* ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ
* ಪ್ರಿಯಾಂಕ್ ಖರ್ಗೆಗೆ ಮೂರನೇ ನೋಟಿಸ್ ನೀಡಿದ ಸಿಐಡಿ
* ರಾಜ್ಯ ಸರ್ಕಾರಕ್ಕೆ ತಾಕತ್ತಿನ ಸವಾಲು ಹಾಕಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು, (ಮೇ.05): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ 3ನೇ ನೋಟಿಸ್ ನೀಡಿದೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ಪಿಂಗ್ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸಿಐಡಿ ನೋಟಿಸ್ ನೀಡಿದೆ.
ಈ ನೋಟಿಸ್ ಸ್ವೀಕರಿಸಿದ ಎರಡು ದಿನದೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗಿ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಕುರಿತು ಹೇಳಿಕೆ ದಾಖಲಿಸುವಂತೆ ಪ್ರಿಯಾಂಕ ಖರ್ಗೆ ಅವರಿಗೆ ಡಿವೈಎಸ್ಪಿ ನರಸಿಂಹಮೂರ್ತಿ ಸೂಚಿಸಿದ್ದಾರೆ. ಎರಡು ನೋಟಿಸ್ ನೀಡಿದ್ರು ಪ್ರಿಯಾಂಕ್ ಖರ್ಗೆ ವಿಚಾರಣೆಗೆ ಹೋಗಿರಲಿಲ್ಲ. ಇದೀಗ ಮೂರನೇ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಸರ್ಕಾರಕ್ಕೆ ಒಂದು ನೇರ ಸವಾಲು ಹಾಕಿದ್ದಾರೆ.
PSI Recruitment Scam: ಧೈರ್ಯವಿದ್ರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಹಾಜರಾಗಲಿ: ಜಗದೀಶ್ ಶೆಟ್ಟರ್
ಹೌದು....ಸಾಮಾಜಿ ಜಾಲತಾಣಗಳ ಮೂಲಕ ಸರ್ಕಾರಕ್ಕೆ ತಾಕತ್ತಿನ ಸವಾಲು ಹಾಕಿರುವ ಅವರು, 58 ಸಾವಿರ ಯುವಕರ ಭವಿಷ್ಯಕ್ಕಾಗಿ ಪ್ರತಿದಿನ ಸಿಐಡಿಗೆ ಉತ್ತರಿಸಲು ನಾನು ಸಿದ್ಧ! ಸರ್ಕಾರದ ಒತ್ತಡ ಮೆಟ್ಟಿ ನಿಲ್ಲಲು ನಾನು ಸಿದ್ಧ! ತಪ್ಪಿತಸ್ಥರ ವಿರುದ್ಧ ಸಾಕ್ಷಿ ಒದಗಿಸಲು ನಾನು ಸಿದ್ಧ!
ಆದರೆ, ಕೋಟಿ ಕೋಟಿ ಲಂಚ ಹೊಡೆದ ಆರೋಪಿಗಳನ್ನು ಬಂಧಿಸುವ ತಾಕತ್ ಈ ಸರ್ಕಾರಕ್ಕೆ ಇದಿಯಾ? ಎಂದು ಪ್ರಶ್ನೆ ಮಾಡುವ ಮೂಲಕ ಸವಾಲು ಹಾಕಿದ್ದಾರೆ.
ಈ ಹಿಂದೆ ಕೂಡ ಎರಡು ಬಾರಿ ಸಿಐಡಿ ಪ್ರಿಯಾಂಕ್ ಖರ್ಗೆಯವರಿಗೆ ನೋಟಿಸ್ ಜಾರಿಗೊಳಿಸಿತ್ತು. ನೋಟಿಸ್ ಸ್ವೀಕರಿಸಿದ್ದರೂ ವಿಚಾರಣೆಗೆ ಹಾಜರಾಗಲು ಖರ್ಗೆ ನಿರಾಕರಿಸಿದ್ದರು. ಇದೀಗ ಮತ್ತೆ ಸಿಐಡಿ ನೋಟಿಸ್ ನೀಡಿದ್ದು, ಈಗಲಾದರೂ ವಿಚಾರಣೆಗೆ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹಾಜರಾಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪ್ರಿಯಾಂಕ್ ಖರ್ಗೆ ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 25ಕ್ಕ್ಕೆ ಹಾಜರಾಗಿ ಸಾಕ್ಷಿಗಳನ್ನು ಒದಗಿಸಿ ಎಂದು ಏಪ್ರಿಲ್ 24ರಂದು ಸಿಐಡಿ ನೋಟಿಸ್ ನೀಡಿತ್ತು. ಆದರೆ, ಪ್ರಿಯಾಂಕ್ ಖರ್ಗೆ ಸಿಐಡಿ ಮುಂದೆ ಹಾಜರಾಗದೇ ಏಪ್ರಿಲ್ 28ರಂದು 4 ಪುಟಗಳ ದೀರ್ಘ ಲಿಖಿತ ಉತ್ತರವನ್ನು ನೀಡಿದ್ದರು.
ಈ ಹಿನ್ನೆಲೆ ಮತ್ತೆ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿರುವ ಸಿಐಡಿ, ಈ ಹಿಂದೆ ಸಲ್ಲಿಸಿರುವ ಉತ್ತರವನ್ನು ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡುಬಂದಿವೆ. ಸಾರ್ವಜನಿಕ