ಬಾಯಿ ಬಡಿದುಕೊಂಡ್ರೂ ಬಿಜೆಪಿ ಟಿಕೆಟ್‌ಗೆ ಎಚ್‌ಡಿಕೆ ಒಪ್ಪಿರಲಿಲ್ಲ: ಮುಖಾಮುಖಿಯಲ್ಲಿ ಸಿ.ಪಿ.ಯೋಗೇಶ್ವರ್‌

By Kannadaprabha NewsFirst Published Oct 31, 2024, 4:59 AM IST
Highlights

ಯೋಗೇಶ್ವರ್ ಅವರು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಿಂದ ಕ್ಷೇತ್ರದ ಚಿತ್ರಣವೇ ಬದಲಾಯಿತು. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...

ವಿಜಯ್ ಮಲಗಿಹಾಳ

ಬೆಂಗಳೂರು (ಅ.31): ಉಪಚುನಾವಣೆ ನಡೆಯುತ್ತಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಸಾಕಷ್ಟು ಕುತೂಹಲ ಮೂಡಿಸಿರುವುದು ಚನ್ನಪಟ್ಟಣ ಕ್ಷೇತ್ರದ ಚುನಾವಣೆ. ಇದು ಇಬ್ಬರು ಅಭ್ಯರ್ಥಿಗಳ ನಡುವೆ, ಎರಡು ರಾಜಕೀಯ ಪಕ್ಷಗಳ ನಡುವೆ ಎನ್ನುವುದಕ್ಕಿಂತ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವಿನ ಕಾಳಗದ ಕಣವಾಗಿರುವುದು ಸ್ಪಷ್ಟವಾಗಿದೆ. ಇವರಿಬ್ಬರ ಪ್ರತಿನಿಧಿಗಳಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ಕಾಂಗ್ರೆಸ್‌ನಿಂದ ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಿಂದ ಸ್ಪರ್ಧಿಸಬಹುದು ಎಂದುಕೊಂಡಿದ್ದ ಯೋಗೇಶ್ವರ್ ಅವರು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಿಂದ ಕ್ಷೇತ್ರದ ಚಿತ್ರಣವೇ ಬದಲಾಯಿತು. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...

Latest Videos

*ಚುನಾವಣಾ ಪ್ರಚಾರ ಹೇಗೆ ಸಾಗಿದೆ? ವಾತಾವರಣ ಹೇಗಿದೆ?
ಹೌದು. ಪ್ರಚಾರ ಜೋರಾಗಿಯೇ ನಡೆದಿದೆ. ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್‌ ಮತ್ತಿತರ ನಾಯಕರ ಸಹಯೋಗದಲ್ಲಿ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದೇನೆ. ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಜನರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ವಾತಾವರಣ ಚೆನ್ನಾಗಿದೆ. ಕಳೆದ ಎರಡು ಅವಧಿಯಲ್ಲಿ ಶಾಸಕರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬುದನ್ನು ಮತದಾರರೇ ಹೇಳುತ್ತಿದ್ದಾರೆ. ಅವರು ಕೆಲಸ ಮಾಡದೇ ಇರುವುದು ನನಗೆ ಅನುಕೂಲಕರವಾಗಿದೆ. ಕುಮಾರಸ್ವಾಮಿ ಅವರು ಜನರ ಬಳಿಗೇ ಹೋಗಿಲ್ಲ. ಕ್ಷೇತ್ರದ ಹಳ್ಳಿಗಳ ಕಡೆಗೆ ಕಾಲಿಟ್ಟಿಲ್ಲ.

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ: ಸ್ಟಾರ್‌ವಾರ್ ಮಾತ್ರವಲ್ಲ ಕುಟುಂಬ ಕದನಕ್ಕೂ ಸಿದ್ಧ!

*ಅಂದರೆ, ಕುಮಾರಸ್ವಾಮಿ ಅವರು ಶಾಸಕರಾಗಿ ಕೇವಲ ಪಟ್ಟಣ ಪ್ರದೇಶಕ್ಕೆ ಮಾತ್ರ ಭೇಟಿ ನೀಡುತ್ತಿದ್ದರಾ?
ಇಲ್ಲ. ಪಟ್ಟಣಕ್ಕೂ ಬರುತ್ತಿರಲಿಲ್ಲ. ಎಲ್ಲೋ ಹೈವೇಯಲ್ಲಿ ಬಂದು ಹೋಗುತ್ತಿದ್ದರು. ಅವರು ಯಾವತ್ತೂ ಜನಸಾಮಾನ್ಯರ ಬಗ್ಗೆ ಚಿಂತನೆ ಮಾಡಲೇ ಇಲ್ಲ. ಜನಸಾಮಾನ್ಯರ ಬಗ್ಗೆ ಚಿಂತನೆ ಮಾಡದೇ ಇರುವವರು ಹೇಗೆ ಜನನಾಯಕರಾಗುತ್ತಾರೆ ಹೇಳಿ. ಹೀಗಾಗಿ, ಅವರ ಪುತ್ರನ ವಿಚಾರದಲ್ಲಿ ಜನರು ಬಹಳ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ.

