ಕೊರೋನಾ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಿಪಿಇ ಕಿಟ್‌ಗಳ ಖರೀದಿಯಲ್ಲಿ 14.21 ಕೋಟಿ ರು. ಭ್ರಷ್ಟಾಚಾರ ಎಸಗಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಆಯೋಗ ಶಿಫಾರಸು ಮಾಡಿದೆ.
ಬೆಂಗಳೂರು (ನ.10): ಕೊರೋನಾ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಿಪಿಇ ಕಿಟ್‌ಗಳ ಖರೀದಿಯಲ್ಲಿ 14.21 ಕೋಟಿ ರು. ಭ್ರಷ್ಟಾಚಾರ ಎಸಗಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಆಯೋಗ ಶಿಫಾರಸು ಮಾಡಿದೆ. ಇದರ ಬೆನ್ನಲ್ಲೇ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಅಗತ್ಯ ಸಿದ್ಧತೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.
ಕೊರೋನಾ ವೇಳೆ ಸ್ಥಳೀಯ ಕಂಪನಿಗಳಲ್ಲಿ 330 ರು.ಗಳಿಂದ 400 ರು.ಗಳಿಗೆ ಪಿಪಿಇ ಕಿಟ್‌ಗಳು ಲಭ್ಯವಿದ್ದರೂ, ಅಧಿಕಾರಿಗಳ ಸಲಹೆ ನಿರ್ಲಕ್ಷ್ಯ ಮಾಡಿ ಐದು ಪಟ್ಟು ದುಬಾರಿ (ಪ್ರತಿ ಕಿಟ್‌ಗೆ 2,117 ರು.) ಪಾವತಿಸಿ ಚೀನಾದ ಕಂಪನಿಗಳಿಂದ 3 ಲಕ್ಷ ಕಿಟ್ ಖರೀದಿಸಲಾಗಿತ್ತು. ಜತೆಗೆ ಹೆಚ್ಚುವರಿಯಾಗಿ ಆಮದು ಮತ್ತು ಸಾಗಣೆ ವೆಚ್ಚ ನೀಡಿ ಕಂಪನಿಗಳಿಗೆ ಲಾಭ ಮಾಡಿಕೊಡಲಾಗಿತ್ತು. ತನ್ಮೂಲಕ 14.21 ಕೋಟಿ ರು.ಗಳ ಭ್ರಷ್ಟಾಚಾರ ಎಸಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ಮೈಕಲ್ ಕುನ್ಹಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
undefined
ಹೆಣ ಹೂಳುವುದರಲ್ಲೂ ಬಿಜೆಪಿಗರು ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಸಿದ್ದರಾಮಯ್ಯ
ಚೀನಾ ಕಂಪನಿಗಳಿಗೆ ಲಾಭ: ಸ್ಥಳೀಯವಾಗಿ ಪಿಪಿಇ ಕಿಟ್ ಲಭ್ಯವಿದ್ದರೂ ಟೆಂಡರ್ ಪ್ರೊಕ್ಯೂರ್‌ಮೆಂಟ್‌ನ ಕನಿಷ್ಠ ನಿಯಮಗಳನ್ನೂ ಪಾಲಿಸದೆ ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ. ಈ ವೇಳೆ ಚೀನಾ ಕಂಪನಿಗಳಿಗೆ ಲಾಭ ಮಾಡಿಕೊಳ್ಳಲು ನಿಯಮ ಉಲ್ಲಂಘನೆ ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟ ಉಂಟುಮಾಡಿದ್ದಾರೆ. ಇದರಲ್ಲಿ ಅಂದಿನ ಮುಖ್ಯಮಂತ್ರಿಗಳು ಹಾಗೂ ಅಂದಿನ ಆರೋಗ್ಯ ಸಚಿವರ ಪಾತ್ರ ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಅಂದಿನ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಕ್ರಮಗಳು ಅಕ್ಷಮ್ಯ ಅಪರಾಧ. ಕೊರೋನಾ ನಿರ್ವಹಣೆಯಲ್ಲಿ ಅಕ್ಷರಶಃ ತಮ್ಮ ಹುದ್ದೆಗಳ ಶೋಷಣೆ ಮಾಡಿದ್ದಾರೆ. ಹೀಗಾಗಿ ಶಿಸ್ತುಕ್ರಮ ಆಗಲೇಬೇಕು. ಇಬ್ಬರ ಮೇಲೆ 1988ರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 7 ಮತ್ತು 11ರ ಅಡಿ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸಬೇಕು. ಐಪಿಸಿ ಸೆಕ್ಷನ್ 405/406 ಅಡಿ ಹೆಚ್ಚುವರಿಯಾಗಿ ವೆಚ್ಚ ಮಾಡಿರುವ 14.21 ಕೋಟಿ ರು.