ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ

Kannadaprabha News   | Kannada Prabha
Published : Dec 20, 2025, 05:21 AM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿ ‘ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಸಿಎಂ ಸ್ಥಾನಕ್ಕೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ. ನಾನು ಆಯ್ಕೆಯಾಗಿರುವುದು ಐದು ವರ್ಷಕ್ಕೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸುವರ್ಣ ವಿಧಾನಸಭೆ/ಪರಿಷತ್‌ : ಮುಖ್ಯಮಂತ್ರಿ ಸ್ಥಾನದ ಬದಲಾವಣೆ, ಎರಡೂವರೆ ವರ್ಷ ಒಪ್ಪಂದದ ಬಗ್ಗೆ ಈವರೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿ ‘ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಸಿಎಂ ಸ್ಥಾನಕ್ಕೆ ಎರಡೂವರೆ ವರ್ಷದ ಒಪ್ಪಂದ ಆಗಿಲ್ಲ. ನಾನು ಆಯ್ಕೆಯಾಗಿರುವುದು ಐದು ವರ್ಷಕ್ಕೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಜತೆಗೆ, ‘ಹೈಕಮಾಂಡ್‌ ನಾಯಕರು ನನ್ನ ಪ್ರಕಾರ ನನ್ನ ಪರವಾಗಿದ್ದಾರೆ. ಹೈಕಮಾಂಡ್‌ ತೀರ್ಮಾನಿಸಿದರೆ ಮುಂದೆಯೂ ನಾನೇ ಮುಖ್ಯಮಂತ್ರಿ’ ಎಂದೂ ತಿಳಿಸಿದ್ದಾರೆ.

ಶುಕ್ರವಾರ ಉತ್ತರ ಕರ್ನಾಟಕದ ಸಮಸ್ಯೆ ಕುರಿತ ಚರ್ಚೆ ಮೇಲೆ ಉತ್ತರಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಪ್ರತಿಪಕ್ಷ ಶಾಸಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು. ಈ ವೇಳೆ ಕಾಂಗ್ರೆಸ್‌ನ ಹಿರಿಯ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ನೆರವಿಗೆ ಬಂದು, ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕರ ಬಳಿ ಯಾವುದೇ ಚರ್ಚೆಯಾಗಿಲ್ಲ. ಈ ಚರ್ಚೆಯೇ ಅನಾವಶ್ಯಕ ಎಂದು ಸಿದ್ದರಾಮಯ್ಯ ಪರ ನಿಂತರು.

ಹೈಕಮಾಂಡ್‌ ನನ್ನ ಪರ:

ಚರ್ಚೆ ವೇಳೆ ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನಿಮ್ಮಪ್ಪನಾಣೆ ನೀವು ಅಧಿಕಾರಕ್ಕೆ ಬರುವುದಿಲ್ಲ. 2028ಕ್ಕೂ ನಾವೇ, 2033ಕ್ಕೂ ನಾವೇ ಅಧಿಕಾರಕ್ಕೆ ಬರುವುದು ಎಂದು ಒಂದು ಹಂತದಲ್ಲಿ ಸಿದ್ದರಾಮಯ್ಯ ಭವಿಷ್ಯ ನುಡಿದರು. ಆಗ ವಿಪಕ್ಷ ನಾಯಕ ಆರ್‌.ಅಶೋಕ್‌, ನೀವು ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೂ ಮುಂಚೆ ಹೀಗೆ ಹೇಳಿದ್ರಿ. ಆದರೆ, ಯಡಿಯೂರಪ್ಪ 5 ಬಾರಿ ಮುಖ್ಯಮಂತ್ರಿ ಆದರು ಎಂದರು.

ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಅದಕ್ಕೆ ಅವರನ್ನು ಸಿಎಂ ಆಗಿ ಐದು ವರ್ಷ ಪೂರ್ಣಗೊಳಿಸಲು ಬಿಡಲಿಲ್ಲ ಎಂದು ತಿರುಗೇಟು ನೀಡಿದರು. ಇದಕ್ಕೆ ಅಶೋಕ್‌, ಈಗ ಎರಡೂವರೆ ವರ್ಷದ ನಂತರ ನೀವೂ ಬದಲಾಗುತ್ತೀರಿ ಎಂಬ ಮಾಹಿತಿಯಿದೆ ಎಂದು ಕುಟುಕಿದರು.

ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನಾನು ಎರಡನೇ ಸಲ ಮುಖ್ಯಮಂತ್ರಿ ಆಗಿದ್ದೇನೆ. ನನ್ನ ಪ್ರಕಾರ ಹೈಕಮಾಂಡ್‌ ನನ್ನ ಪರವಾಗಿಯೇ ಇದೆ. ಈಗಲೂ ನಾನೇ ಸಿಎಂ. ಹೈಕಮಾಂಡ್‌ ನಾಯಕರು ತೀರ್ಮಾನಿಸುವವರೆಗೂ ನಾನೇ ಸಿಎಂ ಆಗಿರುತ್ತೇನೆ. ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಅದರ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮುಂದುವರಿದು, ಮೊದಲು ನಮ್ಮನ್ನು ಜನ ಆಯ್ಕೆ ಮಾಡುತ್ತಾರೆ. ನಂತರ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಮತ್ತು ಹೈಕಮಾಂಡ್‌ನವರು ಅದನ್ನು ಒಪ್ಪುತ್ತಾರೆ. ಇನ್ನು, ನಮ್ಮಲ್ಲಿ ಎರಡೂವರೆ ವರ್ಷ ಅಂತ ಎಲ್ಲೂ ಹೇಳೇ ಇಲ್ಲ. ಆ ರೀತಿಯ ತೀರ್ಮಾನ ಆಗಿಯೇ ಇಲ್ಲ. ನಾನು 5 ವರ್ಷಕ್ಕೆ ಆಯ್ಕೆಯಾಗಿದ್ದೇನೆ. ಇವೆಲ್ಲವೂ ನಮ್ಮ ಪಕ್ಷದ ವಿಚಾರ. ಹೈಕಮಾಂಡ್‌ ತೀರ್ಮಾನ ಮಾಡಿದರೆ ಮುಂದೆಯೂ ನಾನೇ ಇರುತ್ತೇನೆ ಎಂದರು.

ಅಶೋಕ್‌ಗೆ ಟಾಂಗ್‌:

ನಂತರ ಅಶೋಕ್‌ ಕಡೆ ತಿರುಗಿ, ನೀನು ವಿರೋಧಪಕ್ಷದ ನಾಯಕನಾಗಿ 5 ವರ್ಷ ಇರುತ್ತೀಯಾ ಎಂದು ಪ್ರಶ್ನಿಸಿದರು. ಅದಕ್ಕೆ ಬಿಜೆಪಿ ಶಾಸಕರು ಒಕ್ಕೊರಲಿನಿಂದ, ಅಶೋಕ್‌ ಅವರೇ 5 ವರ್ಷ ವಿರೋಧ ಪಕ್ಷದ ನಾಯಕರು. ನಿಮ್ಮ ಕಥೆ ಹೇಳಿ ಎಂದು ಕಿಚಾಯಿಸಿದರು.

ಆಗ ಸಿದ್ದರಾಮಯ್ಯ, ಬಿ.ಎಸ್‌.ಯಡಿಯೂರಪ್ಪ ಅವರಿಗೂ ಇದೇ ರೀತಿ ಹೇಳ್ತಿದ್ರಿ. ಆದರೆ, ಈಗ ಅದೆಲ್ಲವೂ ಅನಾವಶ್ಯಕ ಚರ್ಚೆ ಎಂದು ಮುಖ್ಯಮಂತ್ರಿ ಸ್ಥಾನದ ಚರ್ಚೆ ಅಂತ್ಯಗೊಳಿಸಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ, ಎರಡೂವರೆ ವರ್ಷ ಎಂಬುದೆಲ್ಲ ಇಲ್ಲ. ಉಳಿದೆಲ್ಲವೂ ಅನಾವಶ್ಯಕ ಚರ್ಚೆ. ಇದನ್ನು ಇಲ್ಲಿಗೇ ನಿಲ್ಲಿಸಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ ಶಾಸಕ ಅಪ್ಪಾಜಿ ಸಿ.ಎಸ್‌.ನಾಡಗೌಡ, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಇದ್ದಿದ್ದರೆ ಕಾಂಗ್ರೆಸ್‌ ಶಾಸಕರ ಬಳಿ ಚರ್ಚೆ ಆಗುತ್ತಿತ್ತು. ನಮ್ಮ ಬಳಿ ಆ ಕುರಿತು ಚರ್ಚೆಯೇ ಆಗಿಲ್ಲ. ಸಿಎಲ್‌ಪಿಯಲ್ಲೂ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ನಲ್ಲೂ ಅಧಿಕಾರ ಹಸ್ತಾಂತರ ವಿಚಾರ ಪ್ರಸ್ತಾಪವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರ 9 ವರ್ಷದ ಆಡಳಿತದಲ್ಲಿ ಐದು ಜನ ಮುಖ್ಯಮಂತ್ರಿಗಳಾಗಿದ್ದರು. ನಮ್ಮ ವಿರುದ್ಧದ ಬಿಜೆಪಿಯವರ ಹುಳಿ ಹಿಂಡುವ ಪ್ರಯತ್ನ ಸಫಲವಾಗುವುದಿಲ್ಲ. ನಮ್ಮ ಸರ್ಕಾರ ಗಟ್ಟಿಯಾಗಿದ್ದು, ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ. ಅಸ್ಥಿರ ಆಗಲಿದೆ ಎಂಬುದೆಲ್ಲ ಬಿಜೆಪಿಯ ಭ್ರಮೆ. ನಮ್ಮ ಪಕ್ಷ ಪೂರ್ಣಾವಧಿ ಆಡಳಿತ ನಡೆಸಿ, ಮುಂದಿನ ಬಾರಿಯೂ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.--

