ಕೇಂದ್ರ, ರಾಜ್ಯ ಸರ್ಕಾರದಿಂದ ಕ್ರಿಮಿನಲ್‌ ಲೂಟಿ: ವಾಜಪೇಯಿ ಮಾತು ಉಲ್ಲೇಖಿಸಿ ಸಿದ್ದು ಕಿಡಿ!

By Kannadaprabha NewsFirst Published Sep 16, 2021, 7:51 AM IST
Highlights

* ತೈಲದ ಮೇಲಿನ ತೆರಿಗೆ 50% ಇಳಿಸುವ ನಿರ್ಣಯಕ್ಕೆ ಆಗ್ರಹ

* ಕೇಂದ್ರ, ರಾಜ್ಯ ಸರ್ಕಾರದಿಂದ ಕ್ರಿಮಿನಲ್‌ ಲೂಟಿ: ಸಿದ್ದು ಕಿಡಿ

* ವಾಜಪೇಯಿ ಹೇಳಿಕೆ ಉಲ್ಲೇಖಿಸಿ ವಿಪಕ್ಷ ನಾಯಕ ವಾಗ್ದಾಳಿ

ವಿಧಾನಸಭೆ(sಎ.16): ತೀವ್ರ ಬೆಲೆ ಏರಿಕೆಯಿಂದ ರಾಜ್ಯದ ಜನತೆಯನ್ನು ಕಾಪಾಡಲು ಪೆಟ್ರೋಲ್‌, ಡಿಸೇಲ್‌ ಮೇಲಿನ ತೆರಿಗೆಯನ್ನು ಶೇ.50ರಷ್ಟುಇಳಿಸುವಂತೆ ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಬೇಕು ಮತ್ತು ರಾಜ್ಯದ ಪಾಲಿನ ತೆರಿಗೆಯನ್ನೂ ಕಡಿಮೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ದರ ಏರಿಕೆಯನ್ನು ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರೇ ಹೇಳಿದಂತೆ ‘ಕ್ರಿಮಿನಲ್‌ ಲೂಟಿ’ ಎಂದು ಕಿಡಿಕಾರಿದ್ದಾರೆ.

ವಿಧಾನಸಭೆಯಲ್ಲಿ ಬುಧವಾರ ಬೆಲೆ ಏರಿಕೆ ಕುರಿತು ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುಪಿಎ ಹಾಗೂ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದ್ದ ಪ್ರತಿ ಬ್ಯಾರಲ್‌ ಕಚ್ಚಾ ತೈಲ ಬೆಲೆ, ತೆರಿಗೆ ಏರಿಕೆ ಮತ್ತು ಸಂಗ್ರಹ, ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದರು.

ಇದು ಕ್ರಿಮಿನಲ್‌ ಲೂಟಿ:

‘1973ರಲ್ಲಿ ಇಂದಿರಾ ಗಾಂಧಿ ಸರ್ಕಾರ 100 ಪೈಸೆ ಇದ್ದ ಪೆಟ್ರೋಲ್‌ ಬೆಲೆಯನ್ನು 7 ಪೈಸೆ ಏರಿಸಿದಾಗ ಅಂದು ವಾಜಪೇಯಿ ಅವರು ಎತ್ತಿನಗಾಡಿಯಲ್ಲಿ ಸಂಸತ್‌ ಭವನಕ್ಕೆ ಆಗಮಿಸಿ ‘ಇದು ಕ್ರಿಮಿನಲ್‌ ಲೂಟ್‌’ ಎಂದು ಕರೆದಿದ್ದರು. ನಾನೂ ಇಂದು ಅದಕ್ಕಿಂತ ಹೆಚ್ಚೇನೂ ಹೇಳಬಯಸುವುದಿಲ್ಲ. ಇಂದಿನ ‘ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕ್ರಿಮಿನಲ್‌ ಲೂಟ್‌ ಮಾಡುತ್ತಿವೆ. ಕೇವಲ 1.4 ಲಕ್ಷ ಕೋಟಿ ರು. ಮೊತ್ತದ ಆಯಿಲ್‌ ಬಾಂಡ್‌ಗಳ ಸಾಲ ತೀರಿಸುವ ಹೆಸರಲ್ಲಿ ಕಳೆದ ಏಳು ವರ್ಷದಲ್ಲಿ ಜನಸಾಮಾನ್ಯರಿಂದ 24 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ’ ಎಂದು ಹರಿಹಾಯ್ದರು.

