ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಸೇರಿದ ಕಾರನ್ನು ಚುನಾವಣಾ ವಿಚಕ್ಷಣ ದಳದ(ಪ್ಲೈಯಿಂಗ್ ಸ್ಕ್ವಾಡ್) ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಏ.07): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಸೇರಿದ ಕಾರನ್ನು ಚುನಾವಣಾ ವಿಚಕ್ಷಣ ದಳದ(ಪ್ಲೈಯಿಂಗ್ ಸ್ಕ್ವಾಡ್) ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ. ಜಯನಗರದ ವಾಜಪೇಯಿ ಬಸ್ ನಿಲ್ದಾಣದ ಬಳಿ ವಾಹನಗಳ ತಪಾಸಣೆ ಮಾಡುವಾಗ ಸೌಮ್ಯಾ ರೆಡ್ಡಿ ಅವರ ಇನೋವಾ ಕಾರು ಅಲ್ಲಿಗೆ ಬಂದಿದೆ. ಈ ವೇಳೆ ತಪಾಸಣೆ ಮಾಡಿದಾಗ 20 ಸೀರೆಗಳು, 2 ಪಂಚೆಗಳು, 13 ಶಾಲುಗಳು, 14 ಮೊಬೈಲ್‌ಗಳು, ಪ್ಲಾಸ್ಟಿಕ್ ಹಾರಗಳು, ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್‌ಲೆಟ್‌ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ.
ಕಾರು ತಪಾಸಣೆ ವೇಳೆ ಶಾಸಕಿ ಸೌಮ್ಯಾ ರೆಡ್ಡಿ ಅವರು ಕಾರಿನಲ್ಲಿ ಇರಲಿಲ್ಲ. ಚಾಲಕ ರಾಮಚಂದ್ರ ಅವರು ಕಾರಿನಲ್ಲಿ ತೆರಳುವಾಗ ವಿಚಕ್ಷಣ ದಳದ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಜಪ್ತಿ ಮಾಡಿದ ಕಾರನ್ನು ತಿಲಕನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಸೀರೆ, ಪಂಚೆ, ಮೊಬೈಲ್ ಹಂಚಲು ಸಾಗಿಸುತ್ತಿದ್ದ ಆರೋಪದಡಿ ದೂರು ನೀಡಲಾಗಿದೆ. ಈ ದೂರು ಆಧರಿಸಿ ಎನ್‌ಸಿಆರ್ ದಾಖಲಿಸಿರುವ ತಿಲಕನಗರ ಠಾಣೆ ಪೊಲೀಸರು, ಎಫ್‌ಐಆರ್ ದಾಖಲು ನ್ಯಾಯಾಲಯದ ಅನುಮತಿ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ: ಶಾಸಕ ಜಮೀರ್ ವಿರುದ್ಧದ ಲೋಕಾ ತನಿಖೆಗೆ ತಡೆ ಇಲ್ಲ
ನಿನ್ನೆ ಒಂದೇ ದಿನ 4 ಕೋಟಿ ಜಪ್ತಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ವಿವಿಧ ತನಿಖಾ ಸಂಸ್ಥೆಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಗುರುವಾರ 4 ಕೋಟಿ ರು.ಗಳಿಗಿಂತ ಅಧಿಕ ನಗದನ್ನು ಜಪ್ತಿ ಮಾಡಲಾಗಿದೆ. ಈ ಮೂಲಕ ಈವರೆಗೆ ಒಟ್ಟು 27.38 ಕೋಟಿ ರು. ನಗದನ್ನು ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಂತಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ವಿಧಾನಸಭೆ ಕ್ಷೇತ್ರದಲ್ಲಿ 1.50 ಕೋಟಿ ರು., ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಲ್ಲಿ 1.49 ಕೋಟಿ ರು., ಗದಗ ಕ್ಷೇತ್ರದಲ್ಲಿ 95 ಲಕ್ಷ ರು. ಮತ್ತು ನರಗುಂದ ಕ್ಷೇತ್ರದಲ್ಲಿ 50 ಲಕ್ಷ ರು. ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಅಬಕಾರಿ ಇಲಾಖೆಯು 1.88 ಕೋಟಿ ರು. ಮೌಲ್ಯದ 62826 ಲೀಟರ್ ಮದ್ಯ ವಶಪಡಿಸಿಕೊಂಡಿದೆ. ಧಾರವಾಡ ಕ್ಷೇತ್ರದಲ್ಲಿ 44.70 ಲಕ್ಷ ರು. ಮೌಲ್ಯದ 0.725 ಕೆಜಿ ಚಿನ್ನ ಮತ್ತು ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಲ್ಲಿ 34.16 ಲಕ್ಷ ರು. ಮೌಲ್ಯದ ಉಚಿತ ಕೊಡುಗೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ. ಮಾ.29ರಿಂದ ಈವರೆಗೆ ಆಯೋಗವು 27.38 ಕೋಟಿ ರು. ನಗದನ್ನು ವಶಪಡಿಸಿಕೊಂಡಿದೆ. ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು 26.38 ಕೋಟಿ ರು. ಮೌಲ್ಯದ 4,25,127 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಶೇ.15ಕ್ಕಿಂತ ಶುಲ್ಕ ಹೆಚ್ಚಿಸುವ ಖಾಸಗಿ ಶಾಲೆ ವಿರುದ್ಧ ಕ್ರಮ: ಸಂಘಟನೆಗಳ ನಿರ್ಧಾರ
ಅಬಕಾರಿ ಇಲಾಖೆಯು 792 ಗಂಭೀರ ಪ್ರಕರಣ ಮತ್ತು 494 ಮದ್ಯದ ಪರವಾನಗಿ ಉಲ್ಲಂಘಿಸಿದ ಪ್ರಕರಣಗಳು ಸೇರಿದಂತೆ ಒಟ್ಟು 2,090 ಪ್ರಕರಣಗಳನ್ನು ದಾಖಲಿಸಿದೆ. 509 ವಿವಿಧ ಮಾದರಿಯ ವಾಹನಗಳನ್ನು ಜಪ್ತಿ ಮಾಡಿದೆ. ವಿಚಕ್ಷಣ ದಳ, ಪೊಲೀಸರು ಸೇರಿ 9.87 ಕೋಟಿ ರು. ಮೌಲ್ಯದ 25.24 ಕೆಜಿ ಚಿನ್ನ, 92.90 ಲಕ್ಷ ರು. ಮೌಲ್ಯದ 134.42 ಕೆಜಿ. ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಡಿ 627 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.