ಸಿದ್ದು, ಡಿಕೆಶಿಗೆ ಟಿಕೆಟ್‌ ವಂಚಿತರ ಬಂಡಾಯ ಬಿಸಿ..!

By Kannadaprabha News  |  First Published Apr 9, 2023, 4:00 AM IST

ಆಕಾಂಕ್ಷಿಗಳು ಹಾಗೂ ಬೆಂಬಲಿಗರು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಭೇಟಿ ಮಾಡಿ ಬಂಡಾಯದ ಎಚ್ಚರಿಕೆ ನೀಡಿದ್ದಾರೆ. 


ಬೆಂಗಳೂರು(ಏ.09): ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲಿ ಟಿಕೆಟ್‌ ವಂಚಿತರಾಗಿರುವ ಆಕಾಂಕ್ಷಿಗಳು ಹಾಗೂ ಬೆಂಬಲಿಗರಿಂದ ಅಸಮಾಧಾನದ ಕೂಗು ಕೇಳಿ ಬಂದಿದೆ. ಈ ಸಂಬಂಧ ಆಕಾಂಕ್ಷಿಗಳು ಹಾಗೂ ಬೆಂಬಲಿಗರು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಭೇಟಿ ಮಾಡಿ ಬಂಡಾಯದ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚನ್ನಪಟ್ಟಣ ಸೇರಿದಂತೆ ಯಾವೊಂದು ಕ್ಷೇತ್ರದಿಂದಲೂ ಟಿಕೆಟ್‌ ಸಿಗುವ ಸಾಧ್ಯತೆಯಿಲ್ಲದ ಕಾರಣ ಮಾಜಿ ಸಚಿವ ಎಚ್‌.ಎಂ. ರೇವಣ್ಣ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ ತಮಗೆ ಅನ್ಯಾಯ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

Tap to resize

Latest Videos

KARNATAKA ASSEMBLY ELECTIONS 2023: ಭೀಮಾ ತೀರದಲ್ಲಿ ರಾಜಕೀಯ ರಂಗು..!

ಇನ್ನು ಯಲಹಂಕ ಕ್ಷೇತ್ರದಲ್ಲಿ ಕೇಶವ್‌ ರಾಜಣ್ಣ ಅವರಿಗೆ ಟಿಕೆಟ್‌ ನೀಡಿರುವುದನ್ನು ವಿರೋಧಿಸಿ ಮತ್ತೊಬ್ಬ ಆಕಾಂಕ್ಷಿ, ಟಿಕೆಟ್‌ ವಂಚಿತ ನಾಗರಾಜಗೌಡ ಬೆಂಬಲಿಗರು ಶನಿವಾರ ಡಿ.ಕೆ. ಶಿವಕುಮಾರ್‌ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ನಾಗರಾಜ್‌ ಗೌಡ ಅವರಿಗೆ ಟಿಕೆಟ್‌ ವಂಚಿಸಿರುವ ಕಾಂಗ್ರೆಸ್‌ ಪಕ್ಷ ಯಲಹಂಕದಲ್ಲಿ ನಾಶವಾಗಲಿದೆ ಎಂದು ಘೋಷಣೆ ಕೂಗಿದರು.

ಟಿಕೆಟ್‌ಗಾಗಿ ಒತ್ತಡ:

ಇನ್ನೂ ಟಿಕೆಟ್‌ ಪ್ರಕಟವಾಗದ ಕ್ಷೇತ್ರಗಳ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಕುಂದಗೋಳ ಕ್ಷೇತ್ರದ ಆಕಾಂಕ್ಷಿ ಜಿ.ಸಿ. ಪಾಟೀಲ್‌ ಮತ್ತು ಬೆಂಬಲಿಗರು ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಟಿಕೆಟ್‌ಗೆ ಮನವಿ ಮಾಡಿದರು. ಇನ್ನು ಶಿಕಾರಿಪುರದಿಂದ ಗೋಣಿ ಮಾಲತೇಶ್‌ ಹಾಗೂ ಬೆಂಬಲಿಗರು ಜಮಾಯಿಸಿ ಟಿಕೆಟ್‌ಗಾಗಿ ಬೇಡಿಕೆಯಿಟ್ಟರು.

