'ಸಿದ್ದು ಮನೆಗೆ ಕಳಿಸೋದೇ ಖರ್ಗೆ ನೀಡುವ ಗುಡ್‌ ನ್ಯೂಸ್‌!'

By Web DeskFirst Published Dec 3, 2019, 7:55 AM IST
Highlights

ಸಿದ್ದುವನ್ನು ಮನೆಗೆ ಕಳಿಸೋದೇ ಖರ್ಗೆ ನೀಡುವ ಗುಡ್‌ ನ್ಯೂಸ್‌!| ಸರ್ಕಾರ ರಚಿಸುವುದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಾಯಕರು ಹಗಲುಗನಸು ಕಾಣುತ್ತಿದ್ದಾರೆ| ಶೋಭಾ ವ್ಯಂಗ್ಯ

ಬೆಂಗಳೂರು[ಡಿ.03]: ಉಪ ಚುನಾವಣೆ ಬಳಿಕ ಮತ್ತೆ ಸರ್ಕಾರ ರಚಿಸುವುದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ನಾಯಕರು ಹಗಲುಗನಸು ಕಾಣುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ. ಈ ತಿಂಗಳ 9ರ ನಂತರ ಸಿಹಿ ಸುದ್ದಿ ಪ್ರಕಟಿಸುವುದಾಗಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮನೆಗೆ ಕಳುಹಿಸುವುದೇ ಆ ಸುದ್ದಿ ಆಗಲಿದೆ ಎಂದೂ ಶೋಭಾ ತೀಕ್ಷ$್ಣವಾಗಿ ಹೇಳಿದ್ದಾರೆ.

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜನರು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸ್ಥಿರ ಸರ್ಕಾರವನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ, ಕೇವಲ 66 ಶಾಸಕರ ಬೆಂಬಲದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಹಗಲುಕನಸು ಕಾಣುತ್ತಿದ್ದಾರೆ. ಯಾವ ಶಾಸಕರನ್ನು ನಂಬಿ ಸರ್ಕಾರ ರಚಿಸಲಿದ್ದಾರೆ? ಯಾವ ರಾಜ್ಯದಲ್ಲಿ ಸರ್ಕಾರ ರಚಿಸಲಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಕರ್ನಾಟಕದಲ್ಲಂತೂ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಜೊತೆ ಹೋಗುವುದೇ ಇಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ರಚನೆಗೆ 113 ಶಾಸಕರ ಬೆಂಬಲ ಬೇಕೆಂಬ ಕನಿಷ್ಠ ಲೆಕ್ಕಚಾರವೂ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ದಾರಿ ತಪ್ಪಿಸಲೆಂದೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌, ಎಚ್‌.ಕೆ.ಪಾಟೀಲ್‌ ಹಾಗೂ ವಿ.ಮುನಿಯಪ್ಪ ಸೇರಿದಂತೆ ಯಾರೊಬ್ಬರೂ ಒಪ್ಪುತ್ತಿಲ್ಲ. ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು ಆಗಿದ್ದಾರೆ. ಪ್ರತಿಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲು ಅವರು ಹೋರಾಟ ನಡೆಸುತ್ತಿದ್ದಾರೆ ಎಂದು ಹಾಸ್ಯವಾಗಿ ಚುಚ್ಚಿದರು.

ಕುಮಾರಸ್ವಾಮಿಯವರೂ ಜೆಡಿಎಸ್‌ ಸರ್ಕಾರದ ಕನಸು ಕಾಣುತ್ತಿದ್ದಾರೆ. ಗೋಕಾಕ್‌ನ ತಮ್ಮ ಪಕ್ಷದ ಅಭ್ಯರ್ಥಿ ಅಶೋಕ್‌ ಪೂಜಾರಿ ಅವರನ್ನು ಸಚಿವರನ್ನಾಗಿ ಮಾಡುತ್ತೇನೆ ಎಂದಿದ್ದಾರೆ. ಇಷ್ಟಕ್ಕೂ ಇವರಿಗೆ ಬೆಂಬಲ ಕೊಡುವವರು ಯಾರು ಎಂದು ಸ್ವತಃ ಕುಮಾರಸ್ವಾಮಿಯವರೇ ಹೇಳಬೇಕು. ಜನರನ್ನು ದಾರಿ ತಪ್ಪಿಸುವ ಕಲೆ ಅವರಿಗೆ ಕರಗತವಾಗಿದೆ ಎಂದು ಕರಂದ್ಲಾಜೆ ಕುಹುಕವಾಡಿದರು.

ಡಿ.9ರ ನಂತರ ಸಿಹಿ ಸುದ್ದಿ ಪ್ರಕಟಿಸುವುದಾಗಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮನೆಗೆ ಕಳುಹಿಸುವುದೇ ಆ ಸುದ್ದಿ ಆಗಲಿದೆ. ಸಿದ್ದರಾಮಯ್ಯ ಜಾತಿ ರಾಜಕಾರಣದಲ್ಲಿಯೇ ತೊಡಗಿಸಿಕೊಂಡವರು. ಯಾರಿಗೂ ಬೇಡವಾದ ಟಿಪ್ಪು ಜಯಂತಿ ಆಚರಣೆಗೆ ಅನುಮತಿಸಿದರು. ಲಿಂಗಾಯತ-ವೀರಶೈವರ ನಡುವೆ ಒಡಕು ಮೂಡಿಸಲು ಯತ್ನಿಸಿದರು. ಕುಮಾರಸ್ವಾಮಿ ಅವರು ಸಹ ಇದೇ ಹಾದಿಯಲ್ಲಿ ಮುಂದುವರೆದರು. ಅವರು ಅಧಿಕಾರದಿಂದ ಕೆಳಗಿಳಿದಾಗ ಯಾರೊಬ್ಬರೂ ಅಳಲಿಲ್ಲ ಎಂದು ಟೀಕಿಸಿದರು.

click me!