ಗೌಡರು ಮಗನಿಗೆ ಕಾಂಗ್ರೆಸ್‌ ಕನ್ಯೆ ಜೊತೆ ಮರುಮದುವೆ ಮಾಡಲ್ಲ!

By Suvarna NewsFirst Published Dec 3, 2019, 7:49 AM IST
Highlights

ಗೌಡರು ಮಗನಿಗೆ ಕಾಂಗ್ರೆಸ್‌ ಕನ್ಯೆ ಜೊತೆ ಮರುಮದುವೆ ಮಾಡಲ್ಲ!| ಡಿಸಿಎಂ ಗೋವಿಂದ ಕಾರಜೋಳ ಲೇವಡಿ| ಚುನಾವಣೆ ನಂತರ ಕಾಂಗ್ರೆಸ್‌ ಕಚೇರಿಗೆ ದೀಪ ಹಚ್ಚೋಕೂ ಯಾರೂ ಇರೋದಿಲ್ಲ

ಬೆಂಗಳೂರು(ಡಿ.03]: ತಮ್ಮ ಪುತ್ರನಿಗೆ ಕಾಂಗ್ರೆಸ್‌ ಕನ್ಯೆ ಜತೆ ಮಾಜಿ ಪ್ರಧಾನಿ ದೇವೇಗೌಡರು ಮರು ಮದುವೆ ಮಾಡುವುದಿಲ್ಲ. ಉಪ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ ಕಚೇರಿಗೆ ದೀಪ ಹಚ್ಚುವುದಕ್ಕೆ ಯಾರೂ ಗತಿ ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಸೋಮವಾರ ಯಶವಂತಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನೇ ತಿಪ್ಪರಲಾಗ ಹಾಕಿದರೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವಿನ ಒಳ ಒಪ್ಪಂದ ವರ್ಕೌಟ್‌ ಆಗುವುದಿಲ್ಲ ಎಂದರು. ಉಪ ಚುನಾವಣಾ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್‌ ನಾಯಕರು ಹೊಸ ಸರ್ಕಾರ ರಚನೆಯ ಕನಸು ಕಾಣುತ್ತಿದ್ದಾರೆ. ಆದರೆ ಉಪ ಚುನಾವಣೆ ನಂತರ ಕಾಂಗ್ರೆಸ್‌ ಕಚೇರಿಗೆ ದೀಪ ಹಚ್ಚೋರೂ ಸಹ ಗತಿ ಇರುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಉಪ ಚುನಾವಣೆಯಲ್ಲಿ ಏನೇ ತಿಪ್ಪರಲಾಗದ ಹಾಕಿದರೂ ಒಳ ಒಪ್ಪಂದ ಕೆಲಸ ಮಾಡುವುದಿಲ್ಲ. ತಮ್ಮ ಮಗನಿಗೆ ಕಾಂಗ್ರೆಸ್‌ ಕನ್ಯೆ ಜತೆ ಮರು ಮದುವೆ ಮಾಡಿಕೊಳ್ಳಲ್ಲ ಅಂತ ಮಾಜಿ ಪ್ರಧಾನಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಆ ಪಕ್ಷದೊಂದಿಗೆ ಗತಿ ಇಲ್ಲದೆ ಕಾಂಗ್ರೆಸ್‌ ಮತ್ತೆ ಮೈತ್ರಿ ಬೇಕು ಅಂತ ಹೇಳುತ್ತಿದೆ ಎಂದು ಕಿಡಿಕಾರಿದರು.

ಚುನಾವಣೆ ನಡೆದಿರುವ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕಾರಜೋಳ, ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಟುಗಟ್ಟಿಯಾಗಲಿದೆ. ಮುಂದಿನ 3 ವರ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಭವಿಷ್ಯ ನುಡಿದರು.

ಡಿ.9ರ ಬಳಿಕ ಭಾಗ್ಯಗಳ ಸರ್ಕಾರ ಬರಲಿದೆ ಎಂಬ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಹೇಳಿಕೆ ಪ್ರತಿಕ್ರಿಯಿಸಿದ ಕಾರಜೋಳ, ನೀರಾವರಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಪಾಟೀಲರು ಮತ್ತೆ ಮಂತ್ರಿ ಪದವಿಯ ಹಗಲುಗನಸು ಕಾಣುತ್ತಿದ್ದಾರೆ. ತಾವೇ ಲಿಂಗಾಯತ ಕೋಟಾದಡಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಪಾಟೀಲರು ಬಯಸಿದ್ದಾರೆ. ಅದೂ ಕನಸಾಗಿಯೇ ಉಳಿಯಲಿದೆ. ಸಮಿಶ್ರ ಸರ್ಕಾರ ರಚನೆ ಸಂಬಂಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ದಿನಕ್ಕೆ ಒಂದೊಂದು ಹೇಳಿಕೆ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

click me!