ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅರ್ಜಿಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿ ಶನಿವಾರ ರಾಜ್ಯ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಲಿದ್ದಾರೆ.
ಬೆಂಗಳೂರು (ಆ.31): ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅರ್ಜಿಗಳಿಗೆ ಅನುಮತಿ ನೀಡುವಂತೆ ಆಗ್ರಹಿಸಿ ಶನಿವಾರ ರಾಜ್ಯ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜಭವನ ಚಲೋ ನಡೆಸಲಿದ್ದಾರೆ. ಈ ವೇಳೆ ರಾಜ್ಯಪಾಲರ ಪಕ್ಷಪಾತಿ ಧೋರಣೆ ಹಾಗೂ ಕೇಂದ್ರದ ಎನ್‌ಡಿಎ ಸರ್ಕಾರಮತ್ತು ಬಿಜೆಪಿಯಕೈಗೊಂಬೆಯಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆಂದು ತೀವ್ರವಾಗಿ ಖಂಡಿಸಲಿದ್ದಾರೆ.
ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ಪುನರ್ ಪರಿಶೀಲಿಸುವಂತೆ ಕೋರಲಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಿಂದ ರಾಜಭವನದವರೆಗೆ ಕಾಲ್ನಡಿಗೆ ಮೂಲಕ ಪ್ರತಿಭಟನಾ ಕ್ಯಾಲಿ ನಡೆಸಲಿರುವ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮಾಜಿ ರಾಜ್ಯಪಾಲರನ್ನು ಭೇಟಿ ಮಾಡಿ, ಪ್ರತಿಪಕ್ಷಗಳ ನಾಯಕರಮೇಲಿನ ಪ್ರಾಸಿಕ್ಯೂಷನ್ ಅರ್ಜಿಗಳಿಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸದ್ದಾರೆ.
ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಜನಾರ್ದನರೆಡ್ಡಿ ವಿರುದ್ದ ತನಿಖೆ ವೇಳೆ ಆರೋಪ ಸಾಬೀತಾಗಿ ತನಿಖಾ ಸಂಸ್ಥೆಗಳೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರೂ ಅನುಮತಿ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರಿನ ಆಧಾರದ ಮೇಲೆ ಅಕ್ರಮವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಈ ಬಗ್ಗೆ ಖಂಡನೆ ವ್ಯಕ್ತಪಡಿಸುವ ಜತೆಗೆ ಪ್ರತಿಪಕ್ಷಗಳ ನಾಯಕರ ಮೇಲಿನ ಅರ್ಜಿಗಳನ್ನು ಇತ್ಯರ್ಥಿಸುವಂತೆ ಆಗ್ರಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಛತ್ರಪತಿ ಶಿವಾಜಿ ಮಹಾರಾಜ್ ಕಾಲಿಗೆ ತಲೆ ಇಟ್ಟು ಕ್ಷಮೆ ಕೋರುವೆ: ಪ್ರಧಾನಿ ಮೋದಿ
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಜತೆಗೆ ಎಲ್ಲಾ ಸಚಿವರು, ಪಕ್ಷದ ಶಾಸಕರು, ಸಂಸದರು, ರಾಜ್ಯಸಭೆ ಹಾಗೂ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಸಹ ಭಾಗವಹಿಸಲಿದ್ದಾರೆ. ಸಿಎಂ ಮೇಲಿನ ಕ್ರಮ ಪುನರ್ ಪರಿಶೀಲಿಸಿ: ಈ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ವಿಧಾನಸೌಧದಿಂದ ರಾಜಭವನದವರೆಗೆ ಜಾಥಾ ನಡೆಸಿ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.