ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’

Kannadaprabha News   | Kannada Prabha
Published : Dec 26, 2025, 05:40 AM IST
Rahul Gandhi

ಸಾರಾಂಶ

 ಫಾಕ್ಸ್‌ಕಾನ್‌ ಐಫೋನ್‌ ಘಟಕ 8 ತಿಂಗಳಲ್ಲಿ 30 ಸಾವಿರ ನೌಕರರ ನೇಮಿಸಿಕೊಂಡಿದೆ. ಇದು  ಕಾಂಗ್ರೆಸ್‌ ಸರ್ಕಾರದ ಶ್ರಮದ ಫಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೊಗಳಿದ್ದಾರೆ. ಆದರೆ ಇದು ಮೋದಿ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಶ್ರಮದ ಫಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿರುಗೇಟು ನೀಡಿದ್ದಾರೆ.

ನವದೆಹಲಿ :  ಕರ್ನಾಟಕದ ದೇವನಹಳ್ಳಿ ಬಳಿ ಫಾಕ್ಸ್‌ಕಾನ್‌ ಐಫೋನ್‌ ಘಟಕ ಕೇವಲ 8 ತಿಂಗಳಲ್ಲಿ 30 ಸಾವಿರ ನೌಕರರ ನೇಮಿಸಿಕೊಂಡಿದೆ. ಇದು ರಾಜ್ಯದ ಕಾಂಗ್ರೆಸ್‌ ಸರ್ಕಾರದ ಶ್ರಮದ ಫಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೊಗಳಿದ್ದಾರೆ. ಆದರೆ ಇದು ಮೋದಿ ಸರ್ಕಾರದ ಮೇಕ್‌ ಇನ್‌ ಇಂಡಿಯಾ ಶ್ರಮದ ಫಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿರುಗೇಟು ನೀಡಿದ್ದಾರೆ.

ಕರ್ನಾಟಕ ಫಾಕ್ಸ್‌ಕಾನ್‌ ಉದ್ಯೋಗ ಸೃಷ್ಟಿ ‘ಕೈ’ ಶ್ರಮದ ಫಲ: ರಾಗಾ

ನವದೆಹಲಿ: ಉದ್ಯೋಗ ಸೃಷ್ಟಿ, ಸಮಾನ ಅವಕಾಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊಸ ಪರಿವರ್ತನೆ ತಂದಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧೀ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕರ್ನಾಟಕದ ಸಾಧನೆ ಇತರೆ ರಾಜ್ಯಗಳಿಗೆ ಮಾದರಿ ಎಂದು ಬಣ್ಣಿಸಿದ್ದಾರೆ.

ಬೆಂಗಳೂರಿನ ಹೊರವಲಯದ ದೇವನಹಳ್ಳಿ ಬಳಿ ಫಾಕ್ಸ್‌ಕಾನ್‌ ಕಂಪನಿಯ ಐಫೋನ್‌ ಉತ್ಪಾದನಾ ಮತ್ತು ಜೋಡಣಾ ಘಟಕದ ಬಗ್ಗೆ ಪ್ರಸ್ತಾಪಿಸಿರುವ ರಾಗಾ ಈ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಫಾಕ್ಸ್‌ಕಾನ್‌ ಘಟಕದಲ್ಲಿ ಕೇವಲ 8 ತಿಂಗಳಲ್ಲಿ 30000 ಸಿಬ್ಬಂದಿ ನೇಮಕವಾಗಿದೆ. ಇದರಲ್ಲಿ ಬಹುತೇಕ ಮಹಿಳೆಯರು. ಈ ವೇಗ ಮತ್ತು ಗಾತ್ರದಲ್ಲಿ ಉತ್ಪಾದನೆಯ ಇಂಥದ್ದೊಂದು ವಾತಾವರಣ ಸೃಷ್ಟಿಯ ಮೂಲಕ ಕರ್ನಾಟಕ ಇತರರಿಗೆ ಮಾದರಿಯಾಗಿ ಹೊಮ್ಮಿದೆ. ಸಮಾನ ಅವಕಾಶ ಮತ್ತು ಗೌರವದ ಇಂಥ ಉದ್ಯೋಗ ಸೃಷ್ಟಿಯ ಭಾರತವನ್ನೇ ನಾವೀಗ ಸ್ಥಾಪಿಸಬೇಕಾಗಿದೆ ಎಂದು ಇದಕ್ಕೆ ಅವಕಾಶ ಕಲ್ಪಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಹೊಗಳಿದ್ದಾರೆ.

