ರೈತ ವರ್ಗಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ: ಸಚಿವ ಹಾಲಪ್ಪ ಆಚಾರ್‌

By Kannadaprabha NewsFirst Published Apr 9, 2023, 3:00 AM IST
Highlights

ರಾಯರೆಡ್ಡಿ ಬದಲು ನಾನು ಹಿಂದೆ ಎಂಎಲ್‌ಎ ಆಗಿದ್ದರೆ ಯಲಬುರ್ಗಾ ಕ್ಷೇತ್ರದಲ್ಲಿ ಕಬ್ಬು ಬೆಳೆವಷ್ಟು ನೀರಾವರಿ: ಸಚಿವ ಹಾಲಪ್ಪ ಆಚಾರ ವಾಗ್ದಾಳಿ

ಕುಕನೂರು(ಏ.09): ತುಂಗಭದ್ರೆ ಕೇವಲ 37 ಕಿಮೀ ದೂರವಿದ್ದು, ಕ್ಷೇತ್ರದ ರೈತ ವರ್ಗಕ್ಕೆ ತುಂಗಭದ್ರೆಯ ನೀರು ತರುವ ಮೂಲಕ ಯಾವ ಕಾಲದಲ್ಲಿಯೇ ಈ ಭಾಗ ನೀರಾವರಿಯಾಗಬೇಕಾಗಿತ್ತು. ಆದರೆ, ಕ್ಷೇತ್ರದ ಜನರನ್ನು ಕತ್ತಲಲ್ಲಿಟ್ಟು ರಾಯರಡ್ಡಿ ರಾಜಕೀಯ ಮಾಡಿದ್ದಾರೆ. ಈ ಹಿಂದೆ ಅವರ ಬದಲು ನಾನು ಶಾಸಕನಾಗಿದ್ದರೆ ಸದ್ಯ ಯಲಬುರ್ಗಾ ಕ್ಷೇತ್ರದಲ್ಲಿ ರೈತರು ಕಬ್ಬು ಬೆಳೆವಷ್ಟುನೀರಾವರಿ ಮಾಡುತ್ತಿದ್ದೆ ಎಂದು ಸಚಿವ ಹಾಲಪ್ಪ ಆಚಾರ್‌ ವಾಗ್ದಾಳಿ ನಡೆಸಿದರು.

ತಾಲೂಕಿನ ಹಿರೇಬೀಡಿನಾಳ ಗ್ರಾಮದಲ್ಲಿ ಬಿಜೆಪಿ ಯಲಬುರ್ಗಾ ಮಂಡಲದಿಂದ ಆಯೋಜಿಸಿದ್ದ ಸಂಘಟನಾತ್ಮಕ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ನಾನು 2013ರಲ್ಲಿ ಎಂಎಲ್‌ಸಿ ಇದ್ದಾಗ ಬೇವೂರಿನಲ್ಲಿ ಕೃಷ್ಣ ಬೀ ಸ್ಕೀಂಗೆ ಸಾವಿರ ಕೋಟಿ ವೆಚ್ಚದಲ್ಲಿ ಅಡಿಗಲ್ಲು ಹಾಕಿಸಿದೆ.ಅದನ್ನು ರಾಯರೆಡ್ಡಿ ಅಡ್ಡಗಲ್ಲು ಎಂದು ಜರಿದರು.ನಂತರ ಕೃಷ್ಣೆಯ ನೀರು ತರುತ್ತೇನೆ ಎಂದು ಕಾಂಗ್ರೆಸ್‌ ನಡೆ ಕೃಷ್ಣೆಯ ಕಡೆ ಎಂದು ಪ್ರಚಾರ ಪಡೆದು ಗೆಲುವು ಸಾಧಿಸಿ, ಕೃಷ್ಣ ಬೀ ಸ್ಕಿಂನ 2ನೇ ಹಂತದ ಕಾಮಗಾರಿಗೆ ಬೋರ್ಡ್‌ನಲ್ಲಿ ಅವರಿಗೆ ಅನುಮೋದನೆ ಸಹ ಕೊಡಿಸಲು ಆಗಲಿಲ್ಲ.ನಂತರ ನಾನು ಶಾಸಕನಾದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರಿಗೆ ತಿಳಿಸಿ 2ನೇ ಹಂತದ ಕಾಮಗಾರಿಗೆ ಅನುಮೋದನೆ ಕೊಡಿಸಿ, ಇನ್ನೂ ಮುಂಬರುವ ಹತ್ತು ವರ್ಷದಲ್ಲಿ ಆಗಬೇಕಿದ್ದ ಕಾಮಗಾರಿಗಳನ್ನು ಕೇವಲ ಎರಡು ವರ್ಷದಲ್ಲಿ ಪೂರ್ಣಗೊಳಿಸಿ ಯಲಬುರ್ಗಾ ಕ್ಷೇತ್ರಕ್ಕೆ ನೀರು ತಂದಿದ್ದೇನೆ ಎಂದರು.