ತೋಳು ತಟ್ಟಿ: ಮುನಿರತ್ನ

ಸಿಎಂ ಸ್ಥಾನದ ಚರ್ಚೆ ಮಧ್ಯೆ ಬಿಜೆಪಿಯ ಮುನಿರತ್ನ ಅವರು ತೋಳು ತಟ್ಟುತ್ತಾ ಮಾತನಾಡಿ, ಸಿದ್ದರಾಮಯ್ಯ ಅವರು ಹಿಂದೆಲ್ಲ ತೋಳು ತಟ್ಟಿ ಸವಾಲು ಹಾಕುತ್ತಿದ್ದರು. ಈಗಲೂ ತೋಳು ತಟ್ಟಿ 5 ವರ್ಷ ನಾನೇ ಸಿಎಂ ಎಂಬುದನ್ನು ಹೇಳಬೇಕು ಎಂದು ಆಗ್ರಹಿಸಿದರು.

ರಾಜಕೀಯ ನಿಶ್ಶಕ್ತಿ ಎಂಬುದಿಲ್ಲ: ಸಿದ್ದು

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಉತ್ತರ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ ಅವರು, ನನಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ ಸ್ವಲ್ಪ ನಿಶ್ಶಕ್ತನಾಗಿದ್ದೇನೆ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕರು, ನೀವು ಶಾರೀರಿಕವಾಗಿ ನಿಶ್ಶಕ್ತರಾದಂತೆ, ರಾಜಕೀಯವಾಗಿಯೂ ನಿಶ್ಶಕ್ತರಾಗಿದ್ದೀರಿ ಎಂದು ಜನ ಮಾತನಾಡುತ್ತಿದ್ದೀರಿ ಎಂದು ಕಾಲೆಳೆದರು.

ಅದಕ್ಕೆ ಸಿದ್ದರಾಮಯ್ಯ, ನನಗೆ ರಾಜಕೀಯ ನಿಶ್ಶಕ್ತಿ ಎಂಬುದೇ ಇಲ್ಲ. ರಾಜಕೀಯವನ್ನು ತಲೆ ಕೆಡಿಸಿಕೊಂಡು ಮಾಡುವ ಅಗತ್ಯವಿಲ್ಲ ಎಂದರು.

ನನ್ನ, ಸಿಎಂ ನಡುವೆ ಒಪ್ಪಂದ ಆಗಿದೆ, ಅದರಂತೆ ನಡೆ: ಡಿಕೆ

ಅಂಕೋಲಾ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ ಅಧಿಕಾರ ಹಸ್ತಾಂತರ ವಿಷಯ ತಾರಕ್ಕೇರಿರುವ ಹೊತ್ತಿನಲ್ಲೇ, ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಒಪ್ಪಂದ ಆಗಿದೆ. ಅದರಂತೆ ನಡೆದುಕೊಳ್ಳುತ್ತೇನೆ. ಈ ಬಗ್ಗೆ ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.ಮುಖ್ಯಮಂತ್ರಿ ಕುರ್ಚಿಗೆ ಎರಡೂವರೆ ವರ್ಷ ಅಂಥ ಯಾವುದೇ ಒಪ್ಪಂದ ಆಗಿಲ್ಲ. ನಾನೇ 5 ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಕುರಿತು ಡಿಸಿಎಂ ಈ ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಆಂದ್ಲೆಯ ಜಗದೀಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಡಿ.ಕೆ.ಶಿವಕುಮಾರ್‌ ಮಾತನಾಡಿದರು. ಈ ವೇಳೆ ಸುದ್ದಿಗಾರರು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಮಾತನಾಡುವಾಗ ‘ಮುಖ್ಯಮಂತ್ರಿ ಕುರ್ಚಿಗೆ ಎರಡೂವರೆ ವರ್ಷ ಅಂತ ಯಾವುದೇ ಒಪ್ಪಂದ ಆಗಿಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಹಾಗೆ ಹೈಕಮಾಂಡ್‌ ಕೂಡ ನನ್ನ ಪರವಾಗಿದೆ’ ಎಂದು ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿ, ನಾನು ಯಾವತ್ತೂ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರಲ್ಲ ಎಂದು ಹೇಳಿಲ್ಲ ಎಂದರು.

