ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ಸಚಿವ ಚಲುವರಾಯಸ್ವಾಮಿ

By Kannadaprabha NewsFirst Published Mar 14, 2024, 12:31 PM IST
Highlights

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. 

ನಾಗಮಂಗಲ (ಮಾ.14): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ಮಂಡ್ಯ ರಸ್ತೆಯ 15ನೇ ವಾರ್ಡ್, ಪಡುವಲಪಟ್ಟಣ ರಸ್ತೆಯ 9ನೇ ವಾರ್ಡ್ ಮತ್ತು ಉಪ್ಪಾರಹಳ್ಳಿಯ 19ನೇ ವಾರ್ಡ್‌ನಲ್ಲಿ ನಗರೋತ್ಥಾನ ಯೋಜನೆಯಡಿ 1.30 ಕೋಟಿ ರು. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯ ಜನರು ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ನಂಬಿಕೆ ವಿಶ್ವಾಸವಿಟ್ಟು 6 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಜನರಿಗೆ ಕೊಟ್ಟಿದ್ದ ಭರವಸೆಯಂತೆ ನಡೆದುಕೊಳ್ಳುವ ಜೊತೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಒತ್ತು ಕೊಟ್ಟಿದ್ದೇವೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಯಾರೇ ಎದುರಾಳಿ ಅಭ್ಯರ್ಥಿಯಾದರೂ ಸಹ ಚುನಾವಣೆ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸುವಂತೆ ಮೂಲಕ ಚುನಾವಣಾ ಕಹಳೆ ಮೊಳಗಿಸಿದ್ದೇವೆ. ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲೆಯ ಎಲ್ಲ ಮತದಾರರು ಪಕ್ಷಾತೀತವಾಗಿ ಮತ್ತೊಮ್ಮೆ ಸ್ವಾಭಿಮಾನದ ಚುನಾವಣೆ ನಡೆಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊರಗಿನ ಹಣವಂತರನ್ನು ಕರೆತಂದಿಲ್ಲ: ವಿಜಯ್‌ಮಲ್ಯ, ಶರವಣ, ಕುಪೇಂದ್ರರೆಡ್ಡಿ, ಎಂ.ಎಂ.ರಾಮಸ್ವಾಮಿ ಅವರಂತಹ ಹಣವಂತರನ್ನು ಕರೆತಂದು ಎಂಎಲ್ಸಿ, ರಾಜ್ಯ ಸಭಾ ಸದಸ್ಯರನ್ನು ಮಾಡಿದವರು ಯಾರೆಂದು ವಿರೋಧಿ ನಾಯಕರ ವಿರುದ್ಧ ಸಚಿವರು ಗುಡುಗಿದರು. ನಾವು ಬೇರೆ ಹೊರಗಿನವರನ್ನು ಕರೆತಂದು ಎಂಎಲ್ಸಿ ಅಥವಾ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) ಜಿಲ್ಲೆಯ ರೈತ ಕುಟುಂಬದಿಂದ ಬಂದವರು. ಅವರ ಸ್ವಂತ ಅಣ್ಣ ಮತ್ತು ಅಳಿಯ ಶಾಸಕರಾಗಿದ್ದಾರೆ. ಅವರೂ ಸಹ ರಾಜಕೀಯ ಕುಟುಂಬಕ್ಕೆ ಸೇರಿದವರೇ. 

ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಬದಲಾವಣೆ ಪರ್ವ: ಸಚಿವ ಎಚ್‌.ಕೆ.ಪಾಟೀಲ್

ಜೀವನೋಪಾಯಕ್ಕಾಗಿ ವೃತ್ತಿಯಲ್ಲಿ ಉದ್ಯಮಿಯಾಗಿರುವ ಅವರು ಆರ್ಥಿಕವಾಗಿ ಸದೃಢವಾಗಿರುವುದರಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ (ಸ್ಟಾರ್ ಚಂದ್ರು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪುರಸಭೆ ಸದಸ್ಯರಾದ ತಿಮ್ಮಪ್ಪ, ರಮೇಶ್, ವಸಂತಲಕ್ಷ್ಮಿ ಅಶೋಕ್, ಸೈಯದ್ ಸುಮೈಯಾ, ನಾಜಿಯಾ ಸುಲ್ತಾನ, ಮುಖ್ಯಾಧಿಕಾರಿ ಶ್ರೀನಿವಾಸ್, ಎಂಜಿನಿಯರ್ ಕಿರಣ್, ಮುಖಂಡರಾದ ಸಂಪತ್‌ಕುಮಾರ್, ಎಸ್.ಬಿ.ರಮೇಶ್, ತ್ಯಾಪೇನಹಳ್ಳಿ ಶ್ರೀನಿವಾಸ್, ರವಿಕಾಂತೇಗೌಡ, ಅನ್ಸರ್‌ಪಾಷ ಸೇರಿದಂತೆ ಹಲವರಿದ್ದರು.

click me!