
ಬೆಂಗಳೂರು(ಡಿ.04): ರಾಜ್ಯ ಬಿಜೆಪಿಗೆ ರೌಡಿಗಳ ಸೇರ್ಪಡೆ ವಿಚಾರವನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ವಿನೂತನ ಅಭಿಯಾನ ಪ್ರಾರಂಭಿಸಿದ್ದು, ‘ಬಿಜೆಪಿ ರೌಡಿ ಮೋರ್ಚಾ ಡಾಟ್ ಕಾಂ’ ಹೆಸರಿನಲ್ಲಿ ಪ್ರತ್ಯೇಕ ವೆಬ್‌ಸೈಟ್ ರೂಪಿಸಿದೆ. ಜತೆಗೆ ವೆಬ್‌ಸೈಟ್‌ನಲ್ಲಿ 2023ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೆಸರಿನಲ್ಲಿ ರೌಡಿಗಳ ವಿವರಗಳನ್ನು ಪ್ರಕಟಿಸುವ ಮೂಲಕ ಬಿಜೆಪಿ ಕಾಲೆಳೆದಿದೆ.
ಇದಕ್ಕಾಗಿಯೇ www.bjprowdymorcha.com (ಬಿಜೆಪಿ ರೌಡಿ ಮೋರ್ಚಾ.ಕಾಂ) ವೆಬ್‌ಸೈಟ್ ರೂಪಿಸಿರುವ ಕಾಂಗ್ರೆಸ್ ಪಕ್ಷವು, ‘ಚುನಾವಣೆ ಹತ್ತಿರ ಬರುತ್ತಿದೆ. ಜನರು ನಮ್ಮಿಂದ ದೂರ ಹೋಗುತ್ತಿದ್ದಾರೆ. ಆಪರೇಷನ್ ಕಮಲ ಮಾಡಿದರೂ ಗೆಲ್ಲುವುದು ಗ್ಯಾರಂಟಿ ಇಲ್ಲ. ಹೀಗಾಗಿ ‘ಬಿಜೆಪಿ ರೌಡಿ ಮೋರ್ಚಾ’ ಸ್ಥಾಪಿಸುವುದಕ್ಕಾಗಿ ‘ಆಪರೇಷನ್ ರೌಡಿ ಶೀಟರ್’ ಪ್ರಾರಂಭಿಸಿದ್ದೇವೆ’ ಎಂದು ಬಿಜೆಪಿಯ ಸಂದೇಶವೆಂಬಂತೆ ವೆಬ್‌ಸೈಟ್‌ನಲ್ಲಿ ಬರೆದು ವ್ಯಂಗ್ಯವಾಡಿದೆ.
ಗೋವಾ ಬಿಜೆಪಿಗರಿಗೆ ಗೋವು ಮಾತೆಯಲ್ಲವೇ? : ಸಿ.ಎಂ.ಇಬ್ರಾಹಿಂ
ಬಿಜೆಪಿ ಅಭ್ಯರ್ಥಿಯ ಅರ್ಹತೆಗಳು:
ಅಭಿಯಾನವನ್ನು ಮತ್ತೊಂದು ಸ್ತರಕ್ಕೆ ತೆಗೆದುಕೊಂಡು ಹೋಗಿರುವ ಕಾಂಗ್ರೆಸ್, 2023ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿಹೆಸರಿನಲ್ಲಿ ರೌಡಿಗಳ ವಿವರಗಳನ್ನು ಪ್ರಕಟಿಸಿದೆ. ಜತೆಗೆ ‘ಶಿಕ್ಷಣ ಮತ್ತು ಮನುಷ್ಯತ್ವದ ಕೊರತೆ, ಬಡವರ ರಕ್ತ ಹೀರುವ ಕಲೆಗಾರಿಕೆ, ಅಧಿಕಾರಕ್ಕಾಗಿ ಏನಾದರೂ ಮಾಡುವ ಮನಃಸ್ಥಿತಿ, ಅಪರಾಧ ಮಾಡಿರುವ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್’ ಇವೇ ನಮ್ಮ ಅಭ್ಯರ್ಥಿ ಅರ್ಹತೆಗಳು ಎಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಬಿಜೆಪಿಯನ್ನು ಅಣಕ ಮಾಡಿದೆ.