ಹಾಗೆ ಹೈಕಮಾಂಡ್ ಕೂಡ ಅವರ ಪರವಾಗಿಲ್ಲ ಅಂತಾ ಹೇಳಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ಇದ್ದದ್ದಕ್ಕೆ ಅವರು ಸಿಎಂ ಆಗಿದ್ದಾರೆ. ನಮ್ಮಲ್ಲಿ ಒಪ್ಪಂದ ಆಗಿದೆ, ಅದರಂತೆ ನಡೆದುಕೊಳ್ಳುತ್ತೇನೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ. ಹೈಕಮಾಂಡ್‌ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಹೇಳಿದರು. ಮುಖ್ಯಮಂತ್ರಿ ಹುದ್ದೆಗಾಗಿ ದೇವರಲ್ಲಿ ಏನಾದರೂ ಪ್ರಾರ್ಥನೆ ಮಾಡಿಕೊಂಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್‌ ಅವರು, ಇದು ನನ್ನ ಹಾಗೂ ತಾಯಿಯ ನಡುವಿನ ವಿಚಾರ. ಆದರೆ ನನಗೆ ತಾಯಿ ನನ್ನ ಜತೆಗಿರುತ್ತಾಳೆ ಎಂಬ ನಂಬಿಕೆ ಇದೆ ಎಂದರು.

‘ಇನ್ನು 2019ರಲ್ಲಿ ನೀವು ತೊಂದರೆಯಲ್ಲಿದ್ದಾಗ ಇಂತಹದೆ ಸಂದರ್ಭದಲ್ಲಿ ನಿಮಗೆ ಒಳ್ಳೆಯದಾಗುತ್ತದೆ ಎಂದು ತಾಯಿ ಜಗದೀಶ್ವರಿ ದರ್ಶನದಲ್ಲಿ ದಿನಾಂಕ ನೀಡಿದ್ದರು. ಹಾಗೆ ನಿಮ್ಮ ಇಷ್ಟಾರ್ಥಕ್ಕಾಗಿ ಪೂಜೆ ಸಲ್ಲಿಸಿದ ವೇಳೆ ನಿಮಗೇನಾದರೂ ಒಳ್ಳೆಯ ಸಮಯಕ್ಕೆ ದೇವಿ ದಿನಾಂಕ ನಿಗದಿ ಮಾಡಿದ್ದಾಳೆಯೇ?’ ಎಂಬ ಮಾಧ್ಯಮದ ಪ್ರಶ್ನೆಗೆ ಮುಗುಳು ನಗುತ್ತಲೇ, ಯಾವುದೇ ಉತ್ತರ ನೀಡದೆ ನಿರ್ಗಮಿಸಿದರು.

ಸಿಎಂ ಹೇಳಿದ್ದು

- ನಾನು ಎರಡನೇ ಸಲ ಸಿಎಂ ಆಗಿದ್ದೇನೆ. ನನ್ನ ಪ್ರಕಾರ, ಹೈಕಮಾಂಡ್‌ ನನ್ನ ಪರವೇ ಇದೆ

- ಈಗಲೂ ನಾನೇ ಸಿಎಂ. ವರಿಷ್ಠರು ತೀರ್ಮಾನಿಸುವವರೆಗೂ ನಾನು ಸಿಎಂ ಆಗಿರುತ್ತೇನೆ

- ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಅದರ ಪ್ರಕಾರ ನಾನು ನಡೆದುಕೊಳ್ಳುವೆ

- ಶಾಸಕರು ಮುಖ್ಯಮಂತ್ರಿ ಆರಿಸುತ್ತಾರೆ, ಹೈಕಮಾಂಡ್‌ನವರು ಅದಕ್ಕೆ ಒಪ್ಪಿಗೆ ನೀಡುತ್ತಾರೆ

- ನಮ್ಮಲ್ಲಿ ಎರಡೂವರೆ ವರ್ಷ ಅಂತ ಎಲ್ಲೂ ಹೇಳೇ ಇಲ್ಲ. ಅಂತಹ ತೀರ್ಮಾನವೇ ಆಗಿಲ್ಲ

- ನಾನು ಐದು ವರ್ಷಕ್ಕೆ ಆಯ್ಕೆಯಾಗಿದ್ದೇನೆ. ನನ್ನನ್ನು ಅಲುಗಾಡಿಸಲು ಆಗುವುದಿಲ್ಲ: ಸಿದ್ದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!