ಗಳನ್ನು ವಸೂಲಿ ಮಾಡಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಪಿಪಿಇ ಕಿಟ್ ಖರೀದಿಯಲ್ಲಿ ವ್ಯಾಪಕ ಅಕ್ರಮ: 2020ರ ಜು.2ರಂದು 1 ಲಕ್ಷ ಪಿಪಿಇ ಕಿಟ್ ಹಾಗೂ 2020ರ ಏ.10ರಂದು 2 ಲಕ್ಷ ಪಿಪಿಇ ಕಿಟ್ ಖರೀದಿಗೆ ಬಿಗ್ ಫಾರ್ಮಾಸ್ಯುಟಿಕಲ್ಸ್ ಹಾಗೂ ಡಿಎಚ್‌ಬಿ ಗ್ಲೋಬಲ್ ಹಾಂಗ್‌ಕಾಂಗ್ (ಚೀನಾ) ಕಂಪನಿಗಳಿಗೆ ಟೆಂಡರ್ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಈ ವೇಳೆ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಗ್ಲೋಬಲ್ ಟೆಂಡರ್ ಆಹ್ವಾನಿಸಲು ಸಲಹೆ ನೀಡಿದ್ದರು. ಆದರೆ ತುರ್ತು ಕಾರಣ ನೀಡಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ನೇರವಾಗಿ ಚೀನಾದಿಂದ ನೇರವಾಗಿ ಖರೀದಿ ಮಾಡಲು ಖರೀದಿಗೆ 2020ರ ಏ.2ರಂದು ಆದೇಶ ಮಾಡಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದೇ ದಿನ ಎರಡೆರಡು ದರ: ಈ ವೇಳೆ ಪ್ರತಿ ಪಿಪಿಇ ಕಿಟ್‌ಗೆ 2,117.53 ರು.ಗಳಂತೆ ಡಿಎಚ್‌ಬಿ ಗ್ಲೋಬಲ್ ಹಾಂಕ್‌ಕಾಂಗ್ ಕಂಪನಿಯಿಂದ 1 ಲಕ್ಷ ಕಿಟ್‌ಗಳನ್ನು ಒಟ್ಟು 21.17 ಕೋಟಿ ರು.ಗಳಿಗೆ ಖರೀದಿಸಲು ಹಾಗೂ ಏಳು ದಿನಗಳಲ್ಲಿ ಡೆಲಿವರಿ ನೀಡಲು ಆದೇಶ ಮಾಡಲಾಯಿತು. ಮತ್ತೊಂದು ಆದೇಶದಲ್ಲಿ 2020ರ ಏ.10ರಂದು ಅದೇ ಡಿಎಚ್‌ಬಿ ಗ್ಲೋಬಲ್ ಹಾಂಗ್‌ಕಾಂಗ್ ಕಂಪನಿಗೆ 1 ಲಕ್ಷ ಕಿಟ್‌ಗಳನ್ನು 2,104 ರು.ಗಳಂತೆ ಖರೀದಿ ಮಾಡಲು ನಿರ್ಧರಿಸಲಾಯಿತು. ಇನ್ನು ಅದೇ ದಿನ ಬಿಗ್ ಫಾರ್ಮಾಸ್ಯುಟಿಕಲ್ಸ್ ಎಂಬ ಕಂಪನಿಗೆ ಪ್ರತಿ ಕಿಟ್‌ಗೆ 2,049 ರು.ಗಳಂತೆ ಖರೀದಿ ಮಾಡಲು ಆದೇಶ ಮಾಡಲಾಯಿತು. ಒಂದೇ ದಿನ ಮೂರು ಪ್ರತ್ಯೇಕ ಆದೇಶಗಳಲ್ಲಿ ಪ್ರತ್ಯೇಕ ದರ ಯಾಕೆ ಎಂಬ ಬಗ್ಗೆ ಸಮರ್ಥನೆ ನೀಡಿಲ್ಲ. ಇದರಿಂದ 1.22 ಕೋಟಿ ರು. ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏಕಾಏಕಿ ಟೆಂಡರ್ ದರ ಹೆಚ್ಚಳ: ಆಯೋಗವು ಪರಿಶೀಲನೆ ನಡೆಸಿದ ವೇಳೆ ಕೆಎಸ್ಎಂಎಸ್‌ಸಿಎಲ್ (ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ) ಮೂಲಕ ಅತಿ ಕಡಿಮೆ ದರಕ್ಕೆ ಪೂರೈಕೆ ಮಾಡಲು ಸ್ಥಳೀಯ ಉತ್ಪಾದಕರೇ ಸಿದ್ಧರಿದ್ದರು. ವಿದೇಶದಿಂದ ದುಬಾರಿ ಬೆಲೆಗೆ ಖರೀದಿ ಮಾಡಿರುವ ಇದೇ ಸಂಸ್ಥೆಯು 2020ರ ಮಾ.14ರಂದು ಪ್ಲಾಸ್ಟಿ ಸರ್ಜ್ ಇಂಡಸ್ಟ್ರೀಸ್ ಪ್ರೈ.ಲಿಮಿಟೆಡ್‌ನಿಂದ 1.5 ಲಕ್ಷ ಪಿಪಿಇ ಕಿಟ್‌ಗಳನ್ನು ಕೇವಲ 330.40 ರು.ಗಳಂತೆ ಖರೀದಿ ಮಾಡಲು ಆದೇಶ ನೀಡಿತ್ತು. ಆದರೆ, ಇದನ್ನು ಮಾ.27ರಂದು ನಿಯಮ ಬಾಹಿರವಾಗಿ ತಿದ್ದಿದ್ದು, 330.40 ರು.ಗಳನ್ನು 725 ರು.ಗೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.
