
ಬೆಳಗಾವಿ( ಸೆಪ್ಟೆಂಬರ್ 29): ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕೆಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನ ನಿಷೇಧಿಸಬೇಕು ಎಂದು ಬೆಳಗಾವಿಯಲ್ಲಿ ಹೇಳಿದ್ದಾರೆ. ದೇಶದಲ್ಲಿ ಪಿಎಫ್‌ಐ, ಎಸ್‌ಡಿಪಿಐನಂತಹ ಸಂಘಟನೆಗಳಿಗೆ ಕಾಂಗ್ರೆಸ್ ಶಕ್ತಿ ನೀಡಿದೆ. ಆಂತರಿಕ ಭಯೋತ್ಪಾದನೆಯಂತ ಚಟುವಟಿಕೆ ನಡೆಸಲು ಆ ಸಂಘಟನೆಗಳಿಗೆ ಕೈ ಪಕ್ಷವೇ ಶಕ್ತಿ ಕೊಟ್ಟಿದೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಇನ್ನು, ಕಾಂಗ್ರೆಸ್ ಸ್ವಾತಂತ್ರ್ಯಾನಂತರ ದೇಶದಲ್ಲಿ ಆಡಳಿತ ಮಾಡಿದ್ರೆ ಈ ದೇಶ ಹಾಳು ಮಾಡುತ್ತೆ ಅಂತ ಮಹಾತ್ಮ ಗಾಂಧಿಯವರಿಗೆ ಗೊತ್ತಿತ್ತು. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಲಿ ಅಂತ ಮಹಾತ್ಮ ಗಾಂಧೀಜಿಯೇ ಹೇಳಿದ್ರು ಅವರು ಮಾಡಲಿಲ್ಲ ಎಂದು ಬೆಳಗಾವಿಯಲ್ಲಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ಹಗರಣದ ಬಗ್ಗೆ ಸ್ಕ್ಯಾಮ್ ರಾಮಯ್ಯ ಹೆಸರಿನಡಿ ಬಿಜೆಪಿಯಿಂದ ಪುಸ್ತಕ ಬಿಡುಗಡೆ
ಅಲ್ಲದೆ, ಕಾಂಗ್ರೆಸ್ ಕಾಲಘಟ್ಟದಲ್ಲಿ ಎಷ್ಟು ಪಿಎಫ್‌ಐ ಕಾರ್ಯಕರ್ತರನ್ನ ರಕ್ಷಣೆ ಮಾಡಿದ್ದಾರೆ, ಹಂತಕರನ್ನ ರಕ್ಷಣೆ ಮಾಡಿದ್ದಾರೆ ಎಂದು ಸಿದ್ದರಾಮಣ್ಣ ಒಮ್ಮೆ ಅಧ್ಯಯನ ಮಾಡಲಿ.
ಗೋ ಹಂತಕರನ್ನ ರಕ್ಷಣೆ ಮಾಡಿರುವ ಬಗ್ಗೆ ಅಧ್ಯಯನ ಮಾಡಲಿ, ಆಗ ಅವರೇ ಹೇಳ್ತಾರೆ ಕಾಂಗ್ರೆಸ್ ಅನ್ನ ನಿಷೇಧ ಮಾಡಲಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ನಳಿನ್‌ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ.
ಸಿಬಿಐ, ಐಟಿ ಎಲ್ಲರ ತನಿಖೆ ಮಾಡಲಿದೆ: ಕಟೀಲ್
ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಿಬಿಐ, ಐಟಿ ಎಲ್ಲರ ತನಿಖೆಯನ್ನು ಮಾಡಲಿದೆ. ಇವರು ಸರಿಯಾಗಿದ್ದರೆ ಭಯಪಡುವ ಅವಶ್ಯಕತೆ ಇಲ್ಲ. ಕದ್ದಿದ್ರೆ ಭಯಪಡಬೇಕು, ಕದ್ದಿಲ್ಲ ಅಂದ್ರೆ ಭಯಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿ ಹೋಗಿ ಉತ್ತರ ಕೊಡಬೇಕು ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಎಲ್ಲರೊಳಗೊಂದಾಗಿ ದೇಶ ಕಟ್ಟುತ್ತಿರುವ ನಾಯಕ ನರೇಂದ್ರ ಮೋದಿ
ಅಲ್ಲದೆ, ಕಾಂಗ್ರೆಸ್ ಅಧಿಕಾರದ ಕಾಲಘಟ್ಟದಲ್ಲೂ ಎಲ್ಲರ ಮೇಲೂ ತನಿಖೆ ಆಗಿದೆ. ಹಾಗಂತ ಎಲ್ಲರೂ ಹೆದರಿದ್ರಾ? ನರೇಂದ್ರ ಮೋದಿ ಅವರನ್ನ 9 ಗಂಟೆಗಳ ಕಾಲ ತನಿಖೆ ಮಾಡಿದ್ರು. ಅಮಿಶ್ ಶಾ ಅವರನ್ನ ಜೈಲಿಗೆ ಹಾಕಿದ್ದರು. ಆ ವೇಳೆ ನಾವು ಸ್ಟ್ರೈಕ್ ಮಾಡಿದ್ವೋ, ಬೀದಿ ಹೋರಾಟ ಮಾಡಿದ್ವೋ ಎಂದೂ ಬೆಳಗಾವಿಯಲ್ಲಿ ನಳಿನ್‌ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ. ಹಾಗೆ, ಕಾಂಗ್ರೆಸ್‌ನವರು ಮಾತ್ರ ಜೈಲಿಗೆ ಹೋದ್ರೆ, ಬಂದ್ರೆ ಮೆರವಣಿಗೆ ಮಾಡ್ತಾರೆ. ಐಟಿ ದಾಳಿ ನಡೆದ್ರೆ ಜನ ಸೇರಿಸಿ ಗೋಳೋ ಅಂತಾ ಬೊಬ್ಬೆ ಹಾಕ್ತಾರೆ. ಕಾನೂನಿಗೆ ಗೌರವ ಕೊಡುವವರಾ ಇವರು ಎಂದೂ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬರಲ್ಲ: ಕಟೀಲ್
ಇನ್ನೊಂದೆಡೆ, ಗುಜರಾತ್ ಜೊತೆಗೆ ಕರ್ನಾಟಕದಲ್ಲೂ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬರಲ್ಲ. ನಮ್ಮ ಸರ್ಕಾರದ ಪೂರ್ಣ ಅವಧಿ ಪೂರೈಸುತ್ತವೆ, ನಮಗೆ ಯಾವುದೇ ಚುನಾವಣೆ ಧಾವಂತ ಇಲ್ಲ. ಸಿಎಂ ಆಗೋ ಧಾವಂತ ಇರೋದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ಗೆ ಮಾತ್ರ, ನಮ್ಮ ಪಕ್ಷದಲ್ಲಿ ಅಂತಹ ಧಾವಂತಗಳು ಇಲ್ಲ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಪೂರ್ವ ಚುನಾವಣೆ ನಡೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.