ಉದ್ಯೋಗ ಸೃಷ್ಟಿ ಮೋದಿ ಮೇಕ್‌ ಇನ್‌ ಇಂಡಿಯಾ ಶ್ರಮದ ಫಲ: ವೈಷ್ಣವ್‌

ನವದೆಹಲಿ: ಕರ್ನಾಟಕದ ಫಾಕ್ಸ್‌ಕಾನ್‌ ಘಟಕವು 8 ತಿಂಗಳಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಶ್ರಮದ ಫಲ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ತಿರುಗೇಟು ನೀಡಿದ್ದರೆ. ಇದು ಮೋದಿ ಸರ್ಕಾರದ ಶ್ರಮದ ಫಲ ಎಂದಿದ್ದಾರೆ.

ಟ್ವೀಟ್ ಮಾಡಿರುವ ವೈಷ್ಣವ್‌,‘ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಮೆಚ್ಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನೀವು ಗಮನಿಸಿದಂತೆ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ನಾವೀಗ ಉತ್ಪಾದನೆ ಆಧರಿತ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಫಾಕ್ಸ್‌ಕಾನ್‌ ಘಟಕ:

ದೇವನಹಳ್ಳಿ ಬಳಿಯ ಫಾಕ್ಸ್‌ಕಾನ್ ಘಟಕ 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಕಳೆದ ಏಪ್ರಿಲ್‌- ಮೇ ತಿಂಗಳಲ್ಲಿ ಐಫೋನ್‌ 16 ಮಾದರಿಯ ಪ್ರಾಯೋಗಿಕ ಪರೀಕ್ಷೆ ಆರಂಭಿಸಿತ್ತು. ಇದೀಗ ಅಲ್ಲಿ ಐಫೋನ್‌ 17 ಪ್ರೋ ಮ್ಯಾಕ್ಸ್‌ ಜೋಡಣೆ ಕೆಲಸ ಕೂಡಾ ಆರಂಭವಾಗಿದೆ. ಕೇವಲ 8 ತಿಂಗಳಲ್ಲಿ ಇಲ್ಲಿ 30000 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಶೇ.80ರಷ್ಟು ಮಹಿಳೆಯರು. ಇಲ್ಲಿನ ಸಿಬ್ಬಂದಿಯ ಸರಾಸರಿ ವಯೋಮಾನ 19-24 ವರ್ಷ. ಭವಿಷ್ಯದಲ್ಲಿ ಇಲ್ಲಿ 50000 ಸಿಬ್ಬಂದಿ ಗುರಿ ಇದೆ. ಆಗ ಇದು ದೇಶದ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಂಪನಿಯೊಂದರಲ್ಲಿ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಕೆಲಸ ಮಾಡುತ್ತಿರುವ ಘಟಕ ಎಂಬ ದಾಖಲೆಗೂ ಪಾತ್ರವಾಗಲಿದೆ.

ಫಾಕ್ಸ್‌ಕಾನ್ ಈ ಘಟಕಕ್ಕೆ 20000 ಕೋಟಿ ರು. ಹೂಡಿಕೆ ಮಾಡುತ್ತಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉದ್ಯೋಗ ಸೃಷ್ಟಿ ಮತ್ತು ಉತ್ಪಾದನೆಯಲ್ಲಿ ಭಾರತದಲ್ಲಿನ ತೈವಾನ್‌ ಮೂಲದ ಕಂಪನಿಯ ಅತಿದೊಡ್ಡ ಘಟಕವಾಗಿ ಹೊರಹೊಮ್ಮಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಸಲಹೆ ಕೊಟ್ಟರೆ ದುರಹಂಕಾರದ ಮಾತು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