*ಈ ಉಪಚುನಾವಣೆ ಯೋಗೇಶ್ವರ್ ವರ್ಸಸ್‌ ನಿಖಿಲ್ ಕುಮಾರಸ್ವಾಮಿ ಆಗಲಿದೆಯೋ ಅಥವಾ ಡಿ.ಕೆ.ಶಿವಕುಮಾರ್ ವರ್ಸಸ್‌ ಎಚ್.ಡಿ.ಕುಮಾರಸ್ವಾಮಿ ಆಗಲಿದೆಯೋ?
ಆ ತರ ಏನೂ ಇಲ್ಲ. ಈ ಚುನಾವಣೆ ಇಬ್ಬರಿಗೂ ಸಮಬಲವಾದಲ್ಲಿ ನಾನು ಯಾವ ಕಡೆ ಇರುವೆನೋ ಆ ಕಡೆ ವಾಲುತ್ತದೆ. ನಾನು ಕುಮಾರಸ್ವಾಮಿ ಕಡೆ ಇದ್ದಿದ್ದರೆ ಅವರಿಗೆ ಬಿಜೆಪಿ-ಜೆಡಿಎಸ್‌ಗೆ ಅನುಕೂಲವಾಗುತ್ತಿತ್ತು. ಈಗ ಡಿ.ಕೆ.ಶಿವಕುಮಾರ್ ಕಡೆ ಇದ್ದೇನೆ. ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಒನ್ ಪ್ಲಸ್ ಒನ್‌ ಟೂ ಆಗುತ್ತದೆ. ಅವರು (ಶಿವಕುಮಾರ್‌) ಒಂದು ಶಕ್ತಿಯಾದರೆ ನಾನೊಂದು ಶಕ್ತಿ. ಕುಮಾರಸ್ವಾಮಿ ಅವರು ಯಾಕೆ ಈ ಕ್ಷೇತ್ರ ಬಿಟ್ಟು ಮಂಡ್ಯಕ್ಕೆ ಹೋದರು? ಅಧಿಕಾರದ ಆಸೆಗಾಗಿ ತಾನೆ? ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಒಂದು ಕಡೆ ಆನೆ ಹಾವಳಿ. ಕೆರೆ ಕಟ್ಟೆ ತುಂಬಿಸಲಿಲ್ಲ. ಜನರ ಸಮಸ್ಯೆ ಕೇಳಲಿಲ್ಲ. ಸ್ಪಂದಿಸಲಿಲ್ಲ. ಇನ್ನು ಮುಂದೆ ನಾವು ಅದೆಲ್ಲವನ್ನೂ ನಿಭಾಯಿಸುತ್ತೇವೆ.

*ನೀವು ಕಳೆದ ನಾಲ್ಕು ತಿಂಗಳಿಂದಲೂ ಕಾಂಗ್ರೆಸ್ ನಾಯಕರ ಜತೆ ಸಂಪರ್ಕದಲ್ಲಿ ಇದ್ದಿದ್ದಿರಂತೆ ಹೌದೆ?
ಸುಮ್ಮನೆ ಏನೋ ಆರೋಪ ಮಾಡಬೇಕು ಎಂದು ಹೇಳುತ್ತಾರೆ. ಅವರು ನನಗೆ ಟಿಕೆಟ್ ಕೊಡಲಿಲ್ಲ. ಮೋಸ ಮಾಡುತ್ತಿದ್ದಾರೆ ಎಂಬುದು ಗೊತ್ತಾದ ಬಳಿಕ ನಾನು ಕೊನೆಯ ದಿನ ಒಂದು ಗಂಟೆ ಮುಂಚಿತವಾಗಿ ಹೋಗಿ ಕಾಂಗ್ರೆಸ್ ಸೇರ್ಪಡೆಗೊಂಡೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ನನ್ನ ಮೂಲ ಪಕ್ಷಕ್ಕೆ ಸೇರಿಕೊಂಡೆ.

