ಶಿಗ್ಗಾಂವಿ ಉಪಚುನಾವಣೆ: ಬೊಮ್ಮಾಯಿ ಕೋಟೆ ಲಗ್ಗೆಗೆ ಕಾಂಗ್ರೆಸ್‌ ಕಸರತ್ತು!

By Kannadaprabha News  |  First Published Nov 10, 2024, 12:35 PM IST

ಸರ್ಕಾರದ ಮಂತ್ರಿಗಳು, ಶಾಸಕರ ಪಡೆ ಒಟ್ಟಾರೆ ಇಡೀ ಸರ್ಕಾರವೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಯಾಸೀರ್ ಪರ ರಣವ್ಯೂಹ ರಚಿಸುತ್ತಿದ್ದರೆ, ಮತ್ತೊಂದು ಕಡೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಬೊಮ್ಮಾಯಿ ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. 


ನಾರಾಯಣ ಹೆಗಡೆ 

ಹಾವೇರಿ(ನ.10): ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಜಿದ್ದಾಜಿದ್ದಿ ತೀವ್ರ ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರಿನ ಪಟ್ಟಾಭಿಷೇಕಕ್ಕೆ ಭಾರೀ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದು ಕಡೆ ಬೊಮ್ಮಾಯಿ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಕೂಡ ಭರ್ಜರಿ ತಂತ್ರಗಾರಿಕೆ ನಡೆಸಿದೆ. 

Tap to resize

Latest Videos

undefined

ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಸಂಸದರಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ಈಗ ಶಿಗ್ಗಾಂವಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಸತತ ನಾಲ್ಕು ಬಾರಿ ತಮ್ಮನ್ನು ಗೆಲ್ಲಿಸಿದ್ದ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಈ ಅವರ ಪುತ್ರ ಭರತ್ ಬೊಮ್ಮಾಯಿಯೇ ಬಿಜೆಪಿ ಅಭ್ಯರ್ಥಿ, 2023ರ ಚುನಾವಣೆಯಲ್ಲಿ ಬೊಮ್ಮಾಯಿ ವಿರುದ್ಧ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಯಾಸಿರ್ ಖಾನ್ ಪಠಾಣ್ ಈಗ ಪುತ್ರ ಭರತ್ ಬೊಮ್ಮಾಯಿಗೂ ಪ್ರತಿಸ್ಪರ್ಧಿ, ಕಾಂಗ್ರೆಸ್ ಮತ್ತು ಬೊಮ್ಮಾಯಿ ಇಬ್ಬರಿಗೂ ಶಿಗ್ಗಾಂವಿ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ಸತತ ಐದು ಬಾರಿ ಸೋಲು ಕಂಡಿರುವ ಕಾಂಗ್ರೆಸ್, ಈ ಬಾರಿ ಹೇಗಾದರೂ ಮಾಡಿ ಬೊಮ್ಮಾಯಿ ಕುಟುಂಬಕ್ಕೆ ಸೋಲಿನ ರುಚಿ ತೋರಿಸಬೇಕೆಂಬ ಪಣ ತೊಟ್ಟು ಪ್ರಚಾರ ನಡೆಸುತ್ತಿದೆ. 

ಶಿಗ್ಗಾಂವಿ ಉಪಚುನಾವಣಾ ಕದನ: ನನ್ನ ಸ್ಪರ್ಧೆ ಬೊಮ್ಮಾಯಿ ನಿರ್ಧಾರವಲ್ಲ, ಭರತ್

ಸರ್ಕಾರದ ಮಂತ್ರಿಗಳು, ಶಾಸಕರ ಪಡೆ ಒಟ್ಟಾರೆ ಇಡೀ ಸರ್ಕಾರವೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಯಾಸೀರ್ ಪರ ರಣವ್ಯೂಹ ರಚಿಸುತ್ತಿದ್ದರೆ, ಮತ್ತೊಂದು ಕಡೆ ಕ್ಷೇತ್ರವನ್ನು ಉಳಿಸಿಕೊಳ್ಳಲು ಬೊಮ್ಮಾಯಿ ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. 

