10 ದಿನ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ

Kannadaprabha News   | Kannada Prabha
Published : Dec 20, 2025, 05:52 AM IST
Belagavi session

ಸಾರಾಂಶ

ಗೃಹಲಕ್ಷ್ಮಿ ಬಾಕಿ, ದ್ವೇಷ ಭಾಷಣ ವಿಧೇಯಕದ ವಿಚಾರವಾಗಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದ 10 ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಶುಕ್ರವಾರ ಸಂಪನ್ನವಾಗಿದ್ದು, ಉಭಯ ಸದನಗಳ ಕಲಾಪವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಯಿತು.

ಸುವರ್ಣ ವಿಧಾನಸೌಧ : ಗೃಹಲಕ್ಷ್ಮಿ ಬಾಕಿ, ದ್ವೇಷ ಭಾಷಣ ವಿಧೇಯಕದ ವಿಚಾರವಾಗಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದ 10 ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಶುಕ್ರವಾರ ಸಂಪನ್ನವಾಗಿದ್ದು, ಉಭಯ ಸದನಗಳ ಕಲಾಪವನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಯಿತು.

23 ವಿಧೇಯಕಗಳು ಈ ಅಧಿವೇಶನದಲ್ಲಿ ಅಂಗೀಕಾರ

ದ್ವೇಷ ಭಾಷಣ, ಸಾಮಾಜಿಕ ಬಹಿಷ್ಕಾರ ನಿಷೇಧ ಸೇರಿ ಬರೋಬ್ಬರಿ 23 ವಿಧೇಯಕಗಳು ಈ ಅಧಿವೇಶನದಲ್ಲಿ ಅಂಗೀಕಾರವಾದವು. ದ್ವೇಷ ಭಾಷಣ ಮಸೂದೆ ಸದನದಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿದ್ದಷ್ಟೇ ಅಲ್ಲದೆ, ಪ್ರತಿಪಕ್ಷಗಳ ವಿರೋಧದ ನಡುವೆಯೇ ಅನುಮೋದನೆ ಪಡೆಯಿತು. ಪ್ರತಿಪಕ್ಷಗಳ ಸದಸ್ಯರು ವಿಧೇಯಕದ ಪ್ರತಿಗಳನ್ನು ಹರಿದು ಎಸೆಯವಂಥ ಘಟನೆಗೂ ಸಾಕ್ಷಿಯಾಯಿತು.

ಇದೇ ಮೊದಲ ಬಾರಿಗೆ ಸದನ ಪ್ರಾರಂಭವಾಗಿ 2ನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಶುರುವಾಗಿದ್ದು ವಿಶೇಷ. ಉ.ಕ. ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಬರೋಬ್ಬರಿ 39 ಸದಸ್ಯರು 17.02 ಗಂಟೆಗಳ ಕಾಲ ಚರ್ಚೆ ಮಾಡಿದರೆ, ಪರಿಷತನಲ್ಲಿ 12 ಜನ ಸದಸ್ಯರು 5 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ, ಭೀಮಾ ನದಿ ಹೆಚ್ಚುವರಿಯಾಗಿ ಪಡೆಯಲು ಮಹಾರಾಷ್ಟ್ರದವರು ನಿರ್ಮಿಸಿಕೊಂಡಿರುವ ಅಕ್ರಮ ಸುರಂಗ ಮಾರ್ಗ, ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ಬೆಂಬಲ ಬೆಲೆ ನೀಡುವುದು, ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗೆ ಪರಿಹಾರ ಸೇರಿ ಹತ್ತು ಹಲವು ವಿಷಯಗಳ ಕುರಿತು ಸದಸ್ಯರು ಪಕ್ಷಾತೀತವಾಗಿ ಬೆಳಕು ಚೆಲ್ಲಿದರು.

ಇದೇ ವೇಳೆ ಪ್ರತಿವರ್ಷ ಪ್ರಸ್ತಾಪಿಸಿದ ವಿಷಯ, ಸಮಸ್ಯೆಗಳ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆದರೆ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಗುತ್ತಿಲ್ಲ. ಸದನ ನಡೆಸುವುದೇಕೆ? ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಯಾವಾಗ? ಎಂದು ಸದಸ್ಯರು ಪ್ರಶ್ನಿಸಿದ್ದಕ್ಕೆ ಉತ್ತರ ಮಾತ್ರ ಸಿಗಲಿಲ್ಲ.

ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದ ಮುಖ್ಯಮಂತ್ರಿ

ಈ ನಡುವೆ ಉಭಯ ಸದನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿಧಾನಸಭೆಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಹಾಗೂ ವಿಧಾನ ಪರಿಷತ್ತಿನಲ್ಲಿ ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ಉತ್ತರ ನೀಡುವ ಮೂಲಕ ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಜತೆಗೆ ಉತ್ತರ ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಇರುವುದನ್ನು ಒಪ್ಪಿಕೊಂಡರಲ್ಲದೆ ಅದರ ನಿವಾರಣೆಗೆ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ನಡುಗಿಸಿದ ಗೃಹಲಕ್ಷ್ಮಿ:

ಈ ನಡುವೆ ಶಾಸಕ ಮಹೇಶ ಟೆಂಗಿನಕಾಯಿ ಸದನದ ಮೂರನೇ ದಿನ ಪ್ರಸ್ತಾಪಿಸಿದ ಗೃಹಲಕ್ಷ್ಮಿ ಯೋಜನೆ ಎರಡು ಕಂತು ಬಾಕಿ ಸರ್ಕಾರವನ್ನು ಅಕ್ಷರಶಃ ನಡುಗಿಸಿತು. ಕೊನೆಗೆ ಸರ್ಕಾರದ ಪರ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸದನಕ್ಕೆ ಕ್ಷಮೆ ಕೇಳಿದ್ದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ
ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