
ನವದೆಹಲಿ (ಜ.23): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ನಂತರ ಜೂನ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಪಕ್ಷದ ಅತ್ಯುನ್ನತ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ಈ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಪಕ್ಷದ ಮಧ್ಯಂತರ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಶುಕ್ರವಾರ ಸಿಡಬ್ಲ್ಯುಸಿ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ‘ಜೂನ್‌ನಲ್ಲಿ ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕವಾಗಲಿದೆ. ಆಂತರಿಕ ಚುನಾವಣೆ ಕುರಿತು ಸೋನಿಯಾ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಆಧರಿಸಿ ದಿನಾಂಕದಲ್ಲಿ ಸಣ್ಣಪುಟ್ಟಬದಲಾವಣೆ ಆಗಬಹುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.
ರಾಷ್ಟ್ರೀಯತೆಯ ಸರ್ಟಿಫಿಕೇಟ್ ಹಂಚುವವರ ಮುಖವಾಡ ಕಳಚಿದೆ: ಸೋನಿಯಾ ಕಿಡಿ! ...
ಬಹುತೇಕ ಈ ಚುನಾವಣೆ ಹಾಗೂ ಎಐಸಿಸಿ ಅಧಿವೇಶನ ಮೇ 29ರಂದು ನಡೆಯುವ ಸಾಧ್ಯತೆಯಿದೆ. ಏಕೆಂದರೆ ಚುನಾವಣಾ ಸಮಿತಿ ಇದೇ ದಿನಾಂಕದ ಪ್ರಸ್ತಾಪ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ಅಂತಿಮ ದಿನಾಂಕವನ್ನು ಸೋನಿಯಾ ಗಾಂಧಿ ನಿರ್ಧರಿಸಲಿದ್ದಾರೆ.
ನಾಯಕರ ನಡುವೆ ಘರ್ಷಣೆ:
ಸಿಡಬ್ಲ್ಯುಸಿ ಸಭೆಯಲ್ಲಿ ಗಾಂಧಿ ಕುಟುಂಬಕ್ಕೆ ನಿಷ್ಠರಾದ ಅಶೋಕ್ ಗೆಹ್ಲೋಟ್, ಅಮರೀಂದರ್ ಸಿಂಗ್, ಎ.ಕೆ. ಆ್ಯಂಟನಿ, ಊಮ್ಮನ್ ಚಾಂಡಿ ಮುಂತಾದವರ ಬಣ ಹಾಗೂ ಶೀಘ್ರದಲ್ಲೇ ಚುನಾವಣೆ ನಡೆಸಿ ಪೂರ್ಣಾವಧಿ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಬಹಿರಂಗ ಪತ್ರ ಬರೆಯುವ ಮೂಲಕ ಗಾಂಧಿ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಗುಲಾಂ ನಬಿ ಆಜಾದ್, ಪಿ.ಚಿದಂಬರಂ, ಕಪಿಲ್ ಸಿಬಲ್, ಆನಂದ ಶರ್ಮಾ ಮುಂತಾದ 23 ನಾಯಕರ ಬಣದ ನಡುವೆ ಮತ್ತೆ ಘರ್ಷಣೆ ನಡೆಯಿತು. ಈ ವೇಳೆ ತಾಳ್ಮೆ ಕಳೆದುಕೊಂಡ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ‘ದಯವಿಟ್ಟು ಒಂದು ಸಲ ಇದನ್ನೆಲ್ಲ ಮುಗಿಸಿ ಮುಂದೆ ಹೋಗೋಣ’ ಎಂದು ಸಿಡಿಮಿಡಿ ಮಾಡಿದರು ಎಂದು ಮೂಲಗಳು ಹೇಳಿವೆ.
'ಕಾಂಗ್ರೆಸ್ ಎಂದಿಗೂ ಭಾವನಾತ್ಮಕ ರಾಜಕೀಯ ಮಾಡಿಲ್ಲ' ...
ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಮೇ 29ಕ್ಕೆ ಸಾಂಸ್ಥಿಕ ಚುನಾವಣೆ ನಡೆಸಬೇಕೆಂದು ಸಿಡಬ್ಲ್ಯುಸಿ ಸಭೆಗೆ ಶಿಫಾರಸು ಮಾಡಿತು. ಇದಕ್ಕೆ ಗಾಂಧಿ ಕುಟುಂಬದ ವಿರೋಧಿ ಬಣ ವಿರೋಧ ವ್ಯಕ್ತಪಡಿಸಿ ಶೀಘ್ರದಲ್ಲೇ ಚುನಾವಣೆ ನಡೆಸಲು ಕೋರಿತು. ಆಗ, ‘ನಮಗೆ ಪಂಚರಾಜ್ಯ ಚುನಾವಣೆ ಮುಖ್ಯವೋ, ಆಂತರಿಕ ಚುನಾವಣೆ ಮುಖ್ಯವೋ’ ಎಂದು ಗಾಂಧಿ ಕುಟುಂಬದ ನಿಷ್ಠ ಬಣ ಆಕ್ಷೇಪಿಸಿತು. ಕೊನೆಗೆ ಪಂಚರಾಜ್ಯ ಚುನಾವಣೆ ನಂತರವೇ ಎಐಸಿಸಿ ಅಧಿವೇಶನ ನಡೆಸುವ ಮತ್ತು ಎಐಸಿಸಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬರಲಾಯಿತು.
ಲೋಕಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು 2019ರ ಆಗಸ್ಟ್‌ನಲ್ಲಿ ರಾಹುಲ್ ಗಾಂಧಿ ಅವರು ಅಧ್ಯಕ್ಷಗಿರಿಗೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಸೋನಿಯಾ ಗಾಂಧಿ ಅವರೇ ಮಧ್ಯಂತರ ಅಧ್ಯಕ್ಷೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.