Congress Padayatre ಕ್ವಾರಂಟೈನ್ ಮಾಡಲು ಕೊರೋನಾ ಸೋಂಕಿತ ಅಧಿಕಾರಿಯನ್ನ ಡಿಕೆಶಿ ಬಳಿ ಕಳುಹಿಸಿದ್ರಾ?

By Suvarna News  |  First Published Jan 10, 2022, 9:11 PM IST

* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ
* ಕ್ವಾರಂಟೈನ್ ಮಾಡಲು ಕೊರೋನಾ ಸೋಂಕಿತ ಅಧಿಕಾರಿಯನ್ನ ಬೇಕಂತಲೇ ಡಿಕೆಶಿ ಹತ್ತಿರ ಕಳುಹಿಸಿದ್ರಾ?
* ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ


ರಾಮನಗರ, (ಜ.10): ಪಾದಯಾತ್ರೆ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ(DK Shivakumar) ಕೊರೋನಾ ಪರೀಕ್ಷೆ ಮಾಡಲು ಬಂದಿದ್ದ ಆರೋಗ್ಯ ಅಧಿಕಾರಿಗೆ ಕೋವಿಡ್ ಸೋಂಕು (Coroanvirus) ತಗುಲಿರುವುದು ದೃಢಪಟ್ಟಿದೆ.

ರಾಮನಗರ(Ramanagara) ಎಡಿಸಿ ಜವರೇಗೌಡರಿಗೆ ಕೋವಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಆರ್‌ಟಿಪಿಸಿಆರ್ ಪರೀಕ್ಷೆಗೆ ಸ್ವ್ಯಾಬ್‌ಗೆ ಕಳಿಸಲಾಗಿದೆ.

Tap to resize

Latest Videos

Makedatu Padayatre ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಗೈರಾಗಿದ್ದೇಕೆ? ಕಾರಣ ಬಿಚ್ಚಿಟ್ಟ ಮಧು ಬಂಗಾರಪ್ಪ

ಎಡಿಸಿ ಜವರೇಗೌಡ ನಿನ್ನೆ(ಭಾನುವಾರ) ಡಿ ಕೆ ಶಿವಕುಮಾರ್ ಭೇಟಿ ಮಾಡಿದ್ದರು. ಅಲ್ಲದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಆದರೆ ಡಿಕೆಶಿ ಮಾಡಿಸಿಕೊಳ್ಳುವುದಿಲ್ಲ. ನಾನು ಚೆನ್ನಾಗಿದ್ದೇನೆ ಹೋಗಯ್ಯ ಎಂದು ಅವಾಜ್ ಹಾಕಿ ವಾಪಸ್ ಕಳಿಸಿದ್ದರು.

ಇನ್ನು ತಮಗೆ ಕೊರೋನಾ ಟೆಸ್ಟ್ ಮಾಡಲು ಬಂದಿದ್ದ ಅಧಿಕಾರಿಗೆ ಸೋಂಕು ತಗುಲಿರುವುದರ ಬಗ್ಗೆ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರಾಮನಗರ ಜಿಲ್ಲೆಯ ಮಾದಪ್ಪನ ದೊಡ್ಡಿಯಲ್ಲಿ ಇಂದು(ಸೋಮವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನ ಪಾಸಿಟಿವ್ ಮಾಡೋಕೆ ಬಂದಿದ್ರು ಅನ್ನೋದು ಗೊತ್ತಿತ್ತು. ಅವರ ಅಧಿಕಾರಿಗಳೇ, ಕೆಲ ಸಚಿವರೇ ಈ ಕುರಿತು ನನಗೆ ಮಾಹಿತಿ ಕೊಟ್ಟಿದ್ದರು. ಸರ್ಕಾರದ ಧೋರಣೆ ವಿರೋಧಿಸಿ ನಾನು ಮೂರು ದಿನ ಮೌನ ಪ್ರತಿಭಟನೆ ಮಾಡುತ್ತೇನೆ. ಮಾಧ್ಯಮಗಳ ಮೇಲೆ ನನಗೆ ಯಾವುದೇ ಸಿಟ್ಟು ಇಲ್ಲ. ಮಾಧ್ಯಮಗಳೊಂದಿಗೆ ನಾನು ಮಾತನಾಡುವುದಿಲ್ಲ ಎಂದರು.