*ಜೆಡಿಎಸ್‌ನಿಂದ ಬೇಡ ಎಂದಾದರೆ ಬಿಜೆಪಿಯಿಂದಲೇ ಟಿಕೆಟ್‌ ಕೊಡಲು ಸಿದ್ಧನಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ?
ಎಲ್ಲಿ ಕೊಟ್ಟರು ಹೇಳಿ. ನಾನು ಅದಕ್ಕಾಗಿ ಬಾಯಿ ಬಡಿದುಕೊಂಡರೂ ಒಪ್ಪಲಿಲ್ಲ. ನಮ್ಮ ಗೋಳು ಆ ದೇವರಿಗೆ ಗೊತ್ತು. ಈಗ ನಾನು ಕಾಂಗ್ರೆಸ್ ಸೇರಿದ ಮೇಲೆ ಆ ಮಾತನ್ನು ಹೇಳುತ್ತಿರಬಹುದು. ಆದರೆ, ನಾನು ಬಿಜೆಪಿಯಲ್ಲಿದ್ದಾಗ ಒಂದು ಸಲವೂ ಹಾಗೆ ಹೇಳಲಿಲ್ಲ. ಬರಿ ಸುಳ್ಳು ಹೇಳಿಕೊಂಡು ಬಂದರು. ತಮ್ಮ ಮಗನನ್ನು ಪ್ರತಿಷ್ಠಾಪನೆ ಮಾಡಬೇಕು ಎಂಬ ಉದ್ದೇಶದಿಂದಲೇ ಅವರು ಪ್ಲ್ಯಾನ್ ಮಾಡಿಕೊಂಡಿದ್ದರು.

*ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದರೂ ಬೆಂ.ಗ್ರಾ. ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದೀರಿ ಎಂಬ ಆರೋಪ ಕೇಳಿಬಂದಿದೆ?
ಕುಮಾರಸ್ವಾಮಿ ಅವರಿಗೆ ತಳಮಟ್ಟದ ವಾಸ್ತವಾಂಶ ಗೊತ್ತಿಲ್ಲ. ನಾವು ಇಷ್ಟು ವರ್ಷಗಳ ಕಾಲ ಕುಮಾರಸ್ವಾಮಿ ಅವರಿಗೆ ವಿರುದ್ಧವಾಗಿ ರಾಜಕಾರಣ ಮಾಡಿಕೊಂಡು ಬಂದಿದ್ದೆನಲ್ಲ, ಹಾಗಾಗಿ ನಾವು ಜತೆಗೂಡಿದರೂ ಮನಸ್ಥಿತಿ ಗಟ್ಟಿಯಾಗಲಿಲ್ಲ. ಇದು ಕುಮಾರಸ್ವಾಮಿ ಅವರಿಗೆ ಅರ್ಥವಾಗಬೇಕಾಗಿತ್ತು. ಲೋಕಸಭಾ ಚುನಾವಣೆಯ ವೋಟಿಂಗ್ ಪ್ಯಾಟರ್ನ್ ಬೇರೆ. ಇವತ್ತಿನ ಉಪಚುನಾವಣೆಯ ವೋಟಿಂಗ್ ಪ್ಯಾಟರ್ನ್‌ ಬೇರೆ. ಇವತ್ತು ಮತಗಳ ಸಮೀಕರಣ ಬೇರೆಯಾಗಿದೆ.

*ಚನ್ನಪಟ್ಟಣ ಕ್ಷೇತ್ರದ ಜನರು ನಿಮಗೆ ಯಾಕೆ ಮತ ನೀಡಬೇಕು ಎಂದು ಬಯಸುತ್ತೀರಿ?
ಕ್ಷೇತ್ರದ ಜನರು ಅಭಿವೃದ್ಧಿಗೆ ಮತ ನೀಡುತ್ತಾರೆ. ಯೋಗೇಶ್ವರ್ ಪರವಾಗಿದ್ದಾರೆ. ಯೋಗೇಶ್ವರ್ ಎಲ್ಲೆಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಲ್ಲಿ ಬರುತ್ತಾರೆ. ಪಕ್ಷದಷ್ಟೇ ಯೋಗೇಶ್ವರ್ ಬಲಶಾಲಿಯಾಗಿದ್ದಾರೆ. ಈ ಚುನಾವಣೆ ಫಲಿತಾಂಶ ನಮ್ಮ ಪರವಾಗಿ ಆಗುವುದು ನಿಶ್ಚಿತ.

*ಎಷ್ಟು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ನಿಮಗೆ?
50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಕಾದು ನೋಡಿ.