ಸ್ಥಳೀಯವಾಗಿ ಲಭ್ಯವಿದ್ದರೂ ವಿದೇಶದಿಂದ ಖರೀದಿ: 2020ರ ಮಾ.24ರಂದು 656.25 ರು.ಗಳ ದರದಂತೆ ಇಂಡಸ್ ಬಯೋ ಸೊಲ್ಯೂಷನ್‌ನಿಂದ 2,000 ಪಿಪಿಇ ಕಿಟ್ ಖರೀದಿಸಲಾಗಿದೆ. ಇನ್ನು ಏ.23ರಂದು ಎಂಟು ಇತರೆ ಕಂಪನಿಗಳಿಂದ 1,444.80 ರು.ಗಳಂತೆ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ತನ್ಮೂಲಕ ಸ್ಥಳೀಯವಾಗಿಯೇ ಪಿಪಿಇ ಕಿಟ್‌ಗಳು ಲಭ್ಯವಿದ್ದವು ಎಂಬುದು ಸಾಬೀತಾಗಿದೆ. ಸ್ಥಳೀಯವಾಗಿ ಅತಿ ಕಡಿಮೆ ದರಕ್ಕೆ ಪಿಪಿಇ ಕಿಟ್ ಲಭ್ಯವಿದ್ದರೂ ಚೀನಾದಿಂದ ದುಬಾರಿ ಬೆಲೆಗೆ ಆಮದು ಮಾಡಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ನೋಟ್‌ಶೀಟ್‌ನಲ್ಲಿ ಸ್ಥಳೀಯ ಸರಬರಾಜುದಾರರು ಅಗತ್ಯವಿದ್ದ 5 ಲಕ್ಷ ಕಿಟ್ ಪೂರೈಕೆ ಮಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ಬರೆದಿದ್ದಾರೆ. ಆದರೆ ಭಾರತೀಯ ಕಂಪನಿಗಳು ತಾವು ಪೂರೈಕೆಗೆ ಶಕ್ತರಲ್ಲ ಎಂದು ಹೇಳಿರುವ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಸ್ಥಳೀಯ ಕಂಪನಿಗಳ ಅಭಿಪ್ರಾಯವನ್ನೇ ಪಡೆಯದೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.18.07 ಲಕ್ಷ ಪಿಪಿಇ ಕಿಟ್ ಖರೀದಿ: ಎಲ್ಲಾ ದಾಖಲೆ ಪರಿಶೀಲನೆ ಬಳಿಕ ಕೆಎಸ್‌ಎಂಎಸ್‌ಸಿಎಲ್ ಬರೋಬ್ಬರಿ 18.07 ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದೆ.
