* ಟಿಕೆಟ್‌ಗಾಗಿ ಈಗಿನಿಂದಲೇ ಪೈಪೋಟಿ ಶುರು
* ಜನವರಿಗೆ ಮುಕ್ತಾಯವಾಗಲಿರುವ ಶ್ರೀನಿವಾಸ ಮಾನೆ ಸ್ಥಾನ
* ಈ ಕ್ಷೇತ್ರದಿಂದ ಈವರೆಗೆ ಒಮ್ಮೆಯೂ ಪರಿಶಿಷ್ಟ ಜಾತಿಗೆ ಸಿಗದ ಟಿಕೆಟ್
ಶಿವಾನಂದ ಗೊಂಬಿ
ಹುಬ್ಬಳ್ಳಿ(ಸೆ.25): ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ(Vidhan Parishat) 2 ಸ್ಥಾನಗಳ ಅವಧಿ 2022ರ ಜನವರಿಯಲ್ಲಿ ಮುಕ್ತಾಯವಾಗಲಿದೆ. ಕಾಂಗ್ರೆಸ್‌ನಲ್ಲಿ ಈಗಿನಿಂದಲೇ ತಯಾರಿ ಬಲುಜೋರಾಗಿದೆ. ಟಿಕೆಟ್‌ಗಾಗಿ ಪೈಪೋಟಿ ಕೂಡ ಜೋರಾಗಿದೆ.
ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಆಯ್ಕೆ ಮಾಡುವ ಕ್ಷೇತ್ರವಿದು. ಅವಿಭಜಿತ ಧಾರವಾಡ(Dharwad) ಜಿಲ್ಲೆ (ಹಾವೇರಿ, ಧಾರವಾಡ, ಗದಗ) ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಪರಿಷತ್ ಸ್ಥಾನವಿದು. ಎರಡು ಸ್ಥಾನಗಳಿಗೆ ಆಯ್ಕೆ ಮಾಡಬೇಕಿದೆ. ಬಿಜೆಪಿ(BJP) ಹಾಗೂ ಕಾಂಗ್ರೆಸ್‌ನವರು ಹೊಂದಾಣಿಕೆ ಮಾಡಿಕೊಂಡು ಎರಡೂ ಪಕ್ಷಗಳಿಂದ ಒಬ್ಬೊಬ್ಬರನ್ನೇ ಕಣಕ್ಕಿಳಿಸುವುದರಿಂದ ಎರಡೂ ಪಕ್ಷಗಳಲ್ಲಿ ಆಯ್ಕೆಯಾಗುವುದು ಖಚಿತ. ಸದ್ಯ ಬಿಜೆಪಿಯಿಂದ ಪ್ರದೀಪ ಶೆಟ್ಟರ್ ಹಾಗೂ ಕಾಂಗ್ರೆಸ್‌ನಿಂದ(Congress) ಶ್ರೀನಿವಾಸ ಮಾನೆ ಸದಸ್ಯರಾಗಿದ್ದಾರೆ. ಇದೀಗ ಎರಡೂ ಕ್ಷೇತ್ರಗಳ ಅವಧಿ ಮುಕ್ತಾಯವಾಗಲಿದೆ.
ಶ್ರೀನಿವಾಸ ಮಾನೆ ಹಾನಗಲ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗುವ ಆಸಕ್ತಿ ಹೊಂದಿದ್ದರಿಂದ ಕಾಂಗ್ರೆಸ್‌ನಲ್ಲಿ ಇದೀಗ ಪೈಪೋಟಿ ಜೋರಾಗಿದೆ. ಮುಸ್ಲಿಂ ಸಮುದಾಯಕ್ಕೆ ಕೊಡಿ ಎಂಬ ಬೇಡಿಕೆಯನ್ನಿಟ್ಟುಕೊಂಡು ಕೆಲವರು ಈಗಿನಿಂದಲೇ ಪೈಪೋಟಿಗಿಳಿದಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಮಾಜಿ ಸಚಿವ ಎ.ಎಂ. ಹಿಂಡಸಗೇರಿ. ಈ ಹಿಂದೆ ಎರಡು ಬಾರಿ ಈ ಕ್ಷೇತ್ರದಿಂದಲೇ ಆಯ್ಕೆಯಾಗಿ, ಒಂದು ಬಾರಿ ಸಚಿವರೂ ಆದವರು ಹಿಂಡಸಗೇರಿ. ಇದೀಗ ಮತ್ತೆ ತಮಗೆ ಅವಕಾಶ ಮಾಡಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ.
'2023ಕ್ಕೆ ಕಾಂಗ್ರೆಸ್‌ಗೆ ಅಧಿಕಾರ : ಸಿದ್ದರಾಮಯ್ಯಗೆ ಸಿಎಂ ಪಟ್ಟ'
ಇನ್ನೂ ಲೋಕಸಭಾ ಚುನಾವಣೆ(Election) ವೇಳೆ ಸ್ವಲ್ಪದರಲ್ಲಿ ಟಿಕೆಟ್ ತಪ್ಪಿಸಿಕೊಂಡ, ಮಾಜಿ ಸಂಸದ ಐ.ಜಿ. ಸನದಿ ಅವರ ಪುತ್ರ ಶಾಕೀರ್ ಸನದಿ, ಪಶ್ಚಿಮ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡ ಇಸ್ಮಾಯಿಲ್ ತಮಟಗಾರ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು, ಸಲೀಂ ಅಹ್ಮದ ಸೇರಿದಂತೆ ಐದಾರು ಮುಸ್ಲಿಂ ಮುಖಂಡರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ.
ಈ ಕ್ಷೇತ್ರದಿಂದ ಈವರೆಗೆ ಒಮ್ಮೆಯೂ ಪರಿಶಿಷ್ಟ ಜಾತಿಗೆ ಟಿಕೆಟ್ ನೀಡಿಯೇ ಇಲ್ಲ. ಹೀಗಾಗಿ ಈ ಸಲ ನಮಗೆ ನೀಡಬೇಕೆಂಬ ಒತ್ತಡವೂ ಪರಿಶಿಷ್ಟ ಜಾತಿ ಸಮುದಾಯದವರಿಂದ ಕೇಳಿ ಬಂದಿದೆ. ಪರಿಶಿಷ್ಟ ಜಾತಿ ನೀಡಬೇಕೆಂಬ ಬೇಡಿಕೆ ಆ ಸಮುದಾಯದವರು ಪೈಪೋಟಿಗಿಳಿದು ಎಫ್.ಎಚ್. ಜಕ್ಕಪ್ಪನವರ, ಮೋಹನ ಹಿರೇಮನಿ ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದರೆ, ಲಿಂಗಾಯತ ಕೋಟಾದಿಂದ ಶರಣಪ್ಪ ಕೊಟಗಿ, ಸದಾನಂದ ಡಂಗನವರ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ ಹಲವರು ಟಿಕೆಟ್‌ಗಾಗಿ ಈಗಿನಿಂದಲೇ ಕಸರತ್ತು ನಡೆಸಿದ್ದಾರೆ. ಇದಷ್ಟೆಅಲ್ಲದೇ, ಅತ್ತ ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲೂ ಕೆಲವರು ಟಿಕೆಟ್‌ಗಾಗಿ ಪೈಪೋಟಿಗಿಳಿದಿದ್ದಾರೆ.
ಆಕಾಂಕ್ಷಿಗಳಿಂದ ಕಾಂಗ್ರೆಸ್ ಪಕ್ಷವೂ ಅರ್ಜಿ ಆಹ್ವಾನಿಸಿದೆ. ಸೆ. 30ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಇದಕ್ಕಾಗಿ ಈಗಾಗಲೇ ಎಂಟ್ಹತ್ತು ಜನ ಅರ್ಜಿ ಕೂಡ ಪಡೆದಿರುವುದುಂಟು. ಹೀಗಾಗಿ ಈ ಸಲ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿರುವುದಂತೂ ಸತ್ಯ. ಆದರೆ ಯಾರಿಗೆ ಟಿಕೆಟ್‌ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೇರಿಸಲು ಮಾಸ್ಟರ್ ಪ್ಲಾನ್
ಅರ್ಜಿಗೇ 1 ಲಕ್ಷ: ಅಸಮಾಧಾನ
ವಿಪ ಸದಸ್ಯ ಚುನಾವಣೆಗೆ ಟಿಕೆಟ್ ಬಯಸಿ ಆಕಾಂಕ್ಷಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನಾಂಕವಾಗಿದೆ. ಆದರೆ ಅರ್ಜಿಗೆ 1 ಲಕ್ಷ ಹಣವನ್ನು ಕಟ್ಟಡ ಅಭಿವೃದ್ಧಿ ನಿಧಿಯೆಂದು ಪಾವತಿಸಿದಾಗ ಮಾತ್ರ ಅರ್ಜಿ ನಮೂನೆ ಪಡೆಯಬಹುದಾಗಿದೆ. ಅರ್ಜಿಗೇ 1 ಲಕ್ಷ ನಿಗದಿಪಡಿಸಿರುವುದು ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಅಂದರೆ ಚುನಾವಣೆಗೆ ದುಡ್ಡಿದ್ದವರೇ ನಿಲ್ಲಬೇಕಾ? 1 ಲಕ್ಷ ಕೊಟ್ಟು ಅರ್ಜಿ ಸಲ್ಲಿಸಿದರೆ ಟಿಕೆಟ್‌ಸಿಗುವ ಭರವಸೆಯೂ ಇಲ್ಲ? ಇಷ್ಟೊಂದು ದುಡ್ಡು ಕೊಡಬೇಕಾ? ಎಂಬ ಪ್ರಶ್ನೆ ಕಾರ್ಯಕರ್ತರು ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿಪ ಸದಸ್ಯಕ್ಕೆ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತಿದೆ. ಇದಕ್ಕೆ ಹೈಕಮಾಂಡ್ 1 ಲಕ್ಷ ಕಟ್ಟಡ ಅಭಿವೃದ್ಧಿ ನಿಧಿಯೆಂದು ಪಡೆಯುತ್ತಿದೆ. ಈಗಾಗಲೇ ಏಳೆಂಟು ಜನ ಅರ್ಜಿ ತೆಗೆದುಕೊಂಡಿದ್ದಾರೆ. 30ರ ವರೆಗೆ ಅವಕಾಶವಿರುವುದರಿಂದ ಇನ್ನಷ್ಟು ಜನ ಅರ್ಜಿ ಪಡೆಯಲಿದ್ದಾರೆ. ನಾನೂ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ತಿಳಿಸಿದ್ದಾರೆ.