ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.
ಶಿವಮೊಗ್ಗ, (ಏ.30): ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲತಾಂಶ ಇಂದು (ಶುಕ್ರವಾರ) ಪ್ರಕಟವಾಗಿದ್ದು, ಆಡಳಿತರೂಢ ಪಕ್ಷ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪ್ರಭಾವಿ ಸಚಿವ, ಶಾಸಕರಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಸಂಸದ ರಾಘವೇಂದ್ರ, ಸಚಿವ ಈಶ್ವರಪ್ಪ, ಪ್ರಭಾವಿ ಶಾಸಕರೆಲ್ಲ ಭದ್ರಾವತಿಯಲ್ಲಿ ಪ್ರಚಾರ ನಡೆಸಿದ್ದರು. ಭದ್ರಾವತಿಯಲ್ಲಿ ಗೆದ್ದೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದ್ರೆ, ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ನೇತೃತ್ವದಲ್ಲಿ ಭದ್ರಾವತಿ ನಗರಸಭೆಯ 35 ಸ್ಥಾನಗಳ ಪೈಕಿ ಕಾಂಗ್ರೆಸ್ 18 ಕಡೆ ಗೆಲುವು ಸಾಧಿಸಿದೆ.
ಎಲೆಕ್ಷನ್ ರಿಸಲ್ಟ್: ಬಳ್ಳಾರಿಯಲ್ಲಿ ಕೈ ಕರಾಮತ್ತು, ಬಿಜೆಪಿ, ಶ್ರೀರಾಮುಲುಗೆ ಭಾರೀ ಮುಖಭಂಗ
ಜೆಡಿಎಸ್ 11 ಸ್ಥಾನ, ಬಿಜೆಪಿ 4 ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಗೆಲುವು ಕಂಡಿದ್ದಾರೆ. ಅಭ್ಯರ್ಥಿಯೊಬ್ಬರ ನಿಧನದಿಂದಾಗಿ ಒಂದು ವಾರ್ಡ್‍ನ ಚುನಾವಣೆ ಮುಂದೂಡಲಾಗಿದೆ. ಇದರೊಂದಿಗೆ ಭದ್ರಾವತಿ ನಗರಸಭೆ ಕಾಂಗ್ರೆಸ್ ಪಾಲಾಗಿದೆ.
ಇನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ 15 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಕಂಡಿದೆ. 6 ವಾರ್ಡ್‍ಗಳಲ್ಲಿ ಅಷ್ಟೇ ಬಿಜೆಪಿ ಗೆದ್ದಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಶಿವಮೊಗ್ಗ ಜಿಲ್ಲೆಯ ಎರಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ಶಾಕ್ ಕೊಟ್ಟಿದ್ದಾರೆ. ಇದು ಒಂದು ರೀತಿ ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಯಡಿಯೂರಪ್ಪ ಇದೆಲ್ಲಾ ನಡೆಯಲ್ಲ: ಸಿಎಂಗೆ ಶಾಸಕ ಖಡಕ್ ಎಚ್ಚರಿಕೆ
ವಿವಾದದಲ್ಲೂ ಗೆದ್ದು ಬೀಗಿದ ಸಂಗಮೇಶ್
ಇತ್ತೀಚೆಗೆ ಭದ್ರಾವತಿಯಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾವಳಿ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಈ ಘಟನೆ ಸಂಬಂಧ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಅವರ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಸಂಗಮೇಶ್ ಪುತ್ರನನ್ನು ಪೊಲೀಸರು ಬಂಧಿಸಿದ್ದರು.
ಬಳಿಕ ರಾಜ್ಯ ಕಾಂಗ್ರೆಸ್ ನಾಯಕರು ಶಿವಮೊಗ್ಗ ಚಲೋ ಕಾರ್ಯಕ್ರಮ ಮಾಡಿ ಸಂಗಮೇಶ್ ಅವರಿಗೆ ಧೈರ್ಯ ತುಂಬಿದ್ದರು.ಈ ಪ್ರಕರಣ ತಮಗೆ ಪ್ಲಸ್ ಆಗಲಿದೆ ಎಂದು ಬಿಜೆಪಿ ಮುಖಂಡರು ನಂಬಿಕೊಂಡಿದ್ದರು. ಆದರೆ ಭದ್ರಾವತಿ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.