ಸಿದ್ದು 5 ವರ್ಷ ಸಿಎಂ ಆಗಿರ್ತಾರಾ?: ಡಿ.ಕೆ.ಶಿವಕುಮಾರ್‌ ಹೇಳಿದ್ದಿಷ್ಟು

By Kannadaprabha NewsFirst Published Aug 21, 2024, 4:29 AM IST
Highlights

ಸಿದ್ದರಾಮಯ್ಯ ಯಾಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು?. ಮುಡಾ, ಸಿದ್ದು ಪತ್ನಿ ಪಾರ್ವತಿ ಅವರಿಂದ ಭೂಮಿ ಪಡೆದಿದ್ದು, ಅದಕ್ಕೆ ಪ್ರತಿಯಾಗಿ ಶೇ.50ರಷ್ಟು ಅಭಿವೃದ್ಧಿಪಡಿಸಿದ ನಿವೇಶನವನ್ನು ಅವರಿಗೆ ನೀಡಿದೆ. ಈ ಎಲ್ಲಾ ಪ್ರಕ್ರಿಯೆ ಬಿಜೆಪಿ ಸರ್ಕಾರದಲ್ಲೇ ಆಗಿದ್ದು. ಹೀಗಾಗಿ, ಸಿಎಂ ಏನೂ ತಪ್ಪು ಮಾಡಿಲ್ಲ. ಹುರುಳಿಲ್ಲದ ಆರೋಪಗಳಿಗೆ ಸಿಎಂ ಆಗಲಿ, ಕಾಂಗ್ರೆಸ್ಸಾಗಲಿ ಏಕೆ ಹೆದರಬೇಕು ಹೇಳಿ? ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಕಲಬುರಗಿ(ಆ.21): ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಹೈಕಮಾಂಡ್‌ ಸೇರಿ ನಾವೆಲ್ಲರೂ ಗಟ್ಟಿಯಾಗಿ ನಿಂತಿದ್ದೀವಿ ಎಂದು ಪುನರುಚ್ಚರಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮುಂದಿನ 10 ವರ್ಷ ನಮ್ದೇ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು 5 ವರ್ಷ ಪೂರ್ಣಾವಧಿ ಸಿಎಂ ಆಗಿರ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ನೇರ ಉತ್ತರ ನೀಡದೆ, ಒಗಟಿನ ಉತ್ತರ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮುಡಾ ಹಗರಣದ ತನಿಖೆಗೆ ಮುಖ್ಯಮಂತ್ರಿಯವರೇ ನ್ಯಾಯಾಂಗ ಸಮಿತಿ ರಚಿಸಿ ಆದೇಶ ನೀಡಿದ್ದಾರೆ. ನಲವತ್ತು ವರ್ಷ ರಾಜಕಾರಣ ಮಾಡಿಕೊಂಡು ಬಂದಿರುವ ಅವರು ಹೆದರುವವರಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ. ಅವರು ತಪ್ಪೇ ಮಾಡಿಲ್ಲ, ಹೀಗಾಗಿ, ಯಾವ ತನಿಖೆಗೂ ಅವರು ಹೆದರೋಲ್ಲ. ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲರೂ ಅವರ ಜೊತೆಗೆ ನಿಂತಿದ್ದೇವೆ ಎಂದರು.

Latest Videos

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿಸಲು ಸಂಚು: ಸಚಿವ ಪ್ರಿಯಾಂಕ್ ಖರ್ಗೆ

ಸಿದ್ದರಾಮಯ್ಯ ಯಾಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು?.

ಮುಡಾ, ಸಿದ್ದು ಪತ್ನಿ ಪಾರ್ವತಿ ಅವರಿಂದ ಭೂಮಿ ಪಡೆದಿದ್ದು, ಅದಕ್ಕೆ ಪ್ರತಿಯಾಗಿ ಶೇ.50ರಷ್ಟು ಅಭಿವೃದ್ಧಿಪಡಿಸಿದ ನಿವೇಶನವನ್ನು ಅವರಿಗೆ ನೀಡಿದೆ. ಈ ಎಲ್ಲಾ ಪ್ರಕ್ರಿಯೆ ಬಿಜೆಪಿ ಸರ್ಕಾರದಲ್ಲೇ ಆಗಿದ್ದು. ಹೀಗಾಗಿ, ಸಿಎಂ ಏನೂ ತಪ್ಪು ಮಾಡಿಲ್ಲ. ಹುರುಳಿಲ್ಲದ ಆರೋಪಗಳಿಗೆ ಸಿಎಂ ಆಗಲಿ, ಕಾಂಗ್ರೆಸ್ಸಾಗಲಿ ಏಕೆ ಹೆದರಬೇಕು ಹೇಳಿ? ಎಂದರು.

2011ರಲ್ಲಿ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಿಸಲಾಯಿತು, ಈಗ ಅದೇ ಸನ್ನಿವೇಶ ಸೃಷ್ಟಿಯಾಗಿದೆ ಎನ್ನುವ ಬಿಜೆಪಿಯ ಸಾಮಾಜಿಕ ಜಾಲತಾಣದ ಪೋಸ್ಟಿನ ಬಗ್ಗೆ ಕೇಳಿದಾಗ, ಅವರನ್ನು ಜೈಲಿಗೆ ಹಾಕಿಸಿದ್ದು ಕಾಂಗ್ರೆಸ್ ಅಲ್ಲ, ಇದೇ ದೇವೇಗೌಡರು, ಕುಮಾರಸ್ವಾಮಿ, ನಾವಲ್ಲ ಎಂದರು.

ಸಿದ್ದು 5 ವರ್ಷ ಸಿಎಂ ಆಗಿರ್ತಾರಾ?

ಇದೇ ವೇಳೆ, ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿ ಆಗಿರ್ತಾರಾ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಕೆಲ ಕ್ಷಣ ಸುಮ್ಮನಾದರು. ಬಳಿಕ, ಅವರ ಜೊತೆಗೆ ಒಟ್ಟಾಗಿ ನಿಂತಿದ್ದೀವಿ ಎಂಬ ಪದವನ್ನು 2-3 ಬಾರಿ ಹೇಳಿದರು. ಆದರೆ, ಸಿಎಂ ಅವಧಿ ವಿಚಾರದಲ್ಲಿ ಏನನ್ನೂ ಹೇಳಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಮರಳಿ, ಮುಖ್ಯಮಂತ್ರಿ ಆಗೋದಾದ್ರೆ ಬೆಂಬಲ ನೀಡುತ್ತೀರಾ? ಎಂಬ ಇನ್ನೊಂದು ಪ್ರಶ್ನೆಗೆ, ಕೆಲಕಾಲ ಮೌನವಹಿಸಿದ ಡಿಕೆಶಿವಕುಮಾರ್, ನಂತರ, ಪ್ರಶ್ನೆ ಕೇಳಿದ ವರದಿಗಾರನತ್ತ ನೋಡಿ ನಸುನಗೆ ಬೀರಿದರು

ತಪ್ಪು ಮಾಡದಿದ್ದರೆ ಸಿಎಂ ಏಕೆ ಹೆದರಬೇಕು ಎನ್ನುವ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಹೆದರಿದ್ದಾರೆ?. ಶೆಟ್ಟರ್ ಅವರಿಗೆ ಹೆದರಿಕೆ ಇರಬೇಕು. ನಾವು ಈ ನೆಲದ ಕಾನೂನಿಗೆ ಗೌರವ ನೀಡುತ್ತೇವೆ ಎಂದರು.
ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರನ್ನು ರಾಜ್ಯಪಾಲರ ಹುದ್ದೆಗೆ ಕೂರಿಸಿರುವುದು ಸಂವಿಧಾನವೇ ಹೊರತು ಜಾತಿಯಲ್ಲ ಎಂದರು.

ಸಿಟಿ ರವಿ ಸ್ವಲ್ಪ ದಿನದಲ್ಲೇ ಬೆಳಗಾವಿ ಗ್ಯಾಂಗ್ ಸೇರ್ತಾರೆ: ಪ್ರಿಯಾಂಕ್ ಖರ್ಗೆ

ರಾಜ್ಯಪಾಲರನ್ನು ನಿಂದಿಸಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತರಾಗಿ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎನ್ನುವ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಕಲಬುರಗಿಯಲ್ಲಿ ನಿರ್ಮಾಣವಾಗಿರುವ ಹೊಸ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬಂದು ಸೇರಿಸಲು ಹೇಳಿ ಎಂದು ಹೇಳಿದರು.

ಸಿಎಂ ದೆಹಲಿ ಭೇಟಿ ಬಗ್ಗೆ ಕೇಳಿದಾಗ, ಹೈಕಮಾಂಡ್‌ಗೆ ವಾಸ್ತವಾಂಶ ತಿಳಿಸಬೇಕು ಎಂದು ಇಬ್ಬರೂ ಮಾತನಾಡಿಕೊಂಡಿದ್ದೆವು. ಅದಕ್ಕೆ ದೆಹಲಿಗೆ ಇಬ್ಬರೂ ತೆರಳೋಣ ಎಂದು ಮಾತುಕತೆ ನಡೆಸಿದ್ದೇವೆ ಎಂದರು.

click me!