ಜನಾರ್ದನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಕ್ಷೇತ್ರದ ಹಾಲಿ ಶಾಸಕ, ಈ ಬಾರಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಕಣಕ್ಕಿಳಿವ ಸಾಧ್ಯತೆ.
ಕೆ.ಎಂ.ಮಂಜುನಾಥ್
ಬಳ್ಳಾರಿ(ಫೆ.20): ಕೈ-ಕಮಲ ಪಕ್ಷಗಳ ನಡುವೆ ಸಾಂಪ್ರದಾಯಿಕ ಹೋರಾಟಕ್ಕೆ ಸಾಕ್ಷಿಯಾಗುತ್ತಾ ಬಂದಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಈ ಬಾರಿ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅಸ್ವಿತ್ವಕ್ಕೆ ತಂದ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ ಪ್ರವೇಶ ತೀವ್ರ ಕುತೂಹಲ ಮೂಡಿಸಿದೆ.
undefined
ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯಲ್ಲಿ ಕಮಲ ರಾರಾಜಿಸಲು ಕಾರಣವಾಗಿದ್ದೇ 1999ರಲ್ಲಿ ಸೋನಿಯಾಗಾಂಧಿ ಹಾಗೂ ಸುಷ್ಮಾಸ್ವರಾಜ್ ಅವರ ನಡುವಿನ ಲೋಕಸಭಾ ಚುನಾವಣಾ ಸ್ಪರ್ಧೆ. 2004ರಲ್ಲಿ ಈಗಿನ ಸಾರಿಗೆ ಸಚಿವ ಬಿ.ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ಕಮಲ ಅರಳಿಸಿದರೆ, 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಜನಾರ್ದನ ರೆಡ್ಡಿ ಸೋದರ ಜಿ.ಸೋಮಶೇಖರ ರೆಡ್ಡಿ ಗೆದ್ದಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನ ಅನಿಲ್‌ಲಾಡ್ ಜಯ ಪಡೆದರೆ, 2018ರಲ್ಲಿ ಸೋಮಶೇಖರ ರೆಡ್ಡಿ ಮತ್ತೆ ಜಯ ಗಳಿಸಿದ್ದಾರೆ.
ಸಂಡೂರಿನಿಂದಲೇ ವಿಜಯದ ಕಹಳೆ ಮೊಳಗಿಸಲು ಶಾ ಆಗಮನ : ಶ್ರೀರಾಮುಲು
ಕಮಲ ಪಕ್ಕಾ, ಕೈಗೆ ಸಿಗುತ್ತಿಲ್ಲ ಲೆಕ್ಕ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೀಗ ಜಿ.ಸೋಮಶೇಖರ ರೆಡ್ಡಿ ಶಾಸಕ. ಮುಂದಿನ ಚುನಾವಣೆಯಲ್ಲೂ ಬಿಜೆಪಿಯಿಂದ ಅವರೇ ಟಿಕೆಟ್ ಆಕಾಂಕ್ಷಿ. ಇನ್ನು ಕಾಂಗ್ರೆಸ್‌ನಲ್ಲಿ ಸ್ಪರ್ಧಾಕಾಂಕ್ಷಿಗಳ ದೊಡ್ಡಪಟ್ಟಿಯೇ ಇದೆ. ಮಾಜಿ ಸಚಿವ ಮುಂಡ್ಲೂರು ದಿವಾಕರಬಾಬು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಭರತ್ ರೆಡ್ಡಿ, ಅಲ್ಲಂ ಪ್ರಶಾಂತ್ ಮುಂಚೂಣಿಯಲ್ಲಿರುವ ಹೆಸರು. ಇವರಲ್ಲದೆ ಅರ್ಜಿ ಸಲ್ಲಿಸಿದವರು 15ಕ್ಕೂ ಹೆಚ್ಚು ಮಂದಿ ಇದ್ದಾರೆ.
ಸದ್ಯ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಅವರ ನೂತನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಚ್ಚು ಸದ್ದು ಮಾಡುತ್ತಿದ್ದು, ರೆಡ್ಡಿ ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರನ್ನೇ ಇಲ್ಲಿಂದ ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ. ಒಂದು ವೇಳೆ ಅರುಣಾ ರೆಡ್ಡಿ ಕಣಕ್ಕಿಳಿಯುವುದು ಖಚಿತವಾದರೆ ರೆಡ್ಡಿ ಕುಟುಂಬದ ನಡುವಿನ ಸಮರಕ್ಕೆ ಈ ಕ್ಷೇತ್ರ ವೇದಿಕೆ ಒದಗಿಸಲಿದೆ. ಹೀಗಾಗಿ ಬಳ್ಳಾರಿ ನಗರ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಉದ್ಯಮಿ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಪುತ್ರರೂ ಆಗಿರುವ ಭರತ್ ರೆಡ್ಡಿ ಈಗಾಗಲೇ ಮತದಾರರ ಓಲೈಕೆ ಶುರು ಮಾಡಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕುಕ್ಕರ್‌ಗಳನ್ನು ತಾವೇ ಖುದ್ದು ಮನೆಗಳಿಗೆ ತೆರಳಿ ವಿತರಿಸಿದ್ದಾರೆ. ಇನ್ನು ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಮನೆಮನೆಗೆ ಸೀರೆ ವಿತರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ಗೆದ್ದರೆ 1 ಸಾವಿರಕ್ಕೆ ಹಮಾಲರಿಗೆ ನಿವೇಶನ: ಮಾಜಿ ಸಚಿವ ದಿವಾಕರಬಾಬು ಭರವಸೆ
ಜಾತಿವಾರು ಲೆಕ್ಕಾಚಾರ ಜೋರು
ಬಳ್ಳಾರಿ ನಗರ ಕ್ಷೇತ್ರದಲ್ಲಿ ಒಟ್ಟು 2,47,405 ಮತದಾರರಿದ್ದಾರೆ. ಈ ಪೈಕಿ 1,20,421 ಪುರುಷರು ಹಾಗೂ 1,26,984 ಮಹಿಳಾ ಮತದಾರರಿದ್ದಾರೆ. ಜಾತಿವಾರು ಲೆಕ್ಕದಲ್ಲಿ ವೀರಶೈವ ಲಿಂಗಾಯತ 35 ಸಾವಿರ, ಪರಿಶಿಷ್ಟಜಾತಿ 50 ಸಾವಿರ, ಪರಿಶಿಷ್ಟಪಂಗಡ 20,800 ಹಾಗೂ ಮುಸ್ಲಿಂ ಮತದಾರರು 44,500ದ ಆಜುಬಾಜು ಇರಬಹುದು. ಕಾಂಗ್ರೆಸ್ ಪರಿಶಿಷ್ಟಜಾತಿ, ಮುಸ್ಲಿಂ, ಕುರುಬ ಸಮುದಾಯದ ಮತಗಳನ್ನು ನಂಬಿಕೊಂಡಿದೆ. ಬಿಜೆಪಿ ಲಿಂಗಾಯತ, ಬ್ರಾಹ್ಮಣ, ಬಲಿಜ, ಪರಿಶಿಷ್ಟಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೇಲೆ ಕಣ್ಣಿಟ್ಟಿದೆ. ಹೊಸ ಪಕ್ಷ ಸ್ಥಾಪಿಸಿ ಪತ್ನಿಯನ್ನು ಅಖಾಡಕ್ಕೆ ಇಳಿಸಲು ಸಜ್ಜಾಗಿರುವ ಜನಾರ್ದನ ರೆಡ್ಡಿ, ಎಸ್ಸಿ-ಎಸ್ಟಿ, ಮುಸ್ಲಿಂ, ಕುರುಬ ಮತಗಳನ್ನು ಬಾಚಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಕ್ಷೇತ್ರ ಪರಿಚಯ
ಕಳೆದ ಆರೂವರೆ ದಶಕದಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ನಡೆದ 14 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 3 ಬಾರಿ ಬಿಜೆಪಿ, 2 ಬಾರಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಹಾಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಈ ಕೇತ್ರದಲ್ಲಿ ಕಮಲ ಅರಳಿಸಿದ್ದು, ಸೋಮಶೇಖರ ರೆಡ್ಡಿ ಅವರು ಎರಡು ಬಾರಿ ಗೆದ್ದಿದ್ದಾರೆ. ಹಾಲಿ ಶಾಸಕರೂ ಆಗಿರುವ ಸೋಮಶೇಖರ ರೆಡ್ಡಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ.