ಬಿಜೆಪಿ ಟಿಕೆಟ್‌ ಘೋಷಣೆ ನಂತರ ಕಾಂಗ್ರೆಸ್‌ಗೆ 140 ಸ್ಥಾನ: ಸತೀಶ ಜಾರಕಿಹೊಳಿ

By Kannadaprabha News  |  First Published Apr 19, 2023, 10:00 PM IST

ಮೀಸಲಾತಿಯಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದ್ದು, ಮುಸ್ಲಿಮರು ಮತ್ತು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಬಿಜೆಪಿ ಸಾಕಷ್ಟು ಅನ್ಯಾಯ ಮಾಡಿದೆ ಎಂದು ದೂರಿದ ಸತೀಶ ಜಾರಕಿಹೊಳಿ 


ಸವದತ್ತಿ(ಏ.19):  ರಾಜ್ಯದಲ್ಲಿ ಬಿಜೆಪಿ ಟಿಕೆಟ್‌ ಘೋಷಣೆಗಿಂತ ಮುಂಚೆ ಕಾಂಗ್ರೆಸ್‌ ಪಕ್ಷದಿಂದ 110 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಆದರೆ, ಬಿಜೆಪಿ ಟಿಕೆಟ್‌ ಘೋಷಣೆಯಾದ ನಂತರ ಈಗ ಕಾಂಗ್ರೆಸ್‌ ಪಕ್ಷದಿಂದ 140 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳು ಬರಲಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯರವರ ನಿವಾಸದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಡೆಗೆ ನಾವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲದಾಗಿದ್ದು, ಬಿಜೆಪಿಯವರು ತಮ್ಮ ಮನೆಗೆ ಅವರೆ ಬೆಂಕಿ ಹಚ್ಚಿಕೊಂಡು ಅವರನ್ನು ಅವರೇ ಬೈದಾಡುತ್ತಿದ್ದಾರೆ. ಮೀಸಲಾತಿಯಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದ್ದು, ಮುಸ್ಲಿಮರು ಮತ್ತು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಬಿಜೆಪಿ ಸಾಕಷ್ಟು ಅನ್ಯಾಯ ಮಾಡಿದೆ ಎಂದು ದೂರಿದರು.

Tap to resize

Latest Videos

7ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುತ್ತೇನೆ, ರಿಸಲ್ಟ್‌ ಬಂದ ನಂತರ ಮಾತನಾಡ್ತೇನೆ: ಜಾರಕಿಹೊಳಿ

ಜೆಡಿಎಸ್‌ಗೆ ಮತ ಹಾಕುವುದು ನೇರವಾಗಿ ಬಿಜೆಪಿಗೆ ಹಾಕಿದಂತೆ. ಜೆಡಿಎಸ್‌ ಎಲ್ಲಿ ಗಟ್ಟಿಯಾಗಿದೆಯೋ ಅಲ್ಲಿ ಜೆಡಿಎಸ್‌ಗೆ ಮತ ಹಾಕಿ. ಎಲ್ಲಿ ಜೆಡಿಎಸ್‌ ಗಟ್ಟಿಯಾಗಿಲ್ಲ ಅಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಎಚ್‌.ಡಿ.ಕುಮಾರಸ್ವಾಮಿಯವರೇ ಹೇಳಿದ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದರು.

ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಹೋದಂತ ಸೌರವ ಚೋಪ್ರಾ ಮತ್ತು ಪಂಚನಗೌಡ ದ್ಯಾಮನಗೌಡರ ಇಬ್ಬರು ಜೆಡಿಎಸ್‌ ಪಕ್ಷ ಸೇರಿದರೂ ಸಹಿತ ತಮ್ಮ ಗೆಲುವಿಗಿಂತ ಬಿಜೆಪಿ ಪರವಾಗಿ ಅನುಕೂಲವಾಗಲು ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯ ಮಾತನಾಡಿ, ಸವದತ್ತಿ ಯಲ್ಲಮ್ಮಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಕೋನದಲ್ಲಿ ಬದಲಾವಣೆ ಅತ್ಯವಶ್ಯವಾಗಿರುವುದರಿಂದ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಬೇಕು. ಪಕ್ಷ ನಿಷ್ಠೆಯೊಂದಿಗೆ ಮತಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವಂತ ಕಾರ್ಯವನ್ನು ಮಾಡುವುದಾಗಿ ಭರವಸೆ ನೀಡಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಫಕ್ಕೀರಪ್ಪ ಹದ್ದನ್ನವರ, ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಮಾತನಾಡಿದರು. ಸತೀಶ ಜಾರಕಿಹೊಳಿಯವರ ಸಮ್ಮುಖದಲ್ಲಿ ರಾಜು ಕಗದಾಳ, ಗುರುರಾಜ ಬದಾಮಿ ಸೇರಿದಂತೆ ಅನೇಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ರವೀಂದ್ರ ಯಲಿಗಾರ, ಪಂಚಪ್ಪ ಮಲ್ಲಾಡ, ಬಾಬಾಗೌಡ ಪಾಟೀಲ, ಆರ್‌.ವಿ.ಪಾಟೀಲ, ದೀಪಕ ಜಾನ್ವೇಕರ, ಮಹಾಬಳೇಶ್ವರ ಪುರದಗುಡಿ, ಶಿವಾನಂದ ಪಟ್ಟಣಶೆಟ್ಟಿ, ಚಂದ್ರಣ್ಣ ಶಾಮರಾಯನವರ, ಸುಭಾಸ ರಜಪೂತ, ಶಂಕರಯ್ಯ ಪಾಟೀಲ, ಫಕ್ರುಸಾಬ್‌ ದೊಡಮನಿ, ಯಲ್ಲಪ್ಪ ಗೊರವನಕೊಳ್ಳ, ಡಿ.ಡಿ.ಟೋಪೋಜಿ, ಮಲ್ಲು ಜಕಾತಿ, ಬಸವರಾಜ ಪಾಟೀಲ, ಮಲ್ಲಿಕಾರ್ಜುನ ಬೇವೂರ, ಮುನ್ನಾ ಶೆಟ್ಟರ, ಪ್ರಭು ಪ್ರಭುನವರ, ಬಸವರಾಜ ಬಸಲಿಗುಂದಿ, ಶಿವನಗೌಡ ಪಾಟೀಲ, ಮಹಾರಾಜಗೌಡ ಪಾಟೀಲ, ಸುರೇಶ ಬಡಗಿಗೌಡರ, ವಿರುಪಾಕ್ಷ ತೊರಗಲ್ಲ, ಬಿ.ಎನ್‌.ಪ್ರಭುನವರ, ಬಸವರಾಜ ಹಂಪಣ್ಣವರ, ಬಸವರಾಜ ಗುರಣ್ಣವರ, ಸೋಮಯ್ಯ ವಡಿಯರ ಇತರರು ಉಪಸ್ಥಿತರಿದ್ದರು.

'ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ಗೆ 150ಕ್ಕೂ ಹೆಚ್ಚು ಸ್ಥಾನ'

ಸವದತ್ತಿಯಲ್ಲಿ 20 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ಅಧಿ​ಕಾರ ಇಲ್ಲದಾಗಿದ್ದು, ಈಗ ಅವಕಾಶ ಬಂದಿರುವುದರಿಂದ ಎಲ್ಲ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ವಿಶ್ವಾಸ ವೈದ್ಯರ ಪರವಾಗಿ ನಿಂತು ಗೆಲುವಿಗೆ ಪ್ರಯತ್ನ ಮಾಡಬೇಕು. 20 ಸಾವಿರದಿಂದ 30 ಸಾವಿರ ಅಂತರದಿಂದ ಸವದತ್ತಿಯಲ್ಲಿ ನಮ್ಮ ಗೆಲವು ನಿಶ್ಚಿತ. ಏ.24ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸವದತ್ತಿಗೆ ಆಗಮಿಸಲಿದ್ದಾರೆ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!