ಇವುಗಳನ್ನು 400 ರು.ಗಳಿಂದ 1,444.80 ರು.ವರೆಗೆ ವಿವಿಧ ದರಗಳಲ್ಲಿ ಖರೀದಿ ಮಾಡಿದೆ. ಏ.29ರಂದು ಐದು ಕಂಪನಿಗಳು ಗರಿಷ್ಠ 1,444.80 ರು.ಗೆ ಸರಬರಾಜು ಮಾಡಿವೆ. ಇದೇ ವೇಳೆ ಎಚ್‌ಎಲ್‌ಎಲ್ ಕಂಪನಿಯು 1,087.47 ರು.ಗೆ ಪೂರೈಕೆ ಮಾಡಿದೆ. ವಿದೇಶಿ ಕಂಪನಿಗಳಿಗೆ ಇದಕ್ಕಿಂತ ದುಪ್ಪಟ್ಟು ದರ ನೀಡಿ ಖರೀದಿ ಮಾಡಲಾಗಿದೆ. ಇದರಲ್ಲಿ ಪಾರದರ್ಶಕತೆ ಲೋಪ ವಾಗಿರುವುದು ಹಾಗೂ ನಿರಂಕುಶ ಅಧಿಕಾರ ಪ್ರದರ್ಶನ ಎದ್ದು ಕಾಣುತ್ತಿದೆ. ಪ್ರೊಕ್ಯೂರ್‌ಮೆಂಟ್‌ನ ಕನಿಷ್ಠ ನಿಯಮಗಳನ್ನೂ ಪಾಲನೆ ಮಾಡದೆ ಕೇವಲ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ನಿರ್ದೇಶನದಂತೆ ಖರೀದಿ ಪ್ರಕ್ರಿಯೆ ನಡೆಸಲಾಗಿದೆ ಎಂದು ದೂರಲಾಗಿದೆ.
ಸಾಗಣೆ ವೆಚ್ಚ ಅಕ್ರಮವಾಗಿ ಪಾವತಿ: ಚೀನಾದಿಂದ ಪಿಪಿಇ ಕಿಟ್ ಖರೀದಿ ವೇಳೆ ಸಾಗಣೆ ವೆಚ್ಚ ಸಹಿತ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆದರೂ ಕೋಟ್ಯಂತರ ರು. ಸಾಗಣೆ ವೆಚ್ಚವನ್ನು ಪ್ರತ್ಯೇಕವಾಗಿ ಪಾವತಿ ಮಾಡಲಾಗಿದೆ. ಇನ್ನು ಚೀನಾದ ಡಿಎಚ್‌ಬಿ ಗ್ಲೋಬಲ್ ಹಾಂಕ್‌ಕಾಂಗ್‌ನ 2 ಲಕ್ಷ ಕಿಟ್‌ಗಳ ತೆರಿಗೆ ಪಾವತಿ ವಿವರ ಲಭ್ಯವಿಲ್ಲ. ಡಿಎಚ್‌ಬಿ ಗ್ಲೋಬಲ್ ಕಂಪನಿಯ 2.96 ಲಕ್ಷ ರು. ಮೌಲ್ಯದ 140 ಕಿಟ್ ಪೂರೈಸದಿದ್ದರೂ ಪೂರ್ಣ ಮೊತ್ತ ಪಾವತಿ ಮಾಡಲಾಗಿದೆ. ಇನ್ನು 21.46 ಲಕ್ಷ ರು. ಮೌಲ್ಯದ ಕಿಟ್‌ಗಳ ಗಡುವು ಮುಗಿದಿದ್ದರೂ (ಎಕ್ಸ್ಪೈರಿ) ವಾಪಸು ನೀಡಿಲ್ಲ.
ಪನ್ಸಾರೆ, ಕಲಬುರ್ಗಿ, ಗೌರಿ ಯೋಚನೆ ಕೊಲ್ಲಲು ಆಗಲ್ಲ: ನಟ ಪ್ರಕಾಶ್ ರೈ
ಇನ್ನು ವಿಳಂಬದ ಪೂರೈಕೆಗೆ ದಂಡ ವಿಧಿಸಲು ಅವಕಾಶವಿದ್ದರೂ ಡಿಎಚ್‌ಬಿ ಗ್ಲೋಬಲ್ ಹಾಂಗ್‌ಕಾಂಗ್ ಕಂಪನಿಯಿಂದ 1.57 ಕೋಟಿ ರು. ಹಾಗೂ ಬಿಗ್ ಫಾರ್ಮಾಸ್ಯುಟಿಕಲ್‌ನಿಂದ 1.53 ಕೋಟಿ ರು. ದಂಡ ಸ್ವೀಕಾರ ಮಾಡಿಲ್ಲ. ಇವೆಲ್ಲವುಗಳಿಂದ ಕೋಟ್ಯಂತರ ರು. ನಷ್ಟ ಉಂಟಾಗಿದೆ. ಒಟ್ಟಾರೆ 14.21 ಕೋಟಿ ರು. ನೇರವಾಗಿ ನಷ್ಟ ಉಂಟಾಗಿದ್ದು, ಅದನ್ನು ವಸೂಲಿ ಮಾಡಬೇಕು. ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸಬೇಕು ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.