TICKET FIGHT: ಸಚಿವ ಹಾಲಪ್ಪ ಆಚಾರ್‌ಗೆ ಅಡ್ಡಗಾಲದ ಗುಳಗಣ್ಣವರ್!

ಮಾಜಿ ಸಚಿವ ರಾಯರೆಡ್ಡಿ ಅವರನ್ನು ಭೇಟಿಯಾಗಲು ಜನರು ಬೆಂಗಳೂರು, ಧಾರವಾಡ, ಹೊಸಪೇಟೆ ಮಲ್ಲಿಗೆ ಲಾಡ್ಜ್‌, ಇಲ್ಲವೇ ತುಂಗಭದ್ರೆಯ ವೈಕುಂಠ ಹೋಗುವ ಪರಿಸ್ಥಿತಿ ಕ್ಷೇತ್ರದ ಜನತೆಗಿದೆ. ನಾನು ಒಬ್ಬ ರೈತನ ಮಗನಾಗಿದ್ದು, ರೈತರ ಕಷ್ಟ, ನೋವು ಅರಿತುಕೊಂಡಿದ್ದೇನೆ. ಕ್ಷೇತ್ರದಲ್ಲಿ ಕೆರೆಗಳ ಜೀರ್ಣೋದ್ಧಾರ, ಹೊಸ ಕೆರೆ ನಿರ್ಮಾಣ, ಎಷ್ಟೋ ದಶಕಗಳ ಕಾಲ ರೈತರು ತಮ್ಮ ಜಮೀನಿಗೆ ಹೋಗಲು ಕಷ್ಟಪಡುತ್ತಿದ್ದ ಗ್ರಾಮಗಳಲ್ಲಿ ರೈತರ ಜಮೀನಿಗೆ ರಸ್ತೆ ನಿರ್ಮಾಣ ಹಾಗೂ ಹಳ್ಳಗಳಿಗೆ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಿದ್ದೇನೆ. ನೀರಾವರಿ, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದ್ದೇನೆ ಎಂದರು.

ಎಸ್ಸಿ,ಎಸ್ಟಿ ಮೀಸಲಾತಿ ಹೋರಾಟವನ್ನು ಕಾಂಗ್ರೆಸ್‌ ಸರ್ಕಾರ ಕಡೆಗಣಿಸಿ,ಮೀಸಲಾತಿ ಎಂಬುದು ಜೇನುಗೂಡಿಗೆ ಕೈ ಹಾಕುವ ಕೆಲಸ ಎಂದು ಕಾಂಗ್ರೆಸ್‌ ಕೈ ಬಿಟ್ಟಿತ್ತು.ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸದಾಶಿವ ಆಯೋಗ ವರದಿ ಕೈಯಿಂದ ಮುಟ್ಟಿರಲಿಲ್ಲ.ಆದರೆ, ಸಿಎಂ ಬೊಮ್ಮಾಯಿ ಅವರು ಮೀಸಲಾತಿ ಎನ್ನುವ ಜೇನುಗೂಡನ್ನು ಬೇಧಿಸಿ ಸಿಹಿ ಹಂಚಿದ್ದಾರೆ. ಹಲವು ವರ್ಷಗಳ ಕಾಲ ಧೂಳು ಹಿಡಿದಿದ್ದ ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ಎಂಎಲ್ಸಿ ಹೇಮಲತಾ ನಾಯಕ ಮಾತನಾಡಿ, ಸಚಿವ ಹಾಲಪ್ಪ ಆಚಾರ ಅವರಿಂದ ಹಲವಾರು ಜನಪರ ಕಾರ್ಯ ಆಗಿವೆ.ಅವರಂತ ಸರಳ ಸಜ್ಜನಿಕೆಯ ರಾಜಕಾರಣಿ ಎಲ್ಲೂ ಇಲ್ಲ ಎಂದರು.

ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ಮುಖಂಡ ಮಂಜುನಾಥ ಗಟ್ಟೆಪ್ಪನವರ್‌, ಕೊಟ್ರಪ್ಪ ತೋಟದ ಮಾತನಾಡಿದರು. ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಗ್ರಾಪಂ ಅಧ್ಯಕ್ಷ ರೇವಣಸಿದ್ದನಗೌಡ, ಶಿವಕುಮಾರ ನಾಗಲಾಪುರಮಠ, ಬಸನಗೌಡ ತೊಂಡಿಹಾಳ, ಶಂಭು ಜೋಳದ, ಶರಣಪ್ಪ ಈಳಗೇರ, ವಿರುಪಾಕ್ಷಪ್ಪ ಮಾಳಗೌಡ್ರು, ರಾಝುಗೌಡ್ರು ಇತರರಿದ್ದರು.

ಹಣಕ್ಕೆ ಮತ ಮಾರಿಕೊಳ್ಳದಿರಿ: ಮತದದಾರರಿಗೆ ಕಿವಿಮಾತು ಹೇಳಿದ ಮಾಜಿ ಸಚಿವ ರಾಯರೆಡ್ಡಿ

ಅಭ್ಯರ್ಥಿ ಎಂದು ಎಲ್ಲೂ ಹೇಳಿಕೊಂಡಿಲ್ಲ

ನಾನು ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಎಲ್ಲಿಯೂ ಸಹ ಅಭ್ಯರ್ಥಿ ಎಂದು ಹೇಳಿಲ್ಲ. ಪಕ್ಷ ನನಗೆ ಎಲ್ಲ ಕೊಟ್ಟಿದ್ದು,ಅದರ ಋುಣ ತೀರಿಸುತ್ತೇನೆ. ಈ ಹಿಂದೆ ನಾನು ಎಂಪಿ ಆಗುತ್ತಿದ್ದೆ, ಆದರೆ ನನಗೆ ಬಂದ ಬೀ ಫಾರಂನ್ನು ಶಿವರಾಮನಗೌಡನಿಗೆ ನೀಡಿ ಅವರನ್ನು ಎಂಪಿ ಮಾಡಲಾಯಿತು.ಅವರು ಪಕ್ಷಕ್ಕೆ ಕಿಸೆ ಒದ್ದು ಬಿಟ್ಟು ಹೋದರು. ಪಕ್ಷ ಗುರುತಿಸಿದ್ದು, ಅದರ ಋುಣ ತೀರಿಸಬೇಕು ಎಂದು ಕ್ಷೇತ್ರದಲ್ಲಿ ಪಕ್ಷದ ಸಂಘಟನಾತ್ಮಕ ಸಭೆ ಮಾಡುತ್ತಿದ್ದೇನೆ. ಟಿಕೆಟ್‌ ನನಗೆ ಎಂದು ನಾನು ಹೇಳಿಕೊಂಡಿಲ್ಲ. ಪಕ್ಷಕ್ಕೆ ಬೆಂಬಲಿಸಿ ಎಂದಿದ್ದೇನೆ. ನನ್ನ ಆಯಸ್ಸನ್ನು ಬಿಜೆಪಿ ಪಕ್ಷ ಸಂಘಟನೆಗಾಗಿ ಕಳೆದಿದ್ದೇನೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!