ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿ.ಕೆ.ಶಿವಕುಮಾರ್‌

Published : Dec 26, 2025, 06:27 AM IST
DK Shivakumar

ಸಾರಾಂಶ

ನಾನು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಕೆಲಸವನ್ನೂ ಮಾಡಿದ್ದೇನೆ. ಕಾರ್ಯಕರ್ತನಾಗಿ, ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಪೋಸ್ಟರ್‌ ಅಂಟಿಸಿದ್ದೇನೆ. ಸಮಯ ಬಂದಾಗ ವೇದಿಕೆಯಲ್ಲಿ ಕೂತು, ಭಾಷಣ ಮಾಡಿಕೊಂಡು ಹೋಗಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಡಿ.26): ನಾನು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಕೆಲಸವನ್ನೂ ಮಾಡಿದ್ದೇನೆ. ಕಾರ್ಯಕರ್ತನಾಗಿ, ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಪೋಸ್ಟರ್‌ ಅಂಟಿಸಿದ್ದೇನೆ. ಸಮಯ ಬಂದಾಗ ವೇದಿಕೆಯಲ್ಲಿ ಕೂತು, ಭಾಷಣ ಮಾಡಿಕೊಂಡು ಹೋಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ನಾನು ಜೀವನಪೂರ್ತಿ ಕಾಂಗ್ರೆಸ್‌ ಕಾರ್ಯಕರ್ತ. ನಾನು ಪಕ್ಷದ ಕೆಲಸಗಾರ. ಕಾರ್ಯಕನಾಗಿದ್ದಾಗಷ್ಟೇ ಅಲ್ಲ ಪಕ್ಷದ ಅಧ್ಯಕ್ಷನಾದಾಗಲೂ ಬಾವುಟ ಕಟ್ಟಿದ್ದೇನೆ. ಪೋಸ್ಟರ್‌ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ.

ಪಕ್ಷಕ್ಕೆ ಏನೇನು ಬೇಕೋ ಅವೆಲ್ಲವನ್ನೂ ಮಾಡಿದ್ದೇನೆ. ಸಮಯ ಬಂದಾಗ ವೇದಿಕೆಯಲ್ಲಿ ಕೂತು, ಭಾಷಣ ಮಾಡಿ ಹೋಗುವ ಕೆಲಸ ಮಾಡಿಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಜಕೀಯವಾಗಿ ಯಾವುದೇ ಚರ್ಚೆಯನ್ನೂ ಮಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್‌ ನಾಯಕರು ಏನು ಹೇಳುತ್ತಾರೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಅದನ್ನು ಪಾಲಿಸುತ್ತೇವೆ ಎಂದು ತಿಳಿಸಿದರು.

2 ನದಿ ಜೋಡಣೆಯಲ್ಲಿ ಕನಿಷ್ಠ 40-45 ಟಿಎಂಸಿ ನೀರು ನಿಗದಿಗೆ ಡಿಕೆ ಮನವಿ: ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನೀಡಬೇಕು. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಆಗ್ರಹಿಸಿದ್ದಾರೆ. ನದಿ ಜೋಡಣೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಗೋದಾವರಿ ಹಾಗೂ ಕಾವೇರಿ, ಬೇಡ್ತಿ ಹಾಗೂ ವರದಾ ನದಿ ಜೋಡಣೆ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಗೋದಾವರಿ ಹಾಗೂ ಕಾವೇರಿ ನದಿ ಜೋಡಣೆ ಯೋಜನೆಯ ಮೊದಲ ಹಂತದಲ್ಲಿ 148 ಟಿಎಂಸಿ ನೀರನ್ನು ತಿರುಗಿಸಲಾಗುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ ನಿಗದಿ ಮಾಡಿರುವುದು 15.90 ಟಿಎಂಸಿ ನೀರು ಮಾತ್ರ. ನೀರನ್ನು ಯಾವ ಕಡೆ ನೀಡಬೇಕು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬ ಬೇಡಿಕೆಯನ್ನು ರಾಜ್ಯದ ಪರವಾಗಿ ಸಭೆಯ ಮುಂದಿಟ್ಟಿದ್ದೇವೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆಯನ್ನು ನಮ್ಮ ರಾಜ್ಯದೊಳಗೇ ಮಾಡಲಿದ್ದು, 18.50 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ಇದೆ. ಈ ಎರಡೂ ಯೋಜನೆಗಳಿಂದ ಕರ್ನಾಟಕಕ್ಕೆ ಒಟ್ಟು 34.40 ಟಿಎಂಸಿ ನೀರನ್ನು ನಿಗದಿ ಮಾಡಲಾಗಿದೆ. ಆದರೆ, ನಮಗೆ ಕನಿಷ್ಠ 40-45 ಟಿಎಂಸಿ ನೀರು ನಿಗದಿ ಮಾಡಲು ಮನವಿ ಮಾಡಿದ್ದೇವೆ. ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಎರಡು ತಿಂಗಳಲ್ಲಿ ಮೇಕೆದಾಟು ದಾಖಲೆ ಸಲ್ಲಿಕೆ

ಮೇಕೆದಾಟು ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಎರಡು ತಿಂಗಳಲ್ಲಿ ಸಲ್ಲಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವರ ಬಳಿ ತಿಳಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇನ್ನು, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಈ ಯೋಜನೆ ವಿಚಾರದಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕುವಂತೆ ಕೇಳಿದ್ದೇವೆ ಎಂದು ಹೇಳಿದರು. ಕೇಂದ್ರ ಸಚಿವರು ನನಗೆ ಮತ್ತೊಂದು ದಿನ ಭೇಟಿಗೆ ಸಮಯಾವಕಾಶ ನೀಡುವುದಾಗಿ ತಿಳಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಿಂದ ಹಿಡಿದು ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ವಿಚಾರವಾಗಿ ಚರ್ಚೆ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ: ಬಿ.ವೈ.ವಿಜಯೇಂದ್ರ ವಿಶ್ವಾಸ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’