ಬಳಿಕ ಮಾತನಾಡಿದ ಗೋಣಿ ಮಾಲತೇಶ್‌, ‘ನಾನು ಯಾವತ್ತೂ ಯಡಿಯೂರಪ್ಪ ಅವರೊಂದಿಗೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿಲ್ಲ. ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದರೆ ನನಗೆ 50 ಸಾವಿರ ಮತ ಬರುತ್ತಿರಲಿಲ್ಲ. ಈ ಬಾರಿ ಶಿಕಾರಿಪುರದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಯಡಿಯೂರಪ್ಪ ಓಕೆ ಅವರ ಮಗ ಯಾಕೆ ಎಂದು ಕ್ಷೇತ್ರದಲ್ಲಿ ಕೇಳುತ್ತಿದ್ದಾರೆ. ಈ ಬಾರಿ ನನಗೆ ಅವಕಾಶ ಸಿಕ್ಕರೆ ಕಾಂಗ್ರೆಸ್‌ ಗೆಲ್ಲಲಿದೆ’ ಎಂದರು.

ಕಾಂಗ್ರೆಸ್‌, ಸಿದ್ದು ವಿರುದ್ಧ ರೇವಣ್ಣ ಅಸಮಾಧಾನ

ಮಾಜಿ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ, ನಿನ್ನೆವರೆಗೂ ಬಿಜೆಪಿಯಲ್ಲಿದ್ದು ಇಂದು ಕಾಂಗ್ರೆಸ್‌ಗೆ ಸೇರಿದವರಿಗೆ ಟಿಕೆಟ್‌ ಸಿಗುತ್ತದೆ. ನಮ್ಮಂತಹವರಿಗೆ ಸಿಗುವುದಿಲ್ಲ. ಕಾಂಗ್ರೆಸ್‌ನಿಂದ ನನಗೆ ತುಂಬಾ ಅನ್ಯಾಯವಾಗಿದೆ ಎಂದು ಹೇಳಿದರು.
‘ನಾನು ಕಟ್ಟಾಕಾಂಗ್ರೆಸ್ಸಿಗ, ಕಾಂಗ್ರೆಸ್‌ನ ರಕ್ತ ನನ್ನಲ್ಲಿ ಹರಿಯುತ್ತಿದೆ. ನಾನು ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದೇನೆ, ಬಿಜೆಪಿ ಸೇರುತ್ತೇನೆ ಎಂಬುದೆಲ್ಲಾ ಸುಳ್ಳು ಸುದ್ದಿ. ಆದರೆ, ನನಗೆ ನೋವಾಗಿರುವುದು, ಕಾಂಗ್ರೆಸ್‌ನಿಂದ ಅನ್ಯಾಯವಾಗಿರುವುದು ನಿಜ’ ಎಂದು ಭಾವುಕರಾಗಿ ನುಡಿದರು.

‘ನನಗೆ ನನ್ನ ಮೇಲೆಯೇ ಅಸಮಾಧಾನ ಇದೆ. ನಾನು ಇಷ್ಟುದಿನ ಮೌನವಾಗಿದ್ದೇ ತಪ್ಪು ಎನಿಸುತ್ತಿದೆ. ಮಾಗಡಿ ಬಿಟ್ಟು ಬಂದು ತಪ್ಪು ಮಾಡಿದೆ. ಈಗ ಎಲ್ಲಾ ಕ್ಷೇತ್ರಗಳಿಗೂ ಫುಟ್ಬಾಲ್‌ ಆಗಿದ್ದೇನೆ. ಡಿ.ಕೆ. ಶಿವಕುಮಾರ್‌ ಅವರು ಟಿಕೆಟ್‌ ಭರವಸೆ ನೀಡಿದ್ದಾರೆ ನೋಡೋಣ’ ಎಂದರು.

'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟಿದ್ದು ನೋವು ತಂದಿದೆ'

ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಯಾಕೆ ಈ ರೀತಿ ಆಯಿತು ಎಂದು ಸಿದ್ದರಾಮಯ್ಯ ಅವರನ್ನು ನೀವೇ ಕೇಳಿ. ಅವರ ಎಲ್ಲ ಹೋರಾಟಗಳಿಗೂ ನಾನು ಅವರ ಪರ ಇದ್ದೇನೆ, ಅವರೇ ಉತ್ತರಿಸಲಿ’ ಎಂದಷ್ಟೇ ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!