ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲತಾಂಶ ಇಂದು (ಶುಕ್ರವಾರ) ಪ್ರಕಟವಾಗಿದ್ದು, ಆಡಳಿತರೂಢ ಪಕ್ಷ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಬೆಂಗಳೂರು, (ಏ.30): ಕೊರೋನಾ ಎರಡನೇ ಅಲೆಯ ಬಿಕ್ಕಟ್ಟಿನ ನಡುವೆಯೇ ನಡೆದಿದ್ದ ನಗರ ಸಭೆ ಚುನಾವಣೆ ಫಲಿತಾಂಶ ಇಂದು (ಏ.30) ಹೊರ ಬಿದ್ದಿದೆ.
ಪಕ್ಷದ ಚಿಹ್ನೆಗಳ ಮೇಲೆ ನಡೆದ ನಗರಸಭೆ, ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಯಲ್ಲಿ ಬಹುತೇಕ ಹಲವೆಡೆ ಕಾಂಗ್ರೆಸ್ ಅಧಿಕ್ಕಾರಕ್ಕೇರಿದ್ರೆ, ಆಡಳಿತರೂಢ ಬಿಜೆಪಿಗೆ ಮುಖಭಂಗವಾಗಿದೆ. ಈ ಚುನಾವಣೆಗಳ ಫಲಿತಾಂಶದಿಂದ ಕೈ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದೆ.
ಸಿಎಂ ತವರು ಜಿಲ್ಲೆ ಶಿವಮೊಗ್ಗ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ
ಸ್ಥಳಿಯ ಸಂಸ್ಥೆಯ 10 ಸ್ಥಳೀಯ ಸಂಸ್ಥೆಗಳಲ್ಲಿ 7 ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 2 ಕಡೆ ಜೆಡಿಎಸ್ ಗೆದ್ದಿದೆ, ಒಂದು ಕಡೆ ಅದು ಮಡಿಕೇರಿಯಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾಗಾದ್ರೆ, ಯಾರು ಎಲ್ಲಿ ಎಷ್ಟು ಗೆದ್ದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬಳ್ಳಾರಿ ಕೈ ವಶ
ಬಳ್ಳಾರಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದ್ದು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದೆ. 39 ವಾರ್ಡ್ಗಳ ಪೈಕಿ, ಕಾಂಗ್ರೆಸ್ 20, ಬಿಜೆಪಿ 14, ಪಕ್ಷೇತರ ಅಭ್ಯರ್ಥಿಗಳು 5 ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಎಲೆಕ್ಷನ್ ರಿಸಲ್ಟ್: ಬಳ್ಳಾರಿಯಲ್ಲಿ ಕೈ ಕರಾಮತ್ತು, ಬಿಜೆಪಿ, ಶ್ರೀರಾಮುಲುಗೆ ಭಾರೀ ಹಿನ್ನೆಡೆ
ರಾಮನಗರದಲ್ಲಿ ಕೈಗೆ ಬಂಪರ್
ರಾಮನಗರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಸೇರಿದೆ. ಸ್ಪಷ್ಟ ಬಹುತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 31 ವಾರ್ಡ್ಗಳ ಪೈಕಿ ಕಾಂಗ್ರೆಸ್ 19 ಹಾಗೂ ಜೆಡಿಎಸ್ 11 ವಾರ್ಡ್ನಲ್ಲಿ ಗೆಲುವು ಸಾಧಿಸಿದ್ದರೆ, ಒಂದು ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿ ಒಂದು ವಾರ್ಡ್ನಲ್ಲೂ ಖಾತೆ ತೆರೆದಿಲ್ಲ. ಇದರಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ಗೆ ಮುಖಭಂಗವಾಗಿದೆ.
ಹಾಸನ
ಹಾಸನದ ಬೇಲೂರು ಪುರಸಭೆ ಮೊದಲ ಬಾರಿಗೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದ್ದು, ಶತಾಯ ಗತಾಯ ಗೆಲುವು ಸಾಧಿಸಬೇಕು ಎಂದುಕೊಂಡಿದ್ದ ಜೆಡಿಎಸ್ಗೆ ಮುಖಭಂಗವಾಗಿದೆ. 25 ವಾರ್ಡ್ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, 5 ವಾರ್ಡ್ನಲ್ಲಿ ಜೆಡಿಎಸ್ಗೆ ಗೆಲುವಾದರೆ, ಕೇವಲ ಒಂದು ಕಡೆ ಬಿಜೆಪಿ ಗೆಲುವು ಸಾಧಿಸಿದೆ.
ಶಿವಮೊಗ್ಗ
ಜಿಲ್ಲೆಯ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಒಟ್ಟು 35 ವಾರ್ಡ್ಗಳಲ್ಲಿ ಕಾಂಗ್ರೆಸ್ 18 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. 11 ವಾರ್ಡ್ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ. ಉಳಿದ 4 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಇನ್ನು 25 ವರ್ಷಗಳಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಧಿಪತ್ಯಕ್ಕೆ ಸಾಧಿಸಿಕೊಂಡು ಬಂದಿರುವ ಬಿಜೆಪಿಗೆ ಈ ಬಾರಿ ಮುಖಭಂಗವಾಗಿದೆ. ಈ ಬಾರಿ ಚುನಾವಣೆಯಲ್ಲಿ 15 ವಾರ್ಡ್ಗಳ ಪೈಕಿ 9ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ, ಬಿಜೆಪಿ 6 ವಾರ್ಡ್ಗಳಲ್ಲಿ ಗೆದ್ದಿದೆ.
ಬೀದರ್
ಬೀದರ್ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿಲ್ಲ. 15 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 35 ಸ್ಥಾನಗಳ ಪೈಕಿ ಕಾಂಗ್ರೆಸ್ 15, ಬಿಜೆಪಿ 8, ಜೆಡಿಎಸ್ 7, ಎಐಎಂಐಎಂ 2 ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಒಂದು ಸ್ಥಾನದಲ್ಲಿ ಜಯ ಗಳಿಸಿದ್ದಾರೆ.
ನ್ಯಾಯಾಲಯದ ಮೊರೆ ಹೋದ ಕಾರಣ ವಾರ್ಡ್ ಸಂಖ್ಯೆ 26 ಹಾಗೂ 32 ರ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ವಾರ್ಡ್ ಸಂಖ್ಯೆ 28ರ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದೆ.
ಮಡಿಕೇರಿ
ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಾಧಿಸಿದೆ. ನಗರಸಭೆಯ ಒಟ್ಟು ಸ್ಥಾನ - 23 ಪೈಕಿ ಬಿಜೆಪಿ - 16, ಎಸ್.ಡಿ.ಪಿ.ಐ -5, ಕಾಂಗ್ರೆಸ್ - 1 ಹಾಗೂ ಜೆಡಿಎಸ್ - 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.