ಶಿವಲಿಂಗೇಗೌಡ ಸ್ಪರ್ಧೆ ಇಲ್ಲದೆ ಕಾಂಗ್ರೆಸ್‌ ಗೆಲುವಿಲ್ಲ: ಮಾಜಿ ಸಚಿವ ಬಿ.ಶಿವರಾಮು

By Kannadaprabha NewsFirst Published Jan 15, 2024, 10:43 PM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧಿಸಲು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಟಿಕೆಟ್ ನೀಡದಿದ್ದರೆ ವ್ಯತಿರಿಕ್ತ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಬಿ.ಶಿವರಾಮು ಹೇಳಿದರು. 

ಅರಸೀಕೆರೆ (ಜ.15): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧಿಸಲು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಟಿಕೆಟ್ ನೀಡದಿದ್ದರೆ ವ್ಯತಿರಿಕ್ತ ಫಲಿತಾಂಶ ಬರುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಬಿ.ಶಿವರಾಮು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ಹಿಡಿಯಲೇಬೇಕು ಎನ್ನುವ ಸಂಕಲ್ಪದೊಂದಿಗೆ ರಾಹುಲ್ ಗಾಂಧಿ ಮಣಿಪುರದಿಂದ ಈಗಾಗಲೇ ನ್ಯಾಯ ಯಾತ್ರೆ ಆರಂಭಿಸಿದ್ದಾರೆ. ರಾಜ್ಯದ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಸಮರ್ಥ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ತೀರ್ಮಾನಿಸಿದೆ. 

ಚಾಣಾಕ್ಯ ನಡೆ, ಸಂಪನ್ಮೂಲ, ಸಂಘಟನೆ ಹಾಗೂ ಸೂಕ್ತ ತಂತ್ರಗಾರಿಕೆ ಮೂಲಕ ಸ್ವಂತಶಕ್ತಿ ಹೊಂದಿರುವ ಶಾಸಕನ ಅಗತ್ಯವಿದೆ. ಆದ್ದರಿಂದ ಕೆ.ಎಂ.ಶಿವಲಿಂಗೇಗೌಡರೇ ಸೂಕ್ತ ಅಭ್ಯರ್ಥಿಯಾಗಿದ್ದಾರೆ.ಇವರನ್ನು ಹೊರತುಪಡಿಸಿ ಯಾರೇ ಕಣಕ್ಕಿಳಿದರೂ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಅನುಕೂಲವಾಗಲಿದ್ದು ಒಂದು ಸ್ಥಾನ ಕೈತಪ್ಪಲಿದೆ.ವಾಸ್ತವ ಮನಗಂಡು ಪಕ್ಷದ ಏಕೈಕ ಹಾಗೂ ಗೆಲ್ಲುವ ಸಾಮರ್ಥ್ಯ ಹೊಂದಿರುವ ಶಾಸಕರಿಗೆ ಟಿಕೆಟ್ ನೀಡುವಂತೆ ರಾಜ್ಯ ಹಾಗೂ ದೆಹಲಿ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೈಕಮಾಂಡ್ ಸ್ಪರ್ಧೆಗೆ ಹಸಿರು ನಿಶಾನೆ ತೋರಿದರೆ ಗೆಲುವಿಗೆ ಒಗ್ಗಟ್ಟಿನ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಕೊಡಗಿನ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ಮರಳಿನ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದ ಶ್ರೀರಾಮ: ಇಂದಿಗೂ ನಡೆಯುತ್ತೆ ಪೂಜೆ!

ಮೂರು ಬಾರಿ ಜೆಡಿಎಸ್ ಪ್ರತಿನಿಧಿಸಿ ಶಾಸಕರಾಗಿದ್ದವರನ್ನು ಸರ್ಕಾರ ರಚನೆಗೆ ಸಂಖ್ಯಾಬಲದ ಅಗತ್ಯ ಹಾಗೂ ಗೆಲುವಿನ ಮಾನದಂಡ ಮುಂದಿಟ್ಟು ನಾಲ್ಕನೇ ಬಾರಿ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು ಫಲ ನೀಡಿದೆ. ಮತ್ತೊಂದೆಡೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳ ಮೇಲೆ ಈಗಾಗಲೇ ಅವರು ಹಿಡಿತ ಹೊಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿಯೂ ಫಲಿತಾಂಶ ಮರುಕಳಿಸುವುದು ನಿಶ್ಚಿತ. ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನ ಮಾಡುವ ವೇಳೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ಕಲ್ಪಿಸುವಂತೆ ದೆಹಲಿ ಹಾಗೂ ರಾಜ್ಯದ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಕಳೆದ ತಿಂಗಳಿನಿಂದ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭ್ಯರ್ಥಿಯಾದರೆ ಗೆಲುವು ಸುಗಮ ಎನ್ನುವ ಅಭಿಪ್ರಾಯ ಎಲ್ಲಡೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನು ಶೀಘ್ರವೇ ನಡೆಸಿ ಚುನಾವಣಾ ತಂತ್ರಗಾರಿಕೆ ರೂಪಿಸಲು ನಿರ್ಧರಿಸಲಾಗಿದೆ ಎಂದರು.

ಅಭಿಮನ್ಯು ಎದುರು ಭೀಮನ ಘರ್ಜನೆ: ನಿಖಿಲ್ ಚಿತ್ರಕ್ಕೆ ವಿಲನ್ ಆದ ದುನಿಯಾ ವಿಜಯ್!

ಕೆಪಿಸಿಸಿ ಸದಸ್ಯ ಜಿ.ಬಿ.ಶಶಿಧರ್ ಮಾತನಾಡಿ, ‘ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎನ್ನುವ ಉದ್ದೇಶದಿಂದ ಬಿ.ಶಿವರಾಮು ಬೇಲೂರು ಕ್ಷೇತ್ರಕ್ಕೆ ಹೋಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಾನು ತ್ಯಾಗ ಮಾಡಿದ್ದರಿಂದಲೇ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಅವಕಾಶ ದೊರೆತಿದ್ದರಿಂದ ಗೆಲುವು ಸುಗಮವಾಗಿದೆ.ಇದೀಗ ಗೆಲುವೇ ಮಾನದಂಡವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಶಾಸಕರಿಗೆ ಪಕ್ಷ ಟಿಕೆಟ್ ನೀಡಬೇಕು ಎನ್ನುವ ಎಲ್ಲರ ನಿಲುವಿಗೆ ಬದ್ಧನಿದ್ದು ಹೈಕಮಾಂಡ್ ಹಾಸನ ಲೋಕಸಭಾ ಕ್ಷೇತ್ರದ ಗೆಲುವಿನ ದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ’ ಎಂದು ಹೇಳಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಾಧರ್, ನಗರಸಭೆ ಸದಸ್ಯ ವೆಂಕಟಮುನಿ, ತಾಪಂ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದೇಶಾಣಿ ಆನಂದ್, ನಗರಸಭೆ ಮಾಜಿ ಸದಸ್ಯರಾದ ಉಮಾಶಂಕರ್ ಯೂನಿಸ್, ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಹುಲ್ಲೇನಹಳ್ಳಿ ರಘು, ಮುನ್ನಾ, ಸಿರಾಜ್ ಆಹಮದ್, ಸಮೀರ್, ಚಗಚಗೆರೆ ರಾಮಚಂದ್ರು, ದಿನೇಶ್‌ ಇದ್ದರು.

click me!