ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿಧೇ. ಸೋನಿಯಾ, ರಾಹುಲ್ ಗಾಂಧಿಯವರಿಗೆ ಇಡಿ ವಿಚಾರಣೆ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದೆ. ನರೇಂದ್ರ ಮೊದಿ ಸರ್ಕಾರ ಹಿಟ್ಲರ್ ಮಾದರಿಯಲ್ಲಿದೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಕಿಡಿಕಾರಿದ್ದಾರೆ.
ಮಡಿಕೇರಿ (ಜು.23): ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುವ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕೆಪಿಸಿಸಿ(KPCC) ವಕ್ತಾರ ಎಂ. ಲಕ್ಷ್ಮಣ್(M.Lakshman), ಭಾರತ ದೇಶದಲ್ಲಿ ಹಿಟ್ಲರ್ ಮಾದರಿಯ(Hitler model) ಆಡಳಿತ ನಡೆಯುತ್ತಿದೆ. ಬಿಜೆಪಿ ಸರ್ಕಾರ(BJP Govt) ಧೈರ್ಯದಿಂದ ಚುನಾವಣೆ(Election) ಎದುರಿಸುವುದನ್ನು ಬಿಟ್ಟು ವಿವಿಧ ಸಂಸ್ಥೆಗಳ ಮೂಲಕ ಕಾಂಗ್ರೆಸ್ ನಾಯಕರಿಗೆ(Congress Leaders) ಕಿರುಕುಳ ನೀಡುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕಾರ್ಯ ಮಾಡದ ಕೇಂದ್ರ ಸರ್ಕಾರ ಚುನಾವಣೆ ಸಮಯದಲ್ಲಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
National Herald Case: 25ರ ಬದಲು 26ಕ್ಕೆ ಸೋನಿಯಾ ಇ.ಡಿ. ವಿಚಾರಣೆ
ಯಾವುದೇ ರೀತಿಯ ಎಫ್‌ಐಆರ್(FIR) ದಾಖಲಿಸಿದೆ ಇಡಿ(ED) ಸಂಸ್ಥೆ ವಿಚಾರಣೆ ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ. ನ್ಯಾಷನಲ್ ಹೆರಾಲ್ಡ(National Herald)… ಸಂಸ್ಥೆ ಇದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ(Rahul Gandhi) ರಾಜಕಾರಣದಲ್ಲಿಯೇ ಇರಲಿಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ತನಿಖೆ ನಡೆಸುತ್ತಿದೆ ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ(Protest) ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಬಡವರ ಮತದಾನದ ಹಕ್ಕನ್ನು ಕಸಿಯುವ ಸಂಚನ್ನು ಬಿಜೆಪಿ ಸರ್ಕಾರ ರೂಪಿಸುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ವಿನಾಕಾರಣ ಕಾಂಗ್ರೆಸ್ ನಾಯಕರಿಗೆ ಕಳಂಕ ತರುವ ಉದ್ದೇಶದಿಂದ ಈ ರೀತಿಯ ಸಂಚನ್ನು ಕೇಂದ್ರ ಮಾಡಿದೆ. ಭ್ರಷ್ಟಾಚಾರ ಆರೋಪ ಹೊತ್ತ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೆಲ ಸಮಯದಲ್ಲಿ ಕ್ಲೀನ್ ಚೀಟ್ ಪಡೆದಿದ್ದಾರೆ. ಆದರೆ, ಯಾವುದೇ ತಪ್ಪು ಮಾಡದೆ ಕಾನೂನು ಬಾಹಿರವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಕರೆಸಿ ವಿಚಾರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಸೋನಿಯಾ ವಿಚಾರಣೆಗೆ ಕಾಂಗ್ರೆಸಿಗರು ಕೆಂಡ: ರಾಜಭವನ ಮುತ್ತಿಗೆ ಯತ್ನ
ಕಾವೇರಿ ಹಾಗೂ ಕೊಡವರ ಅವಹೇಳನ ಮಾಡಿದ ಪ್ರಕರಣದ ಹಿಂದೆ ಕಾಣದ ಕೈಗಳು ಅಡಗಿವೆ. ಚುನಾವಣೆ ಸಮಯದಲ್ಲಿ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು ಎಂದರು.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಪ್ರಮುಖರಾದ ಟಿ.ಪಿ. ರಮೇಶ್, ಕೆ.ಕೆ. ಮಂಜುನಾಥ್ ಕುಮಾರ್, ಡಾ. ಮಂಥರ್ ಗೌಡ, ಸುರಯ್ಯಾ ಅಬ್ರಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು