ವಾಲ್ಮೀಕಿ ನಿಗಮ ಹಗರಣ ಸೇರಿದಂತೆ ಸರ್ಕಾರದ ಮೇಲಿನ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಕಾಂಗ್ರೆಸ್‌ನ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಬೆಂಗಳೂರು (ಜು.20): ವಾಲ್ಮೀಕಿ ನಿಗಮ ಹಗರಣ ಸೇರಿದಂತೆ ಸರ್ಕಾರದ ಮೇಲಿನ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಕಾಂಗ್ರೆಸ್‌ನ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರಿಗೆ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಭೆಯಲ್ಲಿ ಪಾಲ್ಗೊಂಡು, ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಕುರಿತು ಸಂದೇಶ ನೀಡಿದರು.
ಸಭೆಯಲ್ಲಿ ಪ್ರಮುಖವಾಗಿ ಚುನಾವಣೆ ಹಾಗೂ ಪಕ್ಷ ಸಂಘಟನೆ ಕುರಿತಂತೆ ಎಲ್ಲರೂ ಗಮನಹರಿಸುವಂತೆ ತಿಳಿಸಿದ ಅವರು, ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಬಗರ್‌ಹುಕುಂ ಸಮಿತಿ ಸೇರಿದಂತೆ ತಾಲೂಕು ಮಟ್ಟದ ಸಮಿತಿಗಳಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಜತೆಗೆ ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದವರನ್ನು ಬದಲಿಸುವ ಕುರಿತಂತೆ ಚರ್ಚೆ ನಡೆಯುತ್ತಿದ್ದು, ಆ ಬಗ್ಗೆ ಸೂಕ್ತ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಮಣಿಕಂಠ ರಾಠೋಡ್ ಬಂಧನ: ಪೊಲೀಸ್, ಕಾಂಗ್ರೆಸ್ ಚೆಳಕ: ಹಳ್ಳ ಹಿಡಿಯುತ್ತಿರುವ ತನಿಖೆಗಳು
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಸದೃಢಗೊಳಿಸಲು ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಹಲವು ವರ್ಷಗಳಿಂದ ದುಡಿದಿದ್ದಾರೆ. ಅವರಲ್ಲಿ ಅನೇಕರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಹಾಗೂ ಕೆಲವರಿಗೆ ಪಕ್ಷದಲ್ಲಿ ಬಡ್ತಿ ಕೊಡಬೇಕಿದೆ. ಜತೆಗೆ ಪಕ್ಷ ಸಂಘಟನೆಗೆ ಏನೆಲ್ಲ ಕಾರ್ಯ ಮಾಡಬೇಕು ಎಂಬ ಬಗ್ಗೆ ಸೂಚನೆಗಳನ್ನೂ ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಮಾಡಬೇಕಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಭೆಯಲ್ಲಿ ತಿಳಿಸಿದ್ದೇನೆ ಎಂದರು.
ಶಾಸಕರ ಮನೆಯಲ್ಲಿ ಸಭೆ ಮಾಡಬೇಡಿ: ಪ್ರತಿ ಜಿಲ್ಲೆಯಲ್ಲೂ ಕಡ್ಡಾಯವಾಗಿ ಪಕ್ಷದ ಸ್ವಂತ ಕಟ್ಟಡವನ್ನು ಹೊಂದಿರಬೇಕು. ಎಲ್ಲಿ ಸ್ವಂತ ನಿವೇಶನ ಮತ್ತು ಕಟ್ಟಡವಿಲ್ಲವೋ ಅಲ್ಲಿ ಕಡ್ಡಾಯವಾಗಿ ಸ್ವಂತ ಕಟ್ಟಡ ಹೊಂದಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧ್ಯಕ್ಷರಿಗೆ ತಿಳಿಸಲಾಗಿದೆ. ಹಾಗೆಯೇ, ಬ್ಲಾಕ್ ಮಟ್ಟದಲ್ಲಿ ಬಾಡಿಗೆ ಕಟ್ಟಡಗಳಾದರೂ ಪರವಾಗಿಲ್ಲ ಪಕ್ಷದ ಕಚೇರಿ ತೆರೆಯಬೇಕು. ಯಾವುದೇ ಶಾಸಕರ ಮನೆಯಲ್ಲೂ ಪಕ್ಷದ ಸಭೆ ನಡೆಸಬಾರದು ಎಂದು ಸೂಚಿಸಲಾಗಿದೆ. ಪಕ್ಷದ ಕಚೇರಿ ಚಿಕ್ಕದಿದ್ದು, ಸಭೆ ಮಾಡಲಾಗದಿದ್ದರೆ ಕಲ್ಯಾಣ ಮಂಟಪಗಳಲ್ಲಿ ಸಭೆ ಮಾಡಬೇಕು ಎಂದು ಹೇಳಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಅಧಿವೇಶನದ ನಂತರ ಕಾರ್ಯಕರ್ತರ ಭೇಟಿ: ಪಕ್ಷ ಸಂಘಟನೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಸಕ್ರಿಯವಾಗಿಲ್ಲದ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೂ ಚಿಂತನೆ ಮಾಡಿದ್ದೇವೆ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚಿಸಿದ್ದೇವೆ. ಹಾಗೆಯೇ, ಸಚಿವರು ಕಾರ್ಯಕರ್ತರ ಸಮಸ್ಯೆ ಆಲಿಸಿ ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಅಧಿವೇಶನ ಮುಗಿದ ನಂತರ ಪ್ರತಿದಿನ ಒಬ್ಬ ಸಚಿವರು ಕಾರ್ಯಕರ್ತರನ್ನು ಭೇಟಿಯಾಗಲು ಸಮಯ ನಿಗದಿ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ, ಕಾರ್ಯಾಧ್ಯಕ್ಷರಾದ ಡಾ. ಜಿ.ಸಿ.ಚಂದ್ರಶೇಖರ್, ತನ್ವೀರ್ ಸೇಠ್, ಮಂಜುನಾಥ ಭಂಡಾರಿ, ವಿನಯ್ ಕುಲಕರ್ಣಿ, ವಸಂತಕುಮಾರ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಪ್ರಮುಖರಾದ ಮಂಜುಳಾ ನಾಯ್ಡು ಇತರರಿದ್ದರು.
ಹಗರಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ: ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳ ಬಗ್ಗೆ ಯಾರೂ ತಲೆ ತಗ್ಗಿಸಬೇಕಾಗಿಲ್ಲ. ಸರ್ಕಾರದಿಂದ ಹಗರಣ ಆಗಿದೆ ಎಂದು ಚಿಂತಿಸುವ ಅವಶ್ಯಕತೆಯಿಲ್ಲ. ಹಗರಣಗಳಲ್ಲಿ ನಮ್ಮ ಶಾಸಕರ ಪಾತ್ರವಿಲ್ಲ. ಆ ಬಗ್ಗೆ ನನ್ನ ಬಳಿ ಆಣೆ-ಪ್ರಮಾಣ ಮಾಡಿ ಅವರು ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸಭೆಯಲ್ಲಿ ಧೈರ್ಯ ತುಂಬಿದರು.
ಮಂತ್ರಾಲಯಕ್ಕೆ ಹೋಗುವೆ, ರಾಯರ ಆಶೀರ್ವಾದ ಪಡೆಯುತ್ತೇನೆ: ಸಿದ್ದರಾಮಯ್ಯ
ನಿಗಮಗಳಿಗೆ ಸದಸ್ಯರಾಗಲು 8000 ಅರ್ಜಿ: ನಿಗಮ-ಮಂಡಳಿ ಸದಸ್ಯರ ನೇಮಕಕ್ಕೆ ರಚಿಸಲಾಗಿರುವ ಡಾ.ಜಿ.ಪರಮೇಶ್ವರ್ ಸಮಿತಿ ತನ್ನ ಕೆಲಸ ಮಾಡುತ್ತಿದೆ. ಆದರೆ, ಸದಸ್ಯರಾಗಲು 7000-8000 ಅರ್ಜಿಗಳು ಸಲ್ಲಿಕೆಯಾಗಿವೆ. ಗ್ರಾಮ ಮಟ್ಟದಲ್ಲಿ ಕೆಲ ಕಾರ್ಯಕರ್ತರು ಪ್ರಬಲರಾಗಿದ್ದಾರೆ. ಅಂತಹವರನ್ನು ಗುರುತಿಸಿ ನಾಮನಿರ್ದೇಶನ ಮಾಡುವ ಬಗ್ಗೆ ಸಮಿತಿ ನಿರ್ಧರಿಸಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.