ಕಚ್ಚಾತೈಲ ಬೆಲೆ ಇಳಿದರೂ ದರ ಏರಿಕೆ:

ಇಂಧನ ಬೆಲೆ ಏರಿಕೆಗೆ ಬಿಜೆಪಿಯವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಯುಪಿಎ ಸರ್ಕಾರದ ಐದು ಆಯಿಲ್‌ ಬಾಂಡ್‌ಗಳ ಖರೀದಿಯ ಕಾರಣ ಕೊಡುತ್ತಾರೆ. ಇದರ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹೇಳಿಕೆ ನೀಡುತ್ತಾರೆ. ಆದರೆ, ಯುಪಿಎ ಅಧಿಕಾರದಲ್ಲಿ 120ರಿಂದ 125 ಡಾಲರ್‌ ಇದ್ದ ಕಚ್ಚಾತೈಲ ಬೆಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 2014ರಲ್ಲಿ 105.52 ಡಾಲರ್‌ಗೆ ಇಳಿಯಿತು. ನಂತರದ ವರ್ಷಗಳಲ್ಲೂ ಇಳಿಯುತ್ತಲೇ ಸಾಗಿದ ಕಚ್ಚಾತೈಲ ಬೆಲೆ ಈಗ ಪ್ರತಿ ಬ್ಯಾರಲ್‌ಗೆ ಕೇವಲ 54.77 ಡಾಲರ್‌ಗೆ ಇಳಿದಿದೆ. ಆ ಪ್ರಕಾರ ತೈಲ ಬೆಲೆಯನ್ನು ಗಣನೀಯವಾಗಿ ಇಳಿಸಬೇಕಾಗಿತ್ತು. ಆದರೂ ಕೂಡ ಕೇಂದ್ರ ಸರ್ಕಾರ ಪೆಟ್ರೋಲ್‌ ಡೀಸೆಲ್‌ ಮೇಲಿನ ತೆರಿಗೆ ಏರಿಕೆ ಮಾಡುತ್ತಲೇ ಇರುವುದರಿಂದ ಜನರು ಇದರ ಪರಿಣಾಮ ಎದರಿಸಬೇಕಾಗಿದೆ. ಇಂದಿನ ಕಚ್ಚಾತೈಲದ ಬೆಲೆಗೆ ಹೋಲಿಸಿದರೆ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 38 ರು. ಮಾತ್ರ. ಉಳಿದ ಹಣವನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ತೆæೖಲೋತ್ಪನ್ನ ಮಾರಾಟದ ಮೇಲೆ ರಾಜ್ಯ ಸರ್ಕಾರ ವಿಧಿಸುತ್ತಿರುವ ತೆರಿಗೆಯನ್ನೂ ತಮಿಳುನಾಡು ಮಾದರಿಯಲ್ಲಿ ಇಳಿಸಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ನೆರವಿಗೆ ಬರಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಶೇ.36ರಷ್ಟುಜನ ಗ್ಯಾಸ್‌ನಿಂದ ವಿಮುಖ:

ದೇಶದ ಹೆಣ್ಣುಮಕ್ಕಳು ಉರುವಲು ಒಲೆಯ ಹೊಗೆ ಕುಡಿದು ಅನಾರೋಗ್ಯಕ್ಕೊಳಗಾಗಬಾರದು ಎಂಬ ಉದ್ದೇಶಕ್ಕೆ ಅಡುಗೆ ಅನಿಲ ಪರಿಚಯಿಸಲಾಯಿತು. ಈಗ ಅಡುಗೆ ಅನಿಲದ ಬೆಲೆ ಗಗನಕ್ಕೇರಿರುವುದರಿಂದ ದೇಶದಲ್ಲಿ ಶೇ.36ರಷ್ಟುಜನ ಮಹಿಳೆಯರು ಮತ್ತೆ ಒಲೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುಪಿಎ ಅವಧಿಯಲ್ಲಿ 414 ರು. ಇದ್ದ ಪ್ರತಿ ಸಿಲಿಂಡರ್‌ ಅಡುಗೆ ಅನಿಲ ಬೆಲೆ ಇಂದು 922 ರು. ಆಗಿದೆ. 2020ರಿಂದ ಬಡವರಿಗೆ ನೀಡುತ್ತಿದ್ದ ಸಬ್ಸಿಡಿಯನ್ನೂ ಕೇಂದ್ರ ಸರ್ಕಾರ ನಿಲ್ಲಿಸಿದೆ. ಇದರಿಂದ ಯೋಜನೆಯ ಉದ್ದೇಶವೇ ಬುಡಮೇಲಾಗಿದೆ ಎಂದು ಹೇಳಿದರು.

ಸಿದ್ದು ಹೇಳಿದ್ದೇನು?

- ಬೆಲೆಯೇರಿಕೆಯಿಂದ ಜನರನ್ನು ರಕ್ಷಿಸಲು ತೆರಿಗೆ ಇಳಿಸಬೇಕು

- ತೈಲ ತೆರಿಗೆ 50% ಇಳಿಸಲು ಸದನದಲ್ಲಿ ನಿರ್ಣಯ ಕೈಗೊಳ್ಳಬೇಕು

- ಅದನ್ನು ಕೇಂದ್ರಕ್ಕೆ ಕಳಿಸಿ, ರಾಜ್ಯದ ಪಾಲಿನ ತೆರಿಗೆ ಇಳಿಸಬೇಕು

- ಇಂದಿರಾ ಗಾಂಧಿ 7 ಪೈಸೆ ಏರಿಸಿದಾಗ ವಾಜಪೇಯಿ ಪ್ರತಿಭಟಿಸಿದ್ದರು

- ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದು, ‘ಕ್ರಿಮಿನಲ್‌ ಲೂಟಿ’ ಎಂದಿದ್ದರು

click me!