ಕಾಡಂಚಿನಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ನಿಯಂತ್ರಿಸಲು ನರೇಗಾ ಯೋಜನೆ ಅಡಿ ದಪ್ಪ ಕಲ್ಲಿನ ತಡೆಗೋಡೆ ನಿರ್ಮಿಸುವ ಸಂಬಂಧ ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ರಾಮನಗರ (ಜೂ.05): ಕಾಡಂಚಿನಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿ ನಿಯಂತ್ರಿಸಲು ನರೇಗಾ ಯೋಜನೆ ಅಡಿ ದಪ್ಪ ಕಲ್ಲಿನ ತಡೆಗೋಡೆ ನಿರ್ಮಿಸುವ ಸಂಬಂಧ ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ನಗರದ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಗೂ ವನ್ಯಜೀವಿಗಳ ನಿಯಂತ್ರಣಕ್ಕೆ ಸೋಲಾರ್ ಫೆನ್ಸಿಂಗ್ ನಿರ್ಮಾಣ ಮಾಡಲಾಗುತ್ತಿದೆ.
ಇದೀಗ ಸಂಸದ ಸುರೇಶ್ ಅವರು ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಾಣದ ಉತ್ತಮ ಸಲಹೆ ನೀಡಿದ್ದಾರೆ. ರೈಲ್ವೆ ಬ್ಯಾರಿಕೇಡ್ ಮತ್ತು ಕಲ್ಲಿನ ತಡೆಗೋಡೆಗಳ ತುಲನಾತ್ಮಕ ವರದಿ ಪಡೆದು ಅರಣ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಜಾರಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ರಾಜ್ಯದಲ್ಲಿ ಸುಮಾರು 641 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ತಡೆಗೋಡೆ ನಿರ್ಮಾಣದ ಪ್ರಸ್ತಾವನೆ ಇದೆ. ಈಗಾಗಲೇ 310 ಕಿ.ಮೀ. ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು, ರಾಮನಗರ ಜಿಲ್ಲೆಯಲ್ಲಿ 73 ಕಿ.ಮೀ. ಸೇರಿದಂತೆ ಒಟ್ಟು 331 ಕಿ.ಮೀ. ಬ್ಯಾರಿಕೇಡ್ ನಿರ್ಮಿಸುವುದು ಬಾಕಿ ಇದೆ.
ರಾಮನಗರ, ಬನ್ನೇರುಘಟ್ಟದಲ್ಲಿ ಆನೆ ಕಾರ್ಯಪಡೆ ರಚನೆ: ಸಚಿವ ಈಶ್ವರ ಖಂಡ್ರೆ
ಪ್ರತಿ ಒಂದು ಕಿ.ಮೀ ಬ್ಯಾರಿಕೇಡ್ ನಿರ್ಮಾಣಕ್ಕೆ 1.50 ಕೋಟಿ ಖರ್ಚು ತಗಲುತ್ತಿದ್ದು, ಒಟ್ಟಾರೆ 500 ಕೋಟಿ ರುಪಾಯಿ ಅವಶ್ಯಕತೆ ಇದೆ ಎಂದು ಹೇಳಿದರು. ಇದಲ್ಲದೆ ಸಣ್ಣ ಸಣ್ಣ ಅರಣ್ಯ ಕ್ಷೇತ್ರಗಳಲ್ಲಿ ಸೋಲಾರ್ ಫೆನ್ಸಿಂಗ್ ಅಳವಡಿಸುವಂತೆ ತಜ್ಞರಿಂದ ಸಲಹೆಗಳು ಬಂದಿವೆ. ಇನ್ನೂ 100 ಕಿ.ಮೀ ಸೋಲಾರ್ ಫೆನ್ಸಿಂಗ್ ಅಳವಡಿಸುವ ಕಾಮಗಾರಿ ಬಾಕಿಯಿದೆ. ಇನ್ನು ಸೋಲಾರ್ ನಿರ್ವಹಣೆ ಜವಾಬ್ದಾರಿ ಅರಣ್ಯ ಇಲಾಖೆಯ ಹೆಗಲ ಮೇಲಿದೆ. ಸಾಮಾನ್ಯವಾಗಿ ಆನೆಗಳು ಹಲಸಿನ ಹಣ್ಣು, ಕಬ್ಬು, ಕಾಫಿ ಬೀಜ ತಿನ್ನುವ ಸಲುವಾಗಿ ನಾಡಿಗೆ ಬರುತ್ತವೆ. ಇದನ್ನು ತಡೆಯಲು ಸೌರ ತಂತಿ ಬೇಲಿ ಮತ್ತು ಹ್ಯಾಂಗಿಂಗ್ ಸೌರಬೇಲಿ ಸದ್ಯದ ಪರಿಹಾರವಾಗಿದ್ದು ಇದನ್ನು ಆನೆಗಳ ಹಾವಳಿ ಇರುವ ಪ್ರದೇಶದಲ್ಲಿ ಅಳವಡಿಸಲಾಗುವುದು.
ಮನುಷ್ಯನ ಜೀವಕ್ಕೆ ಪರಿಹಾರ ನೀಡಿ ಬೆಲೆ ಕಟ್ಟಲು ಆಗುವುದಿಲ್ಲ. ವನ್ಯಜೀವಿಗಳಿಂದ ಮಾನವ ಹತ್ಯೆ ಸಂಭವಿಸಬಾರದೆಂದು ಶಾಶ್ವತವಾದ ಯೋಜನೆಗಳನ್ನು ರೂಪಿಸಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. 1980ರಲ್ಲಿ ಅರಣ್ಯ ಕಾಯ್ದೆ ಜಾರಿಗೆ ಬರುವ ಪೂರ್ವದಲ್ಲಿ ಬುಡಕಟ್ಟು ಇತರೆ ಸಮುದಾಯ ಜನರು ಸಾಗುವಳಿ ಮಾಡುತ್ತಿದ್ದರು. ಅವರನ್ನು ಒಕ್ಕಲೆಬ್ಬಿಸುವ ಕೆಲಸದಿಂದ ತೊಂದರೆಯಾಗುತ್ತಿದೆ ಎಂಬ ಕೂಗು ರಾಜ್ಯಾದ್ಯಂತ ಕೇಳಿ ಬರುತ್ತಿದೆ. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿಯೂ ಚರ್ಚೆಗಳು ನಡೆದಿವೆ. ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆದಿದೆ.
ಅರಣ್ಯ ವೃದ್ಧಿ ಒಂದೆಡೆಯಾದರೆ, ಜನವಸತಿ ಪ್ರದೇಶ ಇರುವ ಜಾಗವನ್ನು ಜನರಿಗೆ ನೀಡಬೇಕಿದ್ದು ಇವೆರಡುಗಳ ಸಮನ್ವಯವನ್ನು ಮಾಡಿ ಜನರಿಗೆ ನ್ಯಾಯ ಒದಗಿಸಬೇಕಿದೆ. ಈಗಾಗಲೇ ಸರ್ಕಾರದಿಂದ ಸುಪ್ರೀಂ ಕೋರ್ಟಿಗೆ ಶಿಫಾರಸ್ಸು ಮಾಡಲಾಗಿದೆ. ಇದೀಗ 3 ಸಾವಿರ ಎಕರೆ ಪ್ರಸ್ತಾವನೆ ಸಿದ್ದವಾಗುತ್ತಿದೆ ಎಂದು ಹೇಳಿದರು. ಬುಡಕಟ್ಟು ಸಮುದಾಯ ಸೇರಿ ಇತರೆ ಜನ ವಸತಿ ಇರುವ ಪ್ರದೇಶಗಳು ಅರಣ್ಯ ಪ್ರದೇಶವೆಂದು ಬರುತ್ತಿದೆ. ಅವರಿಗೆಲ್ಲ ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲ. ಜನಪರ ಕಳಕಳಿ ಇಟ್ಟುಕೊಂಡು ಅವರಿಗೆಲ್ಲ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಅರಣ್ಯ ಪ್ರದೇಶ ಒತ್ತುವರಿ ಆಗದಂತೆಯೂ ಎಚ್ಚರ ವಹಿಸುತ್ತೇವೆ. ವನ್ಯಜೀವಿಗಳಿಂದ ಸಂಭವಿಸುತ್ತಿರುವ ಪ್ರಾಣ ಹಾನಿ ಹಾಗೂ ಬೆಳೆ ಹಾನಿಗೆ ನೀಡುತ್ತಿದ್ದ ಪರಿಹಾರವನ್ನು ದುಪ್ಪಟ್ಟು ಮಾಡಲಾಗಿದೆ.
ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್.ಡಿ.ಕುಮಾರಸ್ವಾಮಿ
ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪ್ರಯತ್ನ ಮಾಡುತ್ತೇನೆ. ರಾಮದೇವರ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಪರಿಸರ ವಾದಿಗಳ ಜೊತೆಗೆ ಚರ್ಚಿಸಿ ಒಮ್ಮತದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಈಶ್ವರ್ ಖಂಡ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಅರಣ್ಯ ಇಲಾಖೆಯ ಡಿಸಿಸಿಎಫ್ ರಾಜು ರಾಜೇಂದ್ರನ್, ಎಸಿಸಿಎಫ್ ಪುಷ್ಕರ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ತಹಸೀಲ್ದಾರ್ ತೇಜಸ್ವಿನಿ, ಡಿಸಿಎಫ್ ದೇವರಾಜು ಇತರರಿದ್ದರು.