*ಈ ಉಪಚುನಾವಣೆಯಲ್ಲಿ ಪ್ರಸ್ತಾಪವಾಗುತ್ತಿರುವ ಪ್ರಮುಖ ವಿಚಾರಗಳೇನು?
ಚನ್ನಪಟ್ಟಣ ತಾಲೂಕನ್ನು ಕುಮಾರಸ್ವಾಮಿ ಅವರು ನಿರ್ಲಕ್ಷ್ಯ ಮಾಡಿರುವುದು, ಜನಗಳಿಗೆ ಸ್ಪಂದಿಸದೇ ಇರುವುದು ಮತ್ತು ಜನತೆಗೆ ನನ್ನ ಮೇಲೆ ವಿಶ್ವಾಸವಿರುವುದು. ತೊಂದರೆಯಿಲ್ಲ. ಜನರು ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವೆ.

*ಡಿ.ಕೆ.ಸಹೋದರರು ನಿಮ್ಮನ್ನು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ?
ಆ ಥರ ಏನೂ ಇಲ್ಲ. ನಮ್ಮ ಸರ್ಕಾರವಿದೆ. ನನಗೂ ತಾಲೂಕಿನ ಕೆಲಸಗಳು ಆಗಬೇಕು. ಜನರಿಗೆ ಸಮಾಧಾನವಾಗಬೇಕು. ಯಾರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಮುಖ್ಯವಲ್ಲ. ಅಂತಿಮವಾಗಿ ಕ್ಷೇತ್ರದ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ. ಸಾರ್ವಜನಿಕ ಬದುಕಿನಲ್ಲಿ ಇರುವ ನಾವು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡದಿದ್ದರೆ ಏನು ಪ್ರಯೋಜನ. ನಮ್ಮ ಸ್ವಾರ್ಥದಿಂದ ನೂರು ಮಾತುಗಳನ್ನು ಹೇಳಬಹುದು. ಆದರೆ, ಜನರಿಗೆ ಎಷ್ಟು ನೆರವಾಗುತ್ತೇವೆ ಎಂಬುದೇ ಮುಖ್ಯವಾಗುತ್ತದೆ.

*ಯೋಗೇಶ್ವರ್ ಯಾವಾಗಲೂ ಅಧಿಕಾರ ಇರುವ ಕಡೆ ಹೋಗುತ್ತಾರೆ. ಅವರು ಹೋಗಿದ್ದೇ ಒಳ್ಳೆಯದಾಯಿತು ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹೇಳಿದ್ದಾರೆ?
ಸದಾನಂದಗೌಡರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಹೌದು. ಅಧಿಕಾರ ಇರುವ ಕಡೆಯೇ ಹೋಗಬೇಕು. ಇಲ್ಲದಿದ್ದರೆ ನಮ್ಮ ಮೇಲೆ ಭರವಸೆ ಇಟ್ಟಿರುವ ಜನರಿಗೆ ಒಳ್ಳೆಯದನ್ನು ಮಾಡಲು ಆಗುವುದಿಲ್ಲ.

*ನಿಮ್ಮ ಎದುರಾಳಿ ನಿಖಿಲ್ ಕುಮಾರಸ್ವಾಮಿ ತಮ್ಮನ್ನು ಅಭಿಮನ್ಯು ಎಂದು ಹೇಳಿಕೊಂಡಿದ್ದರು. ಬಳಿಕ ಅವರ ತಂದೆ ಕುಮಾರಸ್ವಾಮಿ ಅವರು ಅಭಿಮನ್ಯು ಅಲ್ಲ ಅರ್ಜುನ ಎಂದು ಬಣ್ಣಿಸಿದ್ದಾರೆ?
ನನಗೆ ಅಭಿಮನ್ಯು, ಅರ್ಜುನ ಮತ್ತೊಂದು ಗೊತ್ತಿಲ್ಲ. ನಾನು ಅದರ ಬಗ್ಗೆ ಯೋಚಿಸುವುದಕ್ಕೂ ಹೋಗುವುದಿಲ್ಲ. ನಾನು ಈ ಚನ್ನಪಟ್ಟಣ ತಾಲೂಕಿನವನು. ಎರಡು ಬಾರಿ ಸೋತಿದ್ದೇನೆ. ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ. ಕುಮಾರಸ್ವಾಮಿ ಅವರಂಥ ಜಾತಿ ಎತ್ತಿಕಟ್ಟಿ ಮಾತನಾಡುವ ವ್ಯಕ್ತಿ ಅಗತ್ಯವಿಲ್ಲ ಎಂಬುದನ್ನು ಜನರು ಫಲಿತಾಂಶದ ಮೂಲಕ ರುಜುವಾತು ಮಾಡುತ್ತಾರೆ.

