* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಬ್ರೇಕ್ ಬೀಳುತ್ತಾ?
* ಕರ್ನಾಟಕ ಹೈಕೋರ್ಟ್ ಅಂಗಳದಲ್ಲಿ ಪಾದಯಾತ್ರೆ ಚೆಂಡು
* ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ
ರಾಮನಗರ, (ಜ.12): ಕಾಂಗ್ರೆಸ್ ಪಾದಯಾತ್ರೆ(Congress Padayatra) ನಿಲ್ಲಿಸಲು ಹೈಕೋರ್ಟ್ ಸೂಚಿಸಿದ್ರೆ ಪಾಲಿಸ್ತೇವೆ. ಕೋರ್ಟ್ ಆದೇಶದ ವಿರುದ್ಧವಾಗಿ ನಾವು ನಡೆದುಕೊಳ್ಳಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೇಕೆದಾಟು ಪಾದಯಾತ್ರೆ (Mekedatu Padayatra) ಬಗ್ಗೆ ಕರ್ನಾಟಕ ಹೈಕೋರ್ಟ್ (Karnataka High Court) ಅಸಮಾಧಾನ ವ್ಯಕ್ತಪಡಿಸಿರುವುದರ ಬಗ್ಗೆ ಸುದ್ದುಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ(Siddaramaiah), ಹೈಕೋರ್ಟ್ ಆದೇಶ ನೀಡಿದ್ರೆ ಪಾದಯಾತ್ರೆ (Mekedatu Padayatre) ನಿಲ್ಲಿಸುತ್ತೇವೆ. ನೆಲದ ಕಾನೂನು ಬಗ್ಗೆ ನಮಗೆ ಗೌರವವಿದೆ. ಕೋರ್ಟ್ ತೀರ್ಪುನ್ನ ನಾವು ಪಾಲಿಸುತ್ತೇವೆ. ಜ,14ನೇ ತಾರೀಖು ಏನು ಅನ್ನೋದನ್ನ ಕೋರ್ಟ್ ಸೂಚನೆ ನೀಡಲಿದೆ. ಕೋರ್ಟ್ ಸೂಚನೆ ಅಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
Mekedatu Padayatre: ಹೈಕೋರ್ಟ್ ಗರಂ, ಗೃಹ ಸಚಿವರಿಂದ ತುರ್ತು ಸಭೆ, ಪಾದಯಾತ್ರೆಗೆ ತಡೆ.?
ನಿಯಮ ಪಾಲಿಸುವ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ವಹಿಸಿದೆ. ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲೇ ಜಾತ್ರೆ ನಡೆಸಲಾಗಿದೆ. ಬಿಜೆಪಿಯವರೇ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ. ಕೊವಿಡ್ ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರ ಕಾರಣ ಎಂದು ಆರೋಪಿಸಿದರು.
ವರದಿ ಕೇಳಿದ ಹೈಕೋರ್ಟ್
ಕೊರೋನಾ ಆತಂಖದ ಮಧ್ಯೆ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಡೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಅಸಮಾಧಾನ ಹೊರ ಹಾಕಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ ಎಂದೂ ಕಾಂಗ್ರೆಸ್ ಪಕ್ಷವನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ಪೀಠ ಪ್ರಶ್ನಿಸಿದೆ. ಅಲ್ಲದೇ ಈ ಬಗ್ಗೆ ವರದಿ ನೀಡುವಂತೆ ತಿಳಿಸಿ ಮುಂದಿನ ವಿಚಾರಣೆ ಜ.14ಕ್ಕೆ ಮುಂದೂಡಿದೆ.
ಕೆಪಿಸಿಸಿ ಲೀಗಲ್ ಸೆಲ್ ಅಧ್ಯಕ್ಷಗೆ ಬುಲಾವ್ ಹೋಗಿದೆ. ಲೀಗಲ್ ಸೆಲ್ ಅಧ್ಯಕ್ಷ ವಕೀಲ ಎ.ಎಸ್ ಪೊನ್ನಣ್ಣಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಿಂದ ಕರೆ ಹೋಗಿದ್ದು ರಾಮನಗರಕ್ಕೆ ಕರೆಸಿಕೊಂಡಿದ್ದಾರೆ. ಹೈಕೋರ್ಟ್ನಿಂದ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ವರದಿ ಕೇಳಿದೆ. ಸಂಕ್ಷಿಪ್ತ ವರದಿ ಕೇಳಿದೆ. ಕೋರ್ಟ್ ಕೇಳಿರೋ ಮಾಹಿತಿ ಬಗ್ಗೆ ಚರ್ಚೆ ನಡೆಸಲು ಲೀಗಲ್ ಸೆಲ್ ಅಧ್ಯಕ್ಷ ವಕೀಲ ಎ.ಎಸ್ ಪೊನ್ನಣ್ಣ ಕರೆಸಿಕೊಂಡಿದ್ದಾರೆ.
ವರದಿ ನೀಡುವಂತೆ ಸರ್ಕಾರಕ್ಕೆ ಡೆಡ್‌ಲೈನ್
ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ಮಾಹಿತಿ ನೀಡಲು ಕೆಪಿಸಿಸಿಗೆ ಸೂಚಿನೆ ನೀಡಿದೆ. ಇದೇ ವೇಳೆ ಪಾದಯಾತ್ರೆ ಸಂದರ್ಭದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿರುವ ಕುರಿತು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಒಂದು ದಿನದೊಳಗೆ ತಿಳಿಸಲು ರಾಜ್ಯ ಸರ್ಕಾರಕ್ಕೂ ಸೂಚಿಸಿದೆ.
ಮೇಕೆದಾಟು ಪಾದಯಾತ್ರೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಮೆರವಣಿಗೆಗಳನ್ನು ವಿಶೇಷವಾಗಿ ಕಾಂಗ್ರೆಸ್ ನಡೆಸುವ ಪಾದಯಾತ್ರೆಯನ್ನು ಹೇಗೆ ಮತ್ತು ಏಕೆ ಮುಂದುವರಿಸಲು ಅನುಮತಿ ನೀಡಲಾಗುತ್ತಿದೆ ಮತ್ತು ಅಂತಹ ಯಾವುದೇ ಚಟುವಟಿಕೆಗಳಿಂದ ಕಾಂಗ್ರೆಸ್ ಅನ್ನು ತಡೆಯಲು ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿಸುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ. ವಿಚಾರಣೆಯನ್ನು ಇದೇ ಜ.14ಕ್ಕೆ ಮುಂದೂಡಲಾಗಿದೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೆಂಡಾಮಂಡಲಗೊಂಡಿರುವ ಹೈಕೋರ್ಟ್, ಪಾದಯಾತ್ರೆ ತಡೆಯಲು ರಾಜ್ಯ ಸರ್ಕಾರ ಅಸಮರ್ಥವಾಗಿದೆಯೇ ಎಂದು ಪ್ರಶ್ನೆ ಗಳಮಾಡಿದೆ. ಸರ್ಕಾರ ಮತ್ತು ಕೆಪಿಸಿಸಿಗೆ ಕೋರ್ಟ್ ಒಂದು ದಿನದ ಗಡುವು ನೀಡಿ, ತಕ್ಷಣ ಉತ್ತರಿಸುವಂತೆ ಸೂಚಿಸಿದೆ.
ಪಾದಯಾತ್ರಗೆ ಬ್ರೇಕ್ ಬೀಳತ್ತಾ?
ಹೌದು.. ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ತಡೆಯಲು ರಾಜ್ಯ ಬಿಜೆಪಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದ್ರೆ, ಅದು ಸಾಧ್ಯವಾಗುತ್ತಿಲ್ಲ. ಇದೀಗ ಈ ಕಾಂಗ್ರೆಸ್ ಪಾದಯಾತ್ರೆಗೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕುವ ಸಾಧ್ಯತೆಗಳಿವೆ.
ಕಾಂಗ್ರೆಸ್ ಹಾಗೂ ಸರ್ಕಾರದ ಬಳಿ ವರದಿ ಕೇಳಿದ್ದು, ಈ ವರದಿಯನ್ನಾಧರಿಸಿ ಕೋರ್ಟ್ ಜ.14ಕ್ಕೆ ಮಹತ್ವದ ಆದೇಶ ನೀಡುವ ಸಾಧ್ಯತೆಗಳಿವೆ. ಕೊರೋನಾ ಹೆಚ್ಚಾಗುತ್ತರಿವುದಿರಂದ ಸಾರ್ವಜನಿಕರ ಹಿತದೃಷ್ಠಿಯಿಂದ ಪಾದಯಾತ್ರೆ ಕೂಡಲೇ ನಿಲ್ಲಿಸುವಂತೆ ಕೋರ್ಟ್ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲುತ್ತೋ, ನಡೆಯುತ್ತೋ ಎನ್ನುವುದು ಕೋರ್ಟ್ ಅಂಗಳದಲ್ಲಿದ್ದು, ಜನವರಿ 14ಕ್ಕೆ ತಿಳಿಯಲಿದೆ.