ಜಾರಕಿಹೊಳಿ ಠಿಕಾಣಿ: 

ನಾಲ್ಕು ತಿಂಗಳಿಂದ ಇಡೀ ಕ್ಷೇತ್ರ ಸುತ್ತಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜಾತಿವಾರು ಸಮೀಕ್ಷೆ ಮಾಡಿ ಆಯಾ ಸಮುದಾಯ ಅದರಲ್ಲೂ ಅಹಿಂದ ಸಮುದಾಯಗಳನ್ನು ಕಾಂಗ್ರೆಸ್‌ನತ್ತ ಸೆಳೆಯುತ್ತಿದ್ದಾರೆ. ರೆಸಾರ್ಟ್‌ವೊಂದರಲ್ಲಿ ಠಿಕಾಣಿ ಹೂಡಿರುವ ಅವರು ಎರಡು ವಾರದಿಂದ ಕ್ಷೇತ್ರ ಬಿಟ್ಟು ಕದಲುತ್ತಿಲ್ಲ. ಟಿಕೆಟ್ ಘೋಷಣೆ ಬಳಿಕ ಅಜ್ಜಂಪೀರ್ ಖಾದ್ರಿ ಬಂಡಾಯದಿಂದ ಆರಂಭಿಕ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಪಾಳಯದಲ್ಲಿ ಈಗ ಹುಮ್ಮಸ್ಸಿನಲ್ಲಿದೆ. ಖಾದ್ರಿ ಬಂಡಾಯ ಶಮನ ಮಾಡುವಲ್ಲಿ ನಾಯಕರು ಯಶಸ್ವಿಯಾಗಿದ್ದು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರಕ್ಕೆ ಬಂದು ಹೋದ ಬಳಿಕ ಕಾರ್ಯಕರ್ತರ ಉತಾಹ ಇಮ್ಮಡಿಯಾಗಿದೆ.

ಮಂತ್ರಿಗಳು, ಶಾಸಕರ ಪಡೆಯೇ ಕ್ಷೇತ್ರದಲ್ಲಿ ನೆಲೆಯೂರಿ ಪ್ರಚಾರದಲ್ಲಿ ತೊಡಗಿದೆ. ಬೊಮ್ಮಾಯಿ ಅವರನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಟೀಕೆಗೆ ಇಳಿದಿದ್ದಾರೆ. ಇದರಿಂದ ಕೈ, ಕಮಲ ನಾಯಕರ ವಾಕ್ಸಮರ ತಾರಕಕ್ಕೇರಿದೆ. 

ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ್ತು ಯಾಸಿರ್ ಖಾನ್ ಪಠಾಣ್ ನಡುವಿನ ಕದನವೀಗ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ನಡುವಿನ ಕದನವಾಗಿ ಮಾರ್ಪಟ್ಟಿದೆ. ಅಲ್ಪಸಂಖ್ಯಾತರು ಮತ್ತು ಲಿಂಗಾಯತರು ನಿರ್ಣಾಯಕರಾಗಿರುವ ಈ ಕ್ಷೇತ್ರದಲ್ಲಿ ಜಾತಿ ಮತಬುಟ್ಟಿಗೆ ಎರಡೂ ಪಕ್ಷಗಳು ಕೈಹಾಕಿವೆ. ಪ್ರಬಲ ಜಾತಿ, ಧರ್ಮಗಳ ಜತೆಗೆ ಸಣ್ಣ ಸಮಾಜದವರನ್ನೂ ಸೆಳೆಯುವ ತಂತ್ರ ನಡೆದಿದೆ. 

