಮಾಡಲಿ. ಅವರ ಹತ್ತಿರ ಏನು ಮಾಹಿತಿ ಇದೆಯೋ ಇಡಲಿ. ಎಲ್ಲರಿಗೂ ಅವಕಾಶವಿದೆ. ಅವರೊಬ್ಬರಿಗೇ ಅಲ್ಲ ಎಂದು ಶಿವಕುಮಾರ್ ಟಾಂಗ್ ನೀಡಿದರು.
ದ್ವೇಷದಿಂದ ಅಭಿವೃದ್ಧಿ ಅಸಾಧ್ಯ, ದುಷ್ಟರ ಆಟ ಇನ್ನು ನಡೆಯಲ್ಲ: ಸಿದ್ದರಾಮಯ್ಯ ಭವಿಷ್ಯ
ಕುಮಾರಸ್ವಾಮಿ ಅವರ ಬಳಿ ಏನು ಮಾಹಿತಿ ಇದೆಯೋ ಅದನ್ನು ಬಿಚ್ಚಿ ಬಿಚ್ಚಿ ಇಡಲಿ. ಅವರಷ್ಟುಅನುಭವ ನನಗಿಲ್ಲ. ನಾನು ಈಗ ಅವರನ್ನು ಅಣ್ಣ ಅನ್ನುವಂತೆಯೂ ಇಲ್ಲ. ಬಿಚ್ಚಿಡುವುದಕ್ಕೆ ಎಲ್ಲರಿಗೂ ಅವಕಾಶವಿದೆ. ನಾನ್ಯಾಕೆ ಜಟಾಪಟಿ ಮಾಡಲಿ. ಚುನಾವಣೆಯ ರಾಜಕೀಯ ಯುದ್ಧದಲ್ಲಿ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಸಿಗಲಿಲ್ಲ ಎಂದು ಅವರು ಕೈ ಹಿಸುಕಿಕೊಳ್ಳುತ್ತಿದ್ದರೆ ಏನು ಮಾಡಲು ಆಗುತ್ತದೆ. ನಾನೂ ಮಾತನಾಡುತ್ತೇನೆ. ಎಲ್ಲದಕ್ಕೂ ಶುಭ ಸಮಯ, ಶುಭ ಲಗ್ನ, ಮಹೂರ್ತ ಬರಬೇಕು. ಮಾತನಾಡಲು ಎಲ್ಲರಿಗೂ ಅವಕಾಶವಿದೆ. ಅವರೊಬ್ಬರಿಗೇ ಅಲ್ಲ ಎಂದು ಪ್ರತಿಕ್ರಿಯಿಸಿದರು.
15 ದಿನದಲ್ಲಿ 30 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷಗಿರಿ?: ಶೀಘ್ರದಲ್ಲೇ ಸಭೆ
ಒಂದಷ್ಟುಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದು ‘ಆಪರೇಷನ್’ಗೆ ಒಳಗಾಗಲಿದ್ದಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ನನ್ನ ಬಳಿ ಯಾರೂ ಮಾತನಾಡಿಲ್ಲ. ಅವರವರ ರಾಜಕೀಯ ಜೀವನ, ಭವಿಷ್ಯದ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ಬೂತುಗಳಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಾಗಬೇಕು ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಸಚಿವನಾಗಿ ನಾನು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.