ದಾವಣಗೆರೆ ದಕ್ಷಿಣ ಕೈ ಅಭ್ಯರ್ಥಿ ಸಮರ್ಥ್ ಸಾಮರ್ಥ್ಯಕ್ಕೆ ಸಾಥ್ ನೀಡಿದ ಸಿಎಂ, ಡಿಸಿಎಂ; ಅಧಿಕೃತ ನಾಮಪತ್ರ ಸಲ್ಲಿಕೆ!

Published : Mar 23, 2026, 03:14 PM IST
Samarth Shamanur Nomination File

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ.

ದಾವಣಗೆರೆ (ಮಾ.23): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ಈಗ ಹೈವೋಲ್ಟೇಜ್ ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಶಾಮನೂರು ಅವರು ಇಂದು ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಾವಣಗೆರೆಗೆ ಆಗಮಿಸಿ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದರು.

ಕಾಂಗ್ರೆಸ್ ಭದ್ರಕೋಟೆ ಎಂದ ಸಿಎಂ ಸಿದ್ದರಾಮಯ್ಯ:

ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಾಮನೂರು ಕುಟುಂಬದ ರಾಜಕೀಯ ಇತಿಹಾಸವನ್ನು ಸ್ಮರಿಸಿದರು. "ದಾವಣಗೆರೆ ದಕ್ಷಿಣ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆ. ಶಾಮನೂರು ಶಿವಶಂಕರಪ್ಪನವರು ಆರು ಬಾರಿ ಈ ಭಾಗದ ಶಾಸಕರಾಗಿ ಜನಸೇವೆ ಮಾಡಿದ್ದಾರೆ. ಅವರ ಮಗ ಮಲ್ಲಿಕಾರ್ಜುನ್ ಎರಡು ಬಾರಿ ಶಾಸಕರಾಗಿದ್ದಾರೆ. ಈ ಅಭಿವೃದ್ಧಿ ಪರಂಪರೆಯನ್ನು ಮುಂದುವರಿಸಲು ಇಂದು ಸಮರ್ಥ್ ನಾಮಪತ್ರ ಸಲ್ಲಿಸಿದ್ದಾರೆ," ಎಂದರು.

ಮುಂದುವರಿದು ಮಾತನಾಡಿದ ಅವರು, "ಕಾಂಗ್ರೆಸ್ ಎಲ್ಲಾ ಧರ್ಮ ಮತ್ತು ವರ್ಗಗಳನ್ನು ಒಳಗೊಂಡಿರುವ ಪಕ್ಷ. ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಮತ್ತು ಸಾಮಾನ್ಯ ಜನರ ಭರವಸೆಯನ್ನು ಈಡೇರಿಸಿದ್ದೇವೆ. ಈ ಹಿಂದಿನ ಉಪಚುನಾವಣೆಗಳಲ್ಲಿ ಜಯಭೇರಿ ಬಾರಿಸಿದಂತೆ, ಈ ಬಾರಿಯೂ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವ ನಾಯಕತ್ವ ಮತ್ತು ಬಂಡಾಯ ಶಮನಕ್ಕೆ ಡಿಕೆಶಿ ಮಾಸ್ಟರ್ ಪ್ಲಾನ್:

ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಸಮರ್ಥ್ ಶಾಮನೂರು ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ಸೇವಾ ಮನೋಭಾವವನ್ನು ಶ್ಲಾಘಿಸಿದರು. "ಸಮರ್ಥ್ ಅವರು ವಿದೇಶದಿಂದ ಬಂದು ಜನರ ಸೇವೆ ಮಾಡಲು ರಾಜಕೀಯಕ್ಕೆ ಇಳಿದಿದ್ದಾರೆ. ಅವರು ಸಮರ್ಥವಾಗಿ ಈ ಕ್ಷೇತ್ರವನ್ನು ಮುನ್ನಡೆಸಲಿದ್ದಾರೆ. ಕಾರ್ಯಕರ್ತರು ಅವರನ್ನು ಅತ್ಯಧಿಕ ಮತಗಳಿಂದ ವಿಧಾನಸೌಧಕ್ಕೆ ಕಳುಹಿಸುವುದು ಖಚಿತ," ಎಂದರು.

ಇದೇ ವೇಳೆ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಅಲ್ಪಸಂಖ್ಯಾತ ನಾಯಕರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, "ನಾವು ಅತ್ಯಂತ ಎಚ್ಚರಿಕೆಯಿಂದ ಲೆಕ್ಕಾಚಾರ ಮಾಡಿ ಟಿಕೆಟ್ ನೀಡಿದ್ದೇವೆ. ಅಲ್ಪಸಂಖ್ಯಾತ ನಾಯಕರ ಜೊತೆ ನಾವು ಮಾತನಾಡುತ್ತೇವೆ, ಅವರಿಗೆ ಮುಂದೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತೇವೆ. ರಾಜಕೀಯದಲ್ಲಿ ಆಕಾಂಕ್ಷಿಗಳು ಟಿಕೆಟ್ ಕೇಳುವುದು ತಪ್ಪಲ್ಲ, ಆದರೆ ಅಂತಿಮವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಾವು ಚುನಾವಣೆ ಎದುರಿಸುತ್ತೇವೆ. ದಾವಣಗೆರೆಯನ್ನು ಎಜುಕೇಶನ್ ಹಬ್ ಆಗಿ ಮುಂದುವರಿಸಲು ನಮ್ಮ ಸರ್ಕಾರ ವಿಶೇಷ ಕೊಡುಗೆ ನೀಡಲಿದೆ," ಎಂದು ಭರವಸೆ ನೀಡಿದರು.

ಬಿಜೆಪಿಗೆ ಆಘಾತ:

ಬಿಜೆಪಿಯ ಹಲವು ಕಾರ್ಯಕರ್ತರು ನಿನ್ನೆ ರಾತ್ರಿ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ ಡಿಸಿಎಂ, "ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ, ನಮ್ಮಲ್ಲಿ ಗೊಂದಲಗಳಿಲ್ಲ. ಅಭಿವೃದ್ಧಿಯೇ ನಮ್ಮ ಮಂತ್ರ" ಎಂದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಪಕ್ಷದ ಹಿರಿಯ ಮುಖಂಡರು ಈ ವೇಳೆ ಉಪಸ್ಥಿತರಿದ್ದು, ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಕಾರುಬಾರು!
ಹಬ್ಬದ ದಿನವೇ ಮಸೀದಿಯಿಂದ ಪ್ರಧಾನಿಯನ್ನು ಉಗಿದು ಹೊರದಬ್ಬಿದರು: Video Viral