
ಬೆಂಗಳೂರು (ಅ.10): ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಉತ್ಪನ್ನಗಳನ್ನು ಸಂಸ್ಕರಣೆ, ಮೌಲ್ಯವರ್ಧನೆಗೆ ಒಳಪಡಿಸುವ ಮೂಲಕ ಉದ್ದಿಮೆಗಳನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಯತ್ನಿಸಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಗುರುವಾರ ಪುರಭವನದಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಸಂಸ್ಥೆಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಸಾಮಾನ್ಯ ಮೂಲ ಸೌಕರ್ಯ ಸ್ಥಾಪನೆಗೆ ಶೇ.35 ಸಾಲ ಸಹಾಯಧನ ಅಥವಾ ಗರಿಷ್ಠ ₹3 ಕೋಟಿ ಸಬ್ಸಿಡಿ ಸಿಗಲಿದೆ.
ಕಳೆದ ಐದು ವರ್ಷದಲ್ಲಿ ಈ ಯೋಜನೆಗೆ 6500 ಜನರಿಗೆ ಬ್ಯಾಂಕ್ ಸಾಲ, ಸಹಾಯಧನ ನೀಡಲಾಗಿತ್ತು. ಈ ವರ್ಷ 4400 ಅರ್ಜಿ ಸಲ್ಲಿಕೆಯಾಗಿದ್ದು, 5ಸಾವಿರ ಗುರಿ ಸಾಧಿಸಲು ಕ್ರಮ ವಹಿಸಲಾಗಿದೆ ಎಂದರು. ಈ ವರ್ಷ ಐದು ಸಾವಿರ ಕಿರು ಆಹಾರ ಸಂಸ್ಕರಣ ಘಟಕ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಕಳೆದ ಬಜೆಟ್‌ನಲ್ಲಿ ₹206 ಕೋಟಿ ಅನುದಾನ ಮೀಸಲಿಡಲಾಗಿದೆ. ಪಿಎಂಎಫ್‌ಎಂಇ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಶೇ. 15ರಷ್ಟು ಸಹಾಯಧನ ನೀಡುತ್ತಿದೆ ಎಂದು ಅವರು ತಿಳಿಸಿದರು.
ಸರ್ಕಾರ ರೈತರ ಬೆನ್ನಿಗಿದ್ದು, ಬೆಳೆನಷ್ಟ ಪರಿಹಾರಕ್ಕೆ ₹1 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಬಾಗಲಕೋಟೆ, ಬೆಳಗಾವಿ, ಬೀದರ್ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ₹ 50 ಲಕ್ಷ ಸಬ್ಸಿಡಿಯಲ್ಲಿ 400 ಯಂತ್ರ ವಿತರಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಸಮರ್ಪಕವಾಗಿ ಕ್ರಮವಹಿಸಲಾಗಿದೆ ಎಂದು ಸಚಿವರು ಹೇಳಿದರು. ಕೆಪೆಕ್ ಅಧ್ಯಕ್ಷ ಬಿ.ಎಚ್. ಹರೀಶ್ ಮಾತನಾಡಿ ರೈತ ಉತ್ಪಾದಕ ಸಂಸ್ಥೆಗಳು ತಮ್ಮ ಸದಸ್ಯ ರೈತರು ಬೆಳೆಯುತ್ತಿರುವ ಉತ್ಪನ್ನ ಸಂಗ್ರಹಿಸಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒಳಪಡಿಸಬೇಕು. ಜತೆಗೆ ಮಾರುಕಟ್ಟೆ ಮತ್ತು ರಫ್ತು ಕಾರ್ಯವನ್ನು ಕೈಗೊಂಡು ರೈತರಿಗೆ ಉತ್ತಮ ಲಾಭ ದೊರಕಿಸಿಕೊಡಬೇಕು ಎಂದರು. ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾತನಾಡಿ, ಈವರೆಗೆ ವೈಯಕ್ತಿಕ ಉದ್ದಿಮೆದಾರರೆ ಯೋಜನೆಯಡಿ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ.
ಎಫ್‌ಪಿಒಗಳು ಕಡಿಮೆ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿ ಜಿಲ್ಲೆಯಿಂದ ಕನಿಷ್ಠ ಮೂರು ಎಫ್‌ಪಿಒಗಳು ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಸ್ಥಳೀಯವಾಗಿ ಲಭ್ಯವಾಗುವ ಉತ್ಪನ್ನಗಳನ್ನು ಕೇಂದ್ರೀಕರಿಸಿ ಮೌಲ್ಯವರ್ಧಿತ ಆಹಾರ ಸಂಸ್ಕರಣಾ ಘಟಕ ತೆರೆಯಲು ರೈತರು, ಯುವ ಉದ್ದಿಮೆದಾರರು ಮುಂದಾಗಬೇಕು. ಇದರಿಂದ ಗುಣಮಟ್ಟದ ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಸಬಹುದು ಎಂದು ಹೇಳಿದರು. ಈ ವೇಳೆ ಪಿಎಂಎಫ್‌ಎಂಇ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜತೆಗೆ ನೇಮಕಗೊಂಡ 134 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಪೈಕಿ 10 ಜನರಿಗೆ ಸಾಂಕೇತಿಕವಾಗಿ ಗುರುತಿನ ಪತ್ರವನ್ನು ಸಚಿವರು ನೀಡಿದರು. ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಜಂಟಿ ನಿರ್ದೇಶಕ ಡಾ.ಶಿವಕುಮಾರ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹ್ಮದ್ ಪರ್ವೇಜ್ ಬಂಥನಾಳ್ ಭಾಗವಹಿಸಿದ್ದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ದಿವಾಳಿ ಆಗಲಿದೆ ಎಂದು ಟೀಕಿಸಿದ್ದರು. ಆದರೆ, ದೆಹಲಿ, ಬಿಹಾರದಲ್ಲಿ ಬಿಜೆಪಿಯೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ನಾವು ಜನರ ಬದುಕಿಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸದೆ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.