1 ಮತಕ್ಕೆ 6000: ರಮೇಶ್‌ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ ದೂರು

By Kannadaprabha NewsFirst Published Jan 26, 2023, 2:40 AM IST
Highlights

5 ಕೋಟಿ ಮತದಾರರಿಗೆ 30 ಸಾವಿರ ಕೋಟಿ ರು. ಹಂಚಲು ಸಿದ್ಧವಿದ್ದೇವೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಬೆಂಗಳೂರು (ಜ.26): ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಿ ಮತದಾರರಿಗೆ 6 ಸಾವಿರ ರು. ನೀಡಿ ಮತ ಪಡೆಯಲಾಗುವುದು. ಎದುರಾಳಿ ಅಭ್ಯರ್ಥಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಅದಕ್ಕಿಂತ 10 ಕೋಟಿ ರು. ಹೆಚ್ಚು ಹಣ ಖರ್ಚು ಮಾಡಿ 5 ಕೋಟಿ ಮತದಾರರಿಗೆ 30 ಸಾವಿರ ಕೋಟಿ ರು. ಹಂಚಲು ಸಿದ್ಧವಿದ್ದೇವೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ನಿಯೋಗವು, ಪ್ರತಿ ಮತದಾರನಿಗೆ 6000 ರು. ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ರಮೇಶ್‌ ಜಾರಕಿಹೊಳಿ ಸಂಚು ರೂಪಿಸಿದ್ದಾರೆ. ಜತೆಗೆ ಅವರಿಗೆ ಪ್ರೇರಣೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವಿರುದ್ಧವೂ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿತು.

ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಭ್ರಷ್ಟಾಚಾರ: ಅಧಿಕಾರಿಗಳ ಬಣ್ಣ ಬಯಲು ಮಾಡಿದ ರುಪ್ಸಾ

ರಮೇಶ್‌ ಜಾರಕಿಹೊಳಿ ಹೇಳಿಕೆ ಕುರಿತ ಆಡಿಯೋ ಹಾಗೂ ವಿಡಿಯೋ ಕುರಿತ ಸಾಕ್ಷ್ಯಗಳನ್ನೂ ದೂರಿನೊಂದಿಗೆ ಒದಗಿಸಿದ್ದು, ಕೂಡಲೇ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಜತೆಗೆ ಈವರೆಗೆ ರಮೇಶ್‌ ಜಾರಕಿಹೊಳಿ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳದೆ ಅವರ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿರುವ ಬಸವರಾಜ ಬೊಮ್ಮಾಯಿ, ನಡ್ಡಾ ಹಾಗೂ ಕಟೀಲ್‌ ವಿರುದ್ಧವೂ ಕ್ರಮವಾಗಬೇಕು ಎಂದು ಕೋರಿತು.

ಕೂಡಲೇ ಎಫ್‌ಐಆರ್‌ ದಾಖಲಿಸಿ: ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ನಾವು ರಾಜ್ಯ ಪ್ರವಾಸದಲ್ಲಿದ್ದ ಕಾರಣದಿಂದ ಕಳೆದ 2-3 ದಿನಗಳಲ್ಲಿ ಬಂದು ದೂರು ನೀಡಲಾಗಲಿಲ್ಲ. ಇಂದು ರಾಷ್ಟ್ರೀಯ ಮತದಾರರ ದಿನವಾಗಿದ್ದು, ಮತದಾನದ ಹಕ್ಕನ್ನು ಖರೀದಿಸುವ ಧಾಷ್ಟ್ರ್ಯ ಪ್ರದರ್ಶಿಸಿರುವವರ ವಿರುದ್ಧ ದೂರು ದಾಖಲಿಸಿದ್ದೇವೆ. ಮತದಾರರ ಪವಿತ್ರವಾದ ಹಕ್ಕನ್ನು ಉಳಿಸಲು ದೂರು ನೀಡಿದ್ದು, ಗುರುವಾರ ನಮ್ಮ ನಾಯಕರು ಸಭೆ ನಡೆಸಿ ಪ್ರತಿ ಕ್ಷೇತ್ರದಲ್ಲೂ ನಿಗಾ ವಹಿಸಲು ಕಾರ್ಯಕರ್ತರಿಗೆ ಸೂಚಿಸುತ್ತೇವೆ ಎಂದರು.

ಬಿಜೆಪಿಯವರ ಹೇಳಿಕೆಗಳನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾವು ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಆದರೂ ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ ಸಚಿವರು, ಶಾಸಕರು ಹೇಳುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್‌ ಮೂಲಕ ಸಾವಿರಾರು ಕೋಟಿ ಹಣ ಸಂಗ್ರಹಿಸಿದೆ. ಈ ಹಣದಲ್ಲಿ 5 ಕೋಟಿ ಮತದಾರರಿಗೆ ಪ್ರತಿಯೊಬ್ಬರಿಗೆ 6 ಸಾವಿರ ರು.ನಂತೆ ಒಟ್ಟು 30 ಸಾವಿರ ಕೋಟಿ ಹಣ ಹಂಚಲು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ದಾಖಲೆ ಸಮೇತ ಐಪಿಸಿ ಸೆಕ್ಷನ್‌ 171ಬಿ, 506, ಜನಪ್ರತಿನಿಧಿ ಕಾಯ್ದೆ 123 ಪ್ರಕಾರ ದೂರು ದಾಖಲಿಸಿದ್ದೇವೆ. ಅವರ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಿಎಂ ಭ್ರಷ್ಟಾಚಾರದ ಪಿತಾಮಹ: ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದು ಕಾಂಗ್ರೆಸ್‌ ಎಂಬ ಬೊಮ್ಮಾಯಿ ಹೇಳಿಕೆಗೆ, ‘ಭ್ರಷ್ಟಾಚಾರದ ಪಿತಾಮಹ ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡ. ಗೃಹ ಲಕ್ಷ್ಮೇ ಯೋಜನೆಯನ್ನೂ ಆಮಿಷ ಎಂದು ಅವರು ಹೇಳುತ್ತಾರೆ. ನಾವು ಏನೇ ಮಾತನಾಡಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಿದ್ದೇವೆ. ಇಂತಹ ಹೇಳಿಕೆಗಳ ಮೂಲಕ ರಮೇಶ್‌ ಜಾರಕಿಹೊಳಿ ಹೇಳಿಕೆಯನ್ನು ಅವರು ಸಮರ್ಥಿಸುತ್ತಿದ್ದಾರಾ ಎಂದು ಕಿಡಿ ಕಾರಿದರು.

ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ

ಆರೋಪಿಗಳನ್ನು ಬಂಧಿಸಿ-ಸಿದ್ದು: ಸಿದ್ದರಾಮಯ್ಯ ಮಾತನಾಡಿ, ಲಂಚ ಇಲ್ಲದೆ ಏನೂ ಆಗಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಪೊಲೀಸ್‌ ಠಾಣೆ, ತಹಸೀಲ್ದಾರ್‌ ಕಚೇರಿಯಿಂದ ಹಿಡಿದು ಪ್ರತಿಯೊಂದರಲ್ಲೂ ಲಂಚಾವತಾರ ತಾಂಡವವಾಡುತ್ತಿದೆ. ಸೋಲಿನ ಭೀತಿಯಲ್ಲಿ ಅಂತಹ ಲಂಚದ ಹಣದಲ್ಲಿ ಮತ ಖರೀದಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

click me!