*91 ವರ್ಷ ವಯಸ್ಸಿನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಮೊಮ್ಮಗನ ಪರವಾಗಿ ಪ್ರಚಾರಕ್ಕೆ ಬರುತ್ತಾರಂತೆ?
ಬರಲಿ. ಅವರು ದೊಡ್ಡವರು. ಅವರು ಸಮಾಜದ ಪರವಾಗಿ ಬರುತ್ತಾರೆಯೋ ಅಥವಾ ಮೊಮ್ಮಗನ ಪರವಾಗಿ ಬರುತ್ತಾರೆಯೋ ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ.

*ನಾನು 2 ಬಾರಿ ಸೋತಿದ್ದೇನೆ. 3ಯ ಬಾರಿ ನನ್ನ ಕೈಬಿಡಬೇಡಿ ಎಂದು ನಿಖಿಲ್ ಕುಮಾರಸ್ವಾಮಿ ಅಲವತ್ತುಕೊಂಡಿದ್ದಾರೆ?
ನಾನು ಕೂಡ 2 ಬಾರಿ ಸೋತಿದ್ದೇನೆ. ನಾನು ಇದೇ ಕ್ಷೇತ್ರದವನು. ಎಲ್ಲಿ ಸೋತಿದ್ದೇನೆಯೋ ಅಲ್ಲೇ ಬೆಂಬಲ ಕೇಳುತ್ತಿದ್ದೇನೆ. ಅದೇ ರೀತಿ ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಿ ಸೋತಿದ್ದಾರೆಯೋ ಅಲ್ಲಿ ಹೋಗಿ ಕೇಳಲಿ. ಅವರು ಮಂಡ್ಯ ಮತ್ತು ರಾಮನಗರದಲ್ಲಿ ಸೋಲು ಅನುಭವಿಸಿದ್ದಾರೆ. ಅಲ್ಲಿ ಹೋಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಅವಕಾಶ ಸಿಕ್ಕಿದ ಕಡೆಯೆಲ್ಲ ಅರ್ಜಿ ಹಾಕುವುದು ಯಾವ ಲೆಕ್ಕ. ನಾನು ಇಲ್ಲೇ ಸೋತಿದ್ದೇನೆ. ಹಾಗಾಗಿ ಮತ್ತೊಮ್ಮೆ ಅವಕಾಶ ಕೊಡಿ ಎಂದು ನಾನು ಕೇಳುವುದರಲ್ಲಿ ನ್ಯಾಯವಿದೆ. ಅವರ ತಂದೆ ಕುಮಾರಸ್ವಾಮಿ ಶಾಸಕರಾಗಿದ್ದರಿಂದ ಅಭಿವೃದ್ಧಿಯಲ್ಲಿ ನಮ್ಮ ಕ್ಷೇತ್ರ ಆರು ವರ್ಷಗಳ ಕಾಲ ಹಿಂದಕ್ಕೆ ಹೋಗಿತ್ತು. ಪಟ್ಟಣದಲ್ಲಿ ಚರಂಡಿಗಳು ಗಬ್ಬು ನಾರುತ್ತಿವೆ. ಒಂದು ಬಸ್‌ ನಿಲ್ದಾಣ ಕಟ್ಟಿಸಲು ಇವರ ಕೈಯಲ್ಲಿ ಆಗಲಿಲ್ಲ.

ಅಕ್ರಮ ಕಟ್ಟಡ ತಡೆಗೆ ಶೀಘ್ರದಲ್ಲೇ ಪ್ರಬಲ ಕಾನೂನು: ಸಿಎಂ ಸಿದ್ದರಾಮಯ್ಯ

*ಕುಮಾರಸ್ವಾಮಿ ಅವರು ಮಾಡದೇ ಇರುವುದನ್ನು ನೀವು ಮಾಡಿ ತೋರಿಸುವಿರಾ?
ಹೌದು. ನಾವು ಒಪ್ಪಿಕೊಂಡ ಮೇಲೆ ತಲೆ ಕೊಡುತ್ತೇವೆ. ಈ ಬಾರಿ ಕ್ಷೇತ್ರದ ಜನರು ನನ್ನನ್ನು ಕೈಬಿಡುವುದಿಲ್ಲ ಎಂದು ನಂಬಿದ್ದೇನೆ.

click me!