ಅಭ್ಯರ್ಥಿಗಳ ಘೋಷಣೆ : ಕಾದು ನೋಡುವ ತಂತ್ರದ ಮೊರೆ ಹೋದ ಕೈ

By Kannadaprabha NewsFirst Published Nov 11, 2019, 8:58 AM IST
Highlights

ವಿಧಾನಸಭೆಯ 15 ಕ್ಷೇತ್ರಗಳ ಪೈಕಿ ಈಗಾಗಲೇ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿರುವ ಕಾಂಗ್ರೆಸ್, ಉಳಿದಿರುವ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು  ನಡೆದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ.

ಬೆಂಗಳೂರು [ನ.11]: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುವ ತನಕ ಉಳಿದಿರುವ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡದೇ ಕಾದು ನೋಡುವ ತಂತ್ರ ಅನುಸರಿಸಲು ಕಾಂಗ್ರೆಸ್ ನಿರ್ಧರಿಸಿದೆ.

ವಿಧಾನಸಭೆಯ 15 ಕ್ಷೇತ್ರಗಳ ಪೈಕಿ ಈಗಾಗಲೇ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿರುವ ಕಾಂಗ್ರೆಸ್, ಉಳಿದಿರುವ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು  ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರು ಬಾಕಿ ಇರುವ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಮಹತ್ವದ ಸಭೆ ನಡೆಸಿದ್ದು, ಸೋಮವಾರ ಬೆಳಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಬಹುತೇಕ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನೂ ಅಂತಿಮಗೊಳಿಸಲಾಗುತ್ತದೆ. ಆದರೆ ಅನರ್ಹ ಶಾಸಕರ ತೀರ್ಪಿನ ಬಳಿಕವಷ್ಟೇ ಹೆಸರುಗಳನ್ನು ಘೋಷಿಸಲಾಗುವುದು. ಅಲ್ಲಿಯವರೆಗೂ ಕಾದು ನೋಡುವ ತಂತ್ರ ಅನುಸರಿಸ ಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾನುವಾರ ನಡೆದ ಹಿರಿಯ ನಾಯಕರ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಈ ವೇಳೆ ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಡಿ.ಕೆ. ಶಿವಕುಮಾರ್, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಿರಿಯ ನಾಯಕರು ಸುಪ್ರೀಂಕೋರ್ಟ್‌ನಲ್ಲಿ ಅನರ್ಹ ಶಾಸಕರ ಬಗೆಗಿನ ತೀರ್ಪು ಪ್ರಕಟವಾದ ಬಳಿಕ ಅಭ್ಯರ್ಥಿಗಳನ್ನು ನಿರ್ಧರಿಸುವುದು ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಾಗಲೇ ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಹಿರೇಕೆರೂರು, ರಾಣೆಬೆನ್ನೂರು, ಹೊಸಕೋಟೆ, ಚಿಕ್ಕಬಳ್ಳಾಪುರ, ಕೆ.ಆರ್. ಪುರ, ಮಹಾಲಕ್ಷ್ಮೀ ಲೇಔಟ್, ಹುಣಸೂರು, ಯಲ್ಲಾಪುರ ಸೇರಿ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಮೂಲಕ ಎಲ್ಲಾ ಪಕ್ಷಗಳಿಗಿಂತಲೂ ಉಪ ಚುನಾವಣೆ ಸಿದ್ಧತೆಯಲ್ಲಿ ತಾವು ಮುಂದೆ ಇರುವುದಾಗಿ ಸಂದೇಶ ರವಾನಿಸಿದೆ.

ಉಳಿದ ಏಳು ಕ್ಷೇತ್ರಗಳಾದ ಯಶವಂತಪುರ, ಅಥಣಿ, ಕಾಗವಾಡ, ಗೋಕಾಕ್, ವಿಜಯನಗರ, ಶಿವಾಜಿನಗರ, ಕೆ. ಆರ್. ಪೇಟೆ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತು ಗಂಭೀರ ಚರ್ಚೆ ನಡೆಯಿತು. ಈ ವೇಳೆ ಶಿವಾಜಿನಗರ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯಭೇದ ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ. 
ಅನರ್ಹರ ಕ್ಷೇತ್ರಗಳಿಗೆ ಉಪ ಕದನ ಶುರು...

ಶಿವಾಜಿನಗರ ಟಿಕೆಟ್ ಬಗ್ಗೆ ಭಿನ್ನಾಭಿಪ್ರಾಯ: ಸಭೆಯಲ್ಲಿ ಕೆಲವು ಹಿರಿಯ ಸದಸ್ಯರು ಶಿವಾಜಿನಗರ ಕ್ಷೇತ್ರದಿಂದ ರಿಜ್ವಾನ್ ಅರ್ಷದ್‌ಗೆ ಟಿಕೆಟ್ ನೀಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ರಿಜ್ವಾನ್ ಅವರು ಈಗಾಗಲೇ ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದು, ಹಾಲಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅಲ್ಲದೆ ಐಎಂಎ ಪ್ರಕರಣದಲ್ಲೂ ಅವರ ಹೆಸರು ತಳುಕು ಹಾಕಿಕೊಂಡಿದೆ. ಚುನಾವಣೆ ಸಮಯದಲ್ಲಿ ಐಎಂಎ ಪ್ರಕರಣದಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಿದರೆ ಪಕ್ಷಕ್ಕೆ ಮುಜುಗರ ಆಗಲಿದೆ. ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿದ್ದರಿಂದಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಹೀಗಿರುವಾಗ ಐಎಂಎ ಆರೋಪಿಗೆ ಟಿಕೆಟ್ ನೀಡುವುದು ಬೇಡ. ಬದಲಿಗೆ ಸಲೀಂ ಅಹಮದ್ ಅಥವಾ ಮಹಮ್ಮದ್ ಹುಸೇನ್ ಅವರ ಹೆಸರು ಪರಿಗಣಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

click me!