ಆಯಾ ಸಮುದಾಯದ ಮುಖಂಡರನ್ನು ಕರೆಸಿ ಸಭೆ ನಡೆಸುತ್ತಿದ್ದಾರೆ. ಎರಡೂ ಪಕ್ಷಗಳಲ್ಲೂ ಜಾತಿವಾರು ನಾಯಕರು ತಮ್ಮ ತಮ್ಮ ಸಮುದಾಯದ ಮತ ಕ್ರೋಢೀಕರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಆರಂಭದಿಂದಲೂ ಕ್ಷೇತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುತ್ತ ಓಡಾಡುತ್ತಿರುವ ಕೆಆರ್‌ಎಸ್ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಕುತೂಹಲದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಸದ್ದಿಲ್ಲದೆ ಪ್ರಚಾರದಲ್ಲಿ ನಿರತರಾಗಿದ್ದಾರೆ. 

ಖಾದ್ರಿಯೇ ಫೆವರಿಟ್: 

ಕಾಂಗ್ರೆಸ್‌ನಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಅಜ್ಜಂಪೀರ್ ಖಾದ್ರಿ ಈಗ ಪಕ್ಷದ ಹಾಟ್ ಫೆವರೀಟ್ ಆಗಿದ್ದಾರೆ. ಅವರನ್ನೇ ಮುಂದಿಟ್ಟುಕೊಂಡು ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ. ಆರಂಭದಲ್ಲಿದ್ದ ಗೊಂದಲ ನಿವಾರಣೆಯಾಗಿ ಮೇಲ್ನೋಟಕ್ಕೆ ಕಾಂಗ್ರೆಸ್‌ನಲ್ಲಿ ಇದೀಗ ಎಲ್ಲವೂ ಸರಿಯಿದೆ ಎಂಬಂತೆ ಕಾಣುತ್ತಿದೆ. ಟಿಕೆಟ್ ಘೋಷಣೆ ಬಳಿಕ ಮುನಿಸಿಕೊಂಂಡಿದ್ದ ಖಾದ್ರಿ ಈಗ ಖುದ್ದು ಪಠಾಣ್ ಬೆನ್ನಿಗೆ ನಿಂತು ಮಾತಾಡುತ್ತಿದ್ದಾರೆ.

ಬಿಜೆಪಿಗೆ ವಕ್ಫ್‌ ಅಸ್ತ್ರ 

ಪ್ರಧಾನಿ ಮೋದಿ ಹೆಸರನ್ನೇ ನೆಚ್ಚಿಕೊಂಡು ಪ್ರಚಾರ ಮಾಡುತ್ತಿದ್ದ ಬಿಜೆಪಿಗೆ ಈ ಉಪ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳೇ ಪ್ರಮುಖ ಅಸ್ತವಾಗಿದೆ. ಚುನಾವಣೆ ಹೊತ್ತಿಗೇ ಹೊತ್ತಿಕೊಂಡ ವಕ್ಫ್‌ ಆಸ್ತಿ ಗದ್ದಲದ ಕಿಡಿ ಬಿಜೆಪಿ ನಾಯಕರಿಗೆ ಬಯಸದೇ ಸಿಕ್ಕಿದ ದೊಡ್ಡ ಆಸ್ತವಾಗಿ ಪರಿಣಮಿಸಿದೆ. ಇದರ ಜತೆಗೆ, ಬೊಮ್ಮಾಯಿ ಅವರು ಶಾಸಕರಾಗಿ ಈ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ವರ್ಗದವರನ್ನು ಜತೆಗೆ ಕರೆದೊಯ್ಯುವ ಅವರ ಗುಣ ಅಲ್ಪಸಂಖ್ಯಾತರು ಸೇರಿ ಎಲ್ಲ ಸಮುದಾಯದ ಮತ ಸಳೆಯಬಹುದು ಎಂಬ ವಿಶ್ವಾಸ ಬಿಜೆಪಿಗರಿಗಿದೆ. ಅಲ್ಲದೆ, ಪಕ್ಷದಲ್ಲಿ ಮೇಲ್ನೋಟಕ್ಕೆ ಯಾವುದೇ ಭಿನ್ನಮತ ಇಲ್ಲದಿರುವುದೂ ಬಿಜೆಪಿ ಪಾಲಿಗೆ ಪ್ಲಸ್, ಭರತ್‌ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕ್ಷೇತ್ರಕ್ಕೆ ಆಗಮಿಸಿ ಸಾಲು ಸಾಲು ಸಭೆ, ಸಮಾವೇಶ ಸಂಘಟಿಸುತ್ತಿರುವ ಬೊಮ್ಮಾಯಿ ತಮ್ಮ ಪುತ್ರನನ್ನು ಗೆಲ್ಲಿಸಲು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ಬೊಮ್ಮಾಯಿ ತಂತ್ರಗಾರಿಕೆ ಈ ಬಾರಿಯೂ ಫಲಿಸುತ್ತಾ ಅಥವಾ ಕಾಂಗ್ರೆಸ್ ಹೆಣೆದಿರುವ ಪ್ರತಿತಂತ್ರ ಯಶಸ್ವಿಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಕೋವಿಡ್‌ನಲ್ಲಿ ಹಗರಣ ಆಗಿದ್ದರೆ ತನಿಖೆ ಮಾಡಲಿ: ಪ್ರಹ್ಲಾದ್ ಜೋಶಿ

