ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಮಾಡುವುದು ಸ್ವಾಭಾವಿಕ ಎಂದು ಕುಟುಕಿದ ಕಾರಜೋಳ
ಬೆಳಗಾವಿ(ನ.15): ಸಿದ್ದರಾಮಯ್ಯನವರಿಗೆ ಯಾವುದೇ ಕ್ಷೇತ್ರ ಸಿಗುವುದಿಲ್ಲ. ಕೋಲಾರ ಸೇರಿದಂತೆ ಅವರು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ನಡೆಸಿದರೂ ಸೋಲುವುದು ಖಚಿತ ಎಂದು ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಗಿ ನುಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕ್ಷೇತ್ರ ಸಿಗುವುದಿಲ್ಲ. ಕೋಲಾರದಿಂದ ಸ್ಪರ್ಧೆ ಮಾಡಿದರೂ ಅವರ ಸೋಲು ಖಚಿತ. ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್‌ಗೆ ಯಾವ ಪರಿಸ್ಥಿತಿ ಬಂದಿದೆ ಎಂದರೆ ಸಿದ್ದರಾಮಯ್ಯ ಎಲ್ಲೆ ಸ್ಪರ್ಧೆ ಮಾಡಿದರೂ ಗೆಲುವು ಸಾಧಿಸುವುದಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯನವರು ಕ್ಷೇತ್ರ ಬದಲಾವಣೆ ಮಾಡುವುದು ಸ್ವಾಭಾವಿಕ ಎಂದು ಕುಟುಕಿದರು.
ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಟಿಕೆಟ್ ಅರ್ಜಿಗೆ ಕಡೇ ಕ್ಷಣದ ಕಸರತ್ತು
ಇನ್ನು ದೇಶದಲ್ಲಿ ಕಾಂಗ್ರೆಸ್‌ಗೆ ಯಾವುದೇ ನೆಲೆ ಇಲ್ಲ. ಮನೆಗೆ ದೀಪ ಹಚ್ಚಲು ದಿಕ್ಕು ಇಲ್ಲದಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಕಾಂಗ್ರೆಸ್ ಮನಸ್ಥಿತಿಗೆ ಘಟಾನುಘಟಿ ನಾಯಕರು ಪಕ್ಷ ತೊರೆದಿದ್ದಾರೆ. ನೆಹರು, ಇಂದಿರಾ ಗಾಂಧಿ ನಂತರ ಕಾಂಗ್ರೆಸ್ ಬಗ್ಗೆ ಗಟ್ಟಿಯಾಗಿದ್ದ ಗುಲಾಂ ನಬಿ ಆಜಾದ್ ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗಿಂತ ಹೆಚ್ಚು ಬೇಕಾ? ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಬಿಟ್ಟು ಹೋಗಿದ್ದಾರೆ. ಹೀಗೆ ಇನ್ನೂ ಬಹಳಷ್ಟುಜನರು ಕಾಂಗ್ರೆಸ್ ಬಿಡಲು ಪಾಳೆ ಹಚ್ಚಲಿದ್ದಾರೆ. ಇನ್ನು ಕಾಂಗ್ರೆಸ್‌ನವರು ಮನಮೋಹನ್‌ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದರೆ ದಲಿತರಿಗೆ ಗೌರವ ಕೊಟ್ಟಂತೆ ಆಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ಅವಸಾನದ ಅವಧಿಯಲ್ಲಿ ಕೊಟ್ಟಿದ್ದಕ್ಕೆ ಏನೂ ಬೆಲೆ ಇಲ್ಲ ಎಂದು ಹೇಳಿದರು.
ಇನ್ನು ವಿವೇಕ್ ಯೋಜನೆಯಡಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 245 ಕೊಠಡಿಗಳು ಮಂಜೂರಾಗಿವೆ. ಇದಕ್ಕೆ .36 ಕೋಟಿ ಹಣ ಕೂಡ ಮಂಜೂರಾಗಿದೆ. ಈಗ ಪ್ರಾಥಮಿಕ ಶಾಲೆಗಳಿಗೆ ಎಲ್ಲೆಲ್ಲಿ ಕೊಠಡಿಗಳ ಅವಶ್ಯಕತೆಯಿದೆ. ಅವುಗಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡುತ್ತಿದ್ದೇವೆ. ಕೆಲವು ಕೊಠಡಿಗಳ ದುರಸ್ಥಿಗೂ ಹಣ ಕೊಡಲಾಗಿದೆ. ಇನ್ನು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 275 ಕೊಠಡಿಗಳು ಮಂಜೂರಾಗಿವೆ, ಇದಕ್ಕೆ . 39 ಕೋಟಿ ಹಣ ಮಂಜೂರಾಗಿದೆ. ಇವತ್ತಿನಿಂದ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ವಿವೇಕ ಯೋಜನೆಯಡಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಏಕಕಾಲಕ್ಕೆ ಚಾಲನೆ ಕೊಡುತ್ತಿದ್ದೇವೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂಬ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಸಚಿವರು ನಿರಾಕರಿಸಿದರು.