2023ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:
2023ಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವಿಲ್ಸನ್ ಗಾರ್ಡನ್ ನಾಗ ಸ್ಪರ್ಧಿಸಲಿದ್ದು, ಅವರು ಕೊಲೆ ಕೇಸ್‌ಗಳು ಸೇರಿದಂತೆ ಹಲವು ಗ್ಯಾಂಗ್‌ವಾರ್‌ಗಳಲ್ಲಿ ಭಾಗಿಯಾದ ಸಾಧನೆ ಮಾಡಿದ್ದಾರೆ. ಇನ್ನು ಸೈಲೆಂಟ್ ಸುನೀಲ ಪೊಲೀಸ್ ಪೇದೆ ಕೊಲೆ ಪ್ರಕರಣ ಸೇರಿದಂತೆ 17 ಕೊಲೆ, ದರೋಡೆ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬೆತ್ತನಗೆರೆ ಶಂಕರ - ವಕೀಲರ ಡಬಲ್ ಮರ್ಡರ್ ಸೇರಿದಂತೆ ಹಲವು ಕೊಲೆ, ಕಿಡ್ನಾಪ್ ಹಾಗೂ ಸುಲಿಗೆ ಪ್ರಕರಣ. ಫೈಟರ್ ರವಿ- ಬೆಟ್ಟಿಂಗ್ ದಂಧೆಯಲ್ಲಿ ಪರಿಣತ, ರೌಡಿ ಶೀಟರ್ ಪೆರೇಡ್‌ನಲ್ಲಿ ಭಾಗಿ.ನಾರ್ವೆ ಸೋಮಶೇಖರ್- ಕೊಲೆ, ದರೋಡೆ ಕೇಸ್, ಆಪರೇಷನ್ ಕಮಲಕ್ಕಾಗಿ ಹವಾಲಾ ದಂಧೆ, ಕೋಮು ಗಲಭೆಯ ಸೂತ್ರದಾರ. ರೌಡಿ ಶೀಟರ್ ಉಪ್ಪಿ- ಕೊಲೆ ಸೇರಿದಂತೆ ಸುಲಿಗೆ ಕೇಸುಗಳು. ಮಣಿಕಂಠ ರಾಥೋಡ್- 25 ಕೇಸ್‌ಗಳಲ್ಲಿ ಆರೋಪಿ, ರೇಷನ್ ಅಕ್ಕಿ ಕಳ್ಳ ಸಾಗಣೆಯಲ್ಲಿ ಪರಿಣತ. ರಾಜೇಂದ್ರ- ಕೊಲೆ ಕೇಸು, ರಿಯಲ್‌ಎಸ್ಟೇಟ್, ಸುಲಿಗೆ ಪ್ರಕರಣದಲ್ಲಿ ಆರೋಪಿ. ಸಂಗಾತಿ ವೆಂಕಟೇಶ್- ಕೊಲೆ ಪ್ರಕರಣದ ಆರೋಪಿ, ಬಿಜೆಪಿ ಯುವ ಮೋರ್ಚಾ ಸದಸ್ಯ ಎಂದು ಬಿಜೆಪಿ ಅಭ್ಯರ್ಥಿಗಳ ಹೆಸರು ಹಾಗೂ ವಿವರಗಳನ್ನು ಪ್ರಕಟಿಸಿದೆ.
ಸಿಎಂ ಬೊಮ್ಮಾಯಿ ಸರ್ಕಾರದಿಂದ ಕನ್ನಡಿಗರ ಮೇಲೆ ಹಗೆ: ಕಾಂಗ್ರೆಸ್
ಜತೆಗೆ ರೌಡಿಗಳು ಬಿಜೆಪಿಗೆ ಸೇರ್ಪಡೆಯಾಗುವುದನ್ನು ಸಮರ್ಥಿಸುವಂತೆ ಇತ್ತೀಚೆಗೆ ಪಕ್ಷದ ನಾಯಕರು ನೀಡಿದ್ದ ಹೇಳಿಕೆಗಳನ್ನೂ ಪ್ರಕಟಿಸಿದೆ. ಉದಾಹರಣೆಗೆ ‘ಜೀವನದಲ್ಲಿ ಅಚಾತುರ್ಯ ಆಗುತ್ತದೆ. ಎಲ್ಲವನ್ನೂ ಕ್ರಿಮಿನಲ್ ಕೇಸ್ ಎಂದು ಹೇಳಲು ಸಾಧ್ಯವಿಲ್ಲ- ನಳಿನ್‌ಕುಮಾರ್ ಕಟೀಲ್.’ ‘ರೌಡಿಶೀಟರ್ ಪಟ್ಟಿಯಲ್ಲಿರುವವರನ್ನು ರೌಡಿಶೀಟರ್ ಎಂದು ಕರೆಯುವುದು ಸಮಂಜಸವಲ್ಲ. ಯಾಕೆಂದರೆ ನನ್ನ ಹೆಸರೂ ರೌಡಿಶೀಟರ್ ಪಟ್ಟಿಯಲ್ಲಿತ್ತು- ಸಿ.ಟಿ. ರವಿ.’
ಸಾಮಾಜಿಕ ಜಾಲತಾಣದಲ್ಲೂ ಕಿಡಿ:
ಈ ಬಗ್ಗೆ ಕಾಂಗ್ರೆಸ್ ಪಕ್ಷವು ತನ್ನ ಜಾಲತಾಣದಲ್ಲೂ ಕಿಡಿ ಕಾರಿದ್ದು, ‘ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು.’ ಹಿಂದೆ ರೌಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು. ಈಗ ಬಿಜೆಪಿಯ ರೌಡಿ ರಾಜಕೀಯದಿಂದ ಅದೇ ರೌಡಿಗಳಿಗೆ ಪೊಲೀಸರು ಸಲ್ಯೂಟ್ ಹೊಡೆಯುವಂತಾಗಿದೆ. ಕೋಮು ರಾಜಕಾರಣ ಸಾಲದು ಎಂಬಂತೆ ರೌಡಿ ರಾಜಕಾರಣ ಶುರು ಮಾಡಿದ್ದಾರೆ. ರಾಮರಾಜ್ಯದ ಕನಸು ತೋರಿಸಿ ರೌಡಿರಾಜ್ಯ ತರಲು ಹೊರಟಿದ್ದಾರೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಟೀಕಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.