ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550ನ್ನೂ ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದ ಡಿ.ಕೆ.ಶಿವಕುಮಾರ್
ವಿಜಯಪುರ(ಜ.01): ರಾಜ್ಯದಲ್ಲಿ 2023ರಲ್ಲಿ ಹೊಸ ಬದಲಾವಣೆಯಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ತನ್ನ ಸ್ವಂತ ಕಾಲ ಮೇಲೆ ನಿಂತುಕೊಂಡು ಸರ್ಕಾರ ರಚನೆ ಮಾಡುತ್ತದೆ. ಜನ ಕಾಂಗ್ರೆಸ್ ಪಕ್ಷಕ್ಕೆ ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550ನ್ನೂ ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಅಧಿಕಾರ ಇದ್ದಾಗ ಬಿಜೆಪಿಯವರು ಕೆಲಸ ಮಾಡಿಲ್ಲ. ಇದೀಗ ಅಧಿಕಾರ ಹೋಗುವ ಸಮಯದಲ್ಲಿ ಯೋಜನೆ ಘೋಷಣೆ ಮಾಡಿದರೆ ಪ್ರಯೋಜನವೇನು? ಉಳಿದಿರುವ 100 ದಿನಗಳಲ್ಲಿ ಯಾವ ಯೋಜನೆ ಜಾರಿ ಆಗುತ್ತದೆ? ಇದು ಕೇವಲ ಕಾಗದದ ಮೇಲೆ ಉಳಿಯುವ ಯೋಜನೆ ಅಷ್ಟೆಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
BALLARI: ಜನಾರ್ಧನ ರೆಡ್ಡಿಯ ಕೆಆರ್‌ಪಿಪಿ ಪಕ್ಷದ ಬಾವುಟ ಲೋಕಾರ್ಪಣೆ: ಪ್ರಚಾರ ಕಾರ್ಯ ಆರಂಭಿಸಿದ ಲಕ್ಷ್ಮೀ ಅರುಣಾ
ಶಾಲಾ ಮಕ್ಕಳಲ್ಲ:
ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದಂತಿದೆ. ಮೂರು ತಿಂಗಳ ನಂತರ ಎಷ್ಟುಪರ್ಸೆಂಟೇಜ್ ಮೀಸಲಾತಿ ಅಂತ ನಿರ್ಧರಿಸುತ್ತಾರಂತೆ. ಮೀಸಲಾತಿ ವಿಷಯವಾಗಿ ತಗಾದೆ ತೆಗೆದರೆ ಪಕ್ಷದಿಂದ ಕಿತ್ತು ಹಾಕುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮೀಸಲಾತಿ ಬಗ್ಗೆ ಅಷ್ಟೆಲ್ಲ ಮಾತನಾಡುತ್ತಿದ್ದವರು ಈಗ ಯಾಕೆ ಮಾತನಾಡುತ್ತಿಲ್ಲ? ಬೆಂಬಲ ನೀಡಬೇಕು ಅಥವಾ ವಿರೋಧಿಸಬೇಕು. ಬಾಯ್ಮುಚ್ಚಿಕೊಂಡಿರೋದು ಏಕೆ ಎಂದು ಯತ್ನಾಳ ಅವರ ನಡೆಯನ್ನು ಪ್ರಶ್ನಿಸಿದರು. ಜತೆಗೆ, ಮುಖ್ಯಮಂತ್ರಿ ಖುದ್ದಾಗಿ ಈ ಬಗ್ಗೆ ಏಕೆ ನಿರ್ಧಾರ ಪ್ರಕಟಿಸಿಲ್ಲ? ಇವರು ಕೊಡುವ ಚಾಕೊಲೆಟ್ ಒಪ್ಪಲು ಸಾಧ್ಯವಿಲ್ಲ. ಇವರದು ಬರೀ ಮೋಸ. ಎಲ್ಲ ಸಮಾಜಕ್ಕೂ ಬ್ರಹ್ಮಾಂಡ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ನಾವು ಸಮಬಾಳು, ಸಮಪಾಲು ಎಂಬ ನೀತಿ ಮೇಲೆ ಕೇಳುತ್ತಿದ್ದೇವೆ. ಒಕ್ಕಲಿಗರು ಶೇ.12 ರಷ್ಟುಮೀಸಲಾತಿ ಕೇಳಿದ್ದು ಅದನ್ನು ಘೋಷಣೆ ಮಾಡಲಿ. ಪಂಚಮಸಾಲಿ ಸಮಾಜ ಆಗ್ರಹಿಸಿರುವ ಬೇಡಿಕೆಯನ್ನೂ ಘೋಷಿಸಲಿ. ಪರಿಶಿಷ್ಟರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಲಿ. ಈವರೆಗೂ ಕೇಂದ್ರ ಸರ್ಕಾರಕ್ಕೆ ಈ ವಿಚಾರದಲ್ಲಿ ಯಾವುದೇ ಪ್ರಸ್ತಾಪ ಹೋಗಿಲ್ಲ. ಇಲ್ಲಿ ಕೇವಲ ಆದೇಶ ಮಾಡಿದರೆ ಆಗುತ್ತದೆಯೇ? ಎಲ್ಲದಕ್ಕೂ ಕಾನೂನು ತೊಡಕಿದೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳಬಾರದು ಎಂದು ಆಡುತ್ತಿರುವ ನಾಟಕ ಇದೆಲ್ಲ. ಈ ಬಗ್ಗೆ ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ಭಾನುವಾರ ಅಥವಾ ಸೋಮವಾರ ತಿಳಿಸುತ್ತೇವೆ ಎಂದು ಹೇಳಿದರು.