‘ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದರೆ ಗೊತ್ತಾಗುತ್ತದೆ. ಹೀಗಾಗಿ ಹೊರಗೆ ಹೋಗಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಪಾದಿಸಿದ್ದಾರೆ.
ಬೆಂಗಳೂರು (ಜು.25): ‘ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ. ಬೆಂಗಳೂರಿನಲ್ಲಿ ಆಪರೇಷನ್ ಮಾಡಿದರೆ ಗೊತ್ತಾಗುತ್ತದೆ. ಹೀಗಾಗಿ ಹೊರಗೆ ಹೋಗಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆಪಾದಿಸಿದ್ದಾರೆ. ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ತೆರಳಿದ ಮರುದಿನವೇ ಶಿವಕುಮಾರ್ ನೀಡಿರುವ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಜತೆಗೆ ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ‘ಶತ್ರುವಿನ ಶತ್ರು ಮಿತ್ರ ಎಂಬ ತಂತ್ರಗಾರಿಕೆ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಅದು ಏನಾಗುತ್ತದೆಯೋ ನೋಡಬೇಕು’ ಎಂದು ಮಾರ್ಮಿಕವಾಗಿ ಹೇಳಿದರು. ಕಾಂಗ್ರೆಸ್ ಪಕ್ಷವು ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಪ್ರತಿ ನಡೆಯೂ ಟ್ರ್ಯಾಕ್ ಆಗುತ್ತಿದೆ. ಮುಂದೇನು ಆಗಲಿದೆ ಎಂಬುದನ್ನು ನೋಡೋಣ ಎಂದು ಸೂಚ್ಯವಾಗಿ ತಿಳಿಸಿದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆಗೆ ಮುಂದಾಗಿದ್ದು, ಇಲ್ಲಿ ಹಾಗೂ ದೆಹಲಿಯಲ್ಲಿ ಮಾತುಕತೆ ಮಾಡಲಾಗದೆ ಸಿಂಗಾಪುರಕ್ಕೆ ತೆರಳಿದ್ದಾರೆ.
ಸಂಪತ್ತನ್ನು ಹಂಚಿ ತಿನ್ನುವ ಸ್ವಭಾವ ಹೊಂದಿ: ಶಾಸಕ ಲಕ್ಷ್ಮಣ ಸವದಿ
ಹೊರಗೆ ಹೋಗಿ ಚರ್ಚೆ ಮಾಡುವವರು ಹೋಗಲಿ. ಇಲ್ಲಿ ಚರ್ಚೆ ಮಾಡುವವರು ಮಾಡಲಿ. ಎಲ್ಲಿ ಯಾವ ಸಭೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರು ವಾಸ್ತವವಾಗಿ ತಮ್ಮ ಕುಟುಂಬ ಸಮೇತ ಯುರೋಪ್ ಪ್ರವಾಸಕ್ಕೆ ತೆರಳಿದ್ದಾರೆ. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟ ಕುಮಾರಸ್ವಾಮಿ ಅವರು ಹತ್ತು ದಿನಗಳ ಕಾಲ ಪ್ರವಾಸ ಕೈಗೊಂಡು ವಾಪಸಾಗಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಇದೀಗ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದ ಮೂಲಕ ಉತ್ತರ ನೀಡುವರೋ ಅಥವಾ ಅಲ್ಲಿಂದ ವಾಪಸ್ ಬಂದ ಮೇಲೆ ತಿರುಗೇಟು ನೀಡುವರೋ ಎಂಬುದನ್ನು ಕಾದು ನೋಡಬೇಕು.
ಮಳೆ ಅನಾಹುತಕ್ಕೆ ಇಲಾಖೆಗಳು ತಕ್ಷಣ ಸ್ಪಂದಿಸಿ: ನಗರದಲ್ಲಿ ಮಳೆ ಅನಾಹುತ ತಡೆಗೆ ಬಿಬಿಎಂಪಿಯಿಂದ ಕೈಗೊಳ್ಳಲಾಗಿರುವ ಕ್ರಮಗಳು, ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರ ಕಾರ್ಯವೈಖರಿ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ರಾತ್ರಿ ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಬಿಎಂಪಿ ಅನೆಕ್ಸ್ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಮಳೆ ಅನಾಹುತ ಸಂಭವಿಸಿದಾಗ ಅಲ್ಲಿ ದೂರು ದಾಖಲಾಗುವ ಪರಿ, ಅದನ್ನು ಸಂಬಂಧಪಟ್ಟಇಲಾಖೆಗೆ ವರ್ಗಾಯಿಸುವುದು, ಮಳೆ ಅವಾಂತರಕ್ಕೆ ಪರಿಹಾರ ನೀಡಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳುವ ವಿಧಾನ ಹೀಗೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೊಬೈಲ್ ನೋಡಿಕೊಂಡೇ ಬಸ್ ಚಲಾಯಿಸಿದ ಚಾಲಕ: ವೀಡಿಯೋ ವೈರಲ್
ಈ ವೇಳೆ ಅಧಿಕಾರಿಗಳಿಗೆ ನಗರದಲ್ಲಿ ದಿನದಿಂದ ದಿನಕ್ಕೆ ಮಳೆ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಜನರಿಂದ ದೂರು ಬಂದರೆ ಅದನ್ನು ಕೂಡಲೇ ಪರಿಹರಿಸಲು ಜಲಮಂಡಳಿ, ಅಗ್ನಿ ಶಾಮಕ ದಳ ಹೀಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದರ ಬಗ್ಗೆ ಸೂಚಿಸಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಬಿಬಿಎಂಪಿಯ ಇಂಟಿಗ್ರೇಟೆಡ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 1533ಗೆ ಕರೆ ಮಾಡಿ ಮಳೆ ಅನಾಹುತ ಮತ್ತು ನೆರವಿನ ಕುರಿತು ದೂರು ದಾಖಲಿಸಬಹುದಾಗಿದೆ. ಅದರ ಜತೆಗೆ ಎಲ್ಲ 8 ವಲಯಗಳಲ್ಲೂ ಪ್ರತ್ಯೇಕ ಸೂಕ್ತ ಸಿಬ್ಬಂದಿ ಮತ್ತು ಯಂತ್ರಗಳನ್ನು ನಿಯೋಜಿಸಲಾಗಿದೆ. ಜತೆಗೆ 8 ವಲಯಗಳಲ್ಲೂ ಶಾಶ್ವತ ನಿಯಂತ್ರಣ ಕೊಠಡಿ ಹಾಗೂ 64 ಉಪವಿಭಾಗಗಳಲ್ಲಿ ತಾತ್ಕಾಲಿಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.