ರೈತರ ಹಿತಕ್ಕಾಗಿ, ಜನರಿಗಾಗಿ, ನೀರಿಗಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ನಿಲ್ಲಿಸಲು ಸರ್ಕಾರ ಷಡ್ಯಂತ್ರ ಮಾಡಿದೆ. ನನ್ನನ್ನು ಭೇಟಿಯಾಗಲು ಬಂದಿದ್ದ ಅಧಿಕಾರಿಗೆ ಕೊವಿಡ್ ಪಾಸಿಟಿವ್ ಇತ್ತು. ಈ ಮೂಲಕ ನನ್ನನ್ನು ಪ್ರಾಥಮಿಕ ಸಂಪರ್ಕಿತ ಎನ್ನುವುದು ಅವರ ಹುನ್ನಾರವಾಗಿತ್ತು. ಇಂತಹ ಬುದ್ಧಿ ಸಿಎಂ ಬೊಮ್ಮಾಯಿಗೆ ಇಲ್ಲ. ಆದರೆ ಇಂತಹವು ಆರೋಗ್ಯ ಸಚಿವ ಸುಧಾಕರ್​ಗೆ ಬರುತ್ತೆ ಎಂದು ಕಿಡಿಕಾರಿದರು.

ಈಗ ರಾಜ್ಯದಲ್ಲಿ ಬಂದಿರುವುದು ಬಿಜೆಪಿ ಕೊರೋನಾ ಸೋಂಕು ಎಂದು ಲೇವಡಿ ಮಾಡಿದ ಅವರು, ಕಮಿಷನ್ ಕಡಿಮೆಯಾಗಿದ್ದಕ್ಕೆ ಕೇಸ್ ಹೆಚ್ಚಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರದ ವಿರುದ್ಧ ವಾಗ್ದಾಳಿ
ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಸ್ವಕ್ಷೇತ್ರದಲ್ಲಿ ಸಾವಿರಾರು ಜನರನ್ನು ಸೇರಿಸಿ ಜಾತ್ರೆ ಮಾಡಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಆಗ ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಗೃಹ ಸಚಿವರು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಪಾಲ್ಗೊಂಡಿದ್ದ ಸಮಾರಂಭಗಳು ನಡೆದ ಊರುಗಳಲ್ಲಿ ಯಾವುದೇ ಕರ್ಫ್ಯೂ ಇರಲಿಲ್ಲವೇ? ಕನಕಪುರದಲ್ಲಿ ಮಾತ್ರ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೊವಿಡ್ ಪ್ರಕರಣಗಳ ಬಗ್ಗೆ ಸುಳ್ಳು ಅಂಕಿಅಂಶಗಳನ್ನು ಕೊಡುತ್ತಿದ್ದಾರೆ. ಇದರ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಾಳೆಯಿಂದ (ಜ.11) ಮೂರು ದಿನಗಳ ಕಾಲ ನನ್ನದು ಮೌನ ಮೆರವಣಿಗೆ. ಮಾಧ್ಯಮಗಳೊಂದಿಗೆ ನಮ್ಮ ಶಾಸಕರು, ಹಿರಿಯರು ಮಾತನಾಡುತ್ತಾರೆ. ನನ್ನನ್ನು ರಾಜಕೀಯವಾಗಿ ಸಾಯಿಸಲು ಹೊರಟಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ 30 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇಷ್ಟೇ ಜನರಿದ್ದ ಬಿಜೆಪಿ ನಾಯಕರಿದ್ದ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇದರ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

click me!