
ಚಿಕ್ಕಮಗಳೂರು (ಸೆ.16): ಶುದ್ಧ ರಕ್ತದವರು ನನ್ನ ಜೊತೆ ನಿಂತಿದ್ದಾರೆ. ಬೆರಕೆಯವರು ಬೆರಕೆ ತರ ಮಾತನಾಡ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ತಲೆ ಕಡೀರಿ, ತೊಡೆ ಮುರೀರಿ ಅಂತ ಸಿ.ಟಿ.ರವಿ ತಮ್ಮ ಮಕ್ಕಳಿಗೆ ಹೇಳ್ತಾರಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ, ನಾನು ಅವರ ಪೂರ್ವಾರ್ಧ ತಗೋಳ್ದೆ, ಉತ್ತರಾರ್ಧ ತಗೊಂಡ್ರೆ ಮಾತ್ರ ತಪ್ಪು ಅರ್ಥ ಬರುತ್ತೆ ಎಂದರು.
ನಾನು ಅವರಿಗೆ ಹೇಳ್ತೀನಿ, ಇನ್ಮುಂದೆ ನಮ್ಮ ದೇವರ ಮೇಲೆ ಕಲ್ಲು ತೂರಿದ್ರೆ ಸುಮ್ಮನಿರಬೇಕಾ, ಪೆಟ್ರೋಲ್ ಬಾಂಬ್ ಹಾಕಿ ದರೆ ಸುಮ್ಮನೆ ಇರಬೇಕಾ, ನಮ್ಮ ವಿಗ್ರಹದ ಮೇಲೆ ಉಗುದ್ರೆ ಸುಮ್ಮನಿರಬೇಕಾ, ಪಾಕಿಸ್ತಾನ ಜಿಂದಾಬಾಂದ್ ಅಂದ್ರೆ ಸುಮ್ಮನಿ ರಬೇಕಾ. ಹೇಡಿಗಳು, ಬೆರಕೆಯವರು ಸುಮ್ಮನಿರಬಹುದು, ಶುದ್ಧ ರಕ್ತದವರು ಹೇಗೆ ಸುಮ್ಮನಿರ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿ ಮತ್ತು ಆದರ್ಶಗಳು ಎಲ್ಲರ ಬದುಕಿಗೆ ಪ್ರೇರಣೆಯಾದಾಗ ದೇಶವನ್ನು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಕಟ್ಟಬಹುದೆಂದು ಸಿ.ಟಿ. ರವಿ ಹೇಳಿದರು. ಚಿಕ್ಕಮಗಳೂರು ಸಿವಿಲ್ ಎಂಜಿನಿಯರ್ಸ್ ಸಂಘ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ನಗರದ ಆಜಾದ್ ಪಾರ್ಕ್ ಸಮೀಪದ ಲೋಕೋಪಯೋಗಿ ಇಲಾಖೆ ಮುಂಭಾಗದ ನಿರ್ಮಿಸಿರುವ ಸರ್. ಎಂ. ವಿಶ್ವೇಶ್ವರಯ್ಯ ನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು. ವಿಶ್ವೇಶ್ವರಯ್ಯ ಅವರ ಬುದ್ಧಿವಂತಿಕೆ ಮತ್ತು ಪರಿಶ್ರಮದ ವ್ಯಕ್ತಿತ್ವದ ಜೊತೆಗೆ ಸಮಾಜಮುಖಿ ಚಿಂತನೆಗಳು ಇಂದಿನ ಯುವ ಎಂಜಿನಿಯರ್‌ಗಳಿಗೆ ಪ್ರೇರಣೆಯಾಗಲಿದ್ದು, ತಮ್ಮ ವೃತ್ತಿ ಬದುಕಿನಲ್ಲಿ ಯಾವುದೇ ರೀತಿಯ ಪ್ರಶ್ನಾರ್ಥಕ ಚಿಹ್ನೆಗೆ ಅವಕಾಶ ನೀಡದೇ ಬಾಳಿ ಬದುಕಿದವರು ಸರ್. ಎಂ. ವಿಶ್ವೇಶ್ವರಯ್ಯ.
ಹಾಗಾಗಿಯೇ ಅವರನ್ನು ಭಾರತ ರತ್ನ ಎಂದು ಕೇಂದ್ರ ಸರ್ಕಾರ ಗುರುತಿಸಿದೆ ಎಂದರು.ಸರ್.ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳಿಗೆ ತಕ್ಕಂತೆ ಅವರೊಂದಿಗೆ ಜೋಡಿ ಆದವರು ನಾಲ್ವಡಿ ಕೃಷ್ಣರಾಜ ಒಡೆಯರು. ಇವರಿಬ್ಬರ ಜೋಡಿ ಹಲವು ಶಾಶ್ವತ ಯೋಜನೆಗಳಿಗೆ ಅಡಿಪಾಯ ಹಾಕಿದ್ದು, ಕನ್ನಂಬಾಡಿ ಕಟ್ಟಿದರು ಮಾತ್ರ ವಲ್ಲದೇ ಮೈಸೂರು ಬ್ಯಾಂಕ್, ಕಬ್ಬಿಣದ ಕಾರ್ಖಾನೆ, ಮೈಸೂರು ಶುಗರ್ ಕಾರ್ಖಾನೆ, ಎಂಜಿನಿಯರಿಂಗ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಿಲ್ಕ್ ಹೀಗೆ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಮೈಸೂರು ಪ್ರಾಂತ್ಯವನ್ನು ಒಂದು ಉತ್ತುಂಗ ಸ್ಥಿತಿಗೆ ಏರಲು ಕಾರಣರಾದವರು ಸರ್. ಎಂ. ವಿಶ್ವೇಶ್ವರಯ್ಯ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯ ಏನು ಎಂಬುದು ನಾವು ಅಂದುಕೊಂಡಂತೆ ಇಲ್ಲದಿದ್ದರೂ ರಾಮರಾಜ್ಯದ ಬಯಕೆ ಇದೆ. ರಾಮರಾಜ್ಯ ಎಂದರೆ ಬೇರೇನು ಅಲ್ಲ, ಪ್ರಶ್ನಿಸುವಂತಹ ಪ್ರಜಾಪ್ರಭುತ್ವ ಗಟ್ಟಿಯಾಗಲಿ, ಉತ್ತಮ ಪ್ರಜಾ ಪ್ರಭುತ್ವದ ಕಡೆಗೆ ಸಮಾಜ ಕೊಂಡೊಯ್ಯಲು ಸ್ವಾಮಿ ವಿವೇಕಾನಂದ, ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಬದುಕಿನ ಆದರ್ಶಗಳು ಪ್ರೇರಣೆಯಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.