ಶಿಗ್ರಾಂವಿ ಕ್ಷೇತ್ರ: ಅಂತಿಮ ಕಣದಲ್ಲಿ 8 ಮಂದಿ 

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಟು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಬಿಜೆಪಿಯಿಂದ ಭರತ್ ಬೊಮ್ಮಾಯಿ, ಕಾಂಗ್ರೆಸ್‌ನಿಂದ ಯಾಸೀರ್ ಅಹ್ಮದ್ ಖಾನ್ ಪಠಾಣ, ಸೋಸಿಯಲಿಸ್ ಪಾರ್ಟಿ (ಇಂಡಿಯಾ)ದಿಂದ ಖಾಜಾ ಮೊಹಿದ್ದೀನ್ ಗುಡಗೇರಿ, ಕೆಆರ್‌ಎಸ್‌ನಿಂದ ರವಿ ಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಜಿ.ಎಚ್.ಇಮಾಪುರ, ಸಿದ್ದಪ್ಪ ಹೊಸಳ್ಳಿ, ಎಸ್.ಎಸ್.ಪಾಟೀಲ ಮತ್ತು ಸಾತಪ್ಪ ನೀಲಪ್ಪ ದೇಸಾಯಿ ಚುನಾವಣಾ ಕಣದಲ್ಲಿದ್ದಾರೆ. 

ಇಷ್ಟು ಅಭ್ಯರ್ಥಿಗಳ ನಡುವೆಯೂ ಇಲ್ಲೇನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರಾನೇರ ಸ್ಪರ್ಧೆ. ರವಿ ಕೃಷ್ಣಾರೆಡ್ಡಿ ಅವರ ಸ್ಪರ್ಧೆ ಕುತೂಹಲ ಮೂಡಿಸಿದರೂ ಅವರ ಸ್ಪರ್ಧೆ ಫಲಿತಾಂಶದ ಮೇಲೆ ಹೇಳಿಕೊಳ್ಳುವ ಪರಿಣಾಮ ಬೀರುವುದು ಅನುಮಾನ ಎಂಬುದು ಎರಡೂ ಪಕ್ಷಗಳ ಲೆಕ್ಕಾಚಾರ. ಇನ್ನು ಕ್ಷೇತ್ರದಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಲಿಂಗಾಯತರಿದ್ದಾರೆ. ಆ ನಂತರದ ಸ್ಥಾನ ಅಲ್ಪಸಂಖ್ಯಾತರದ್ದು ಉಳಿದಂತೆ ಕುರುಬರು, ಎಸ್ಸಿ,ಎಸ್ಟಿ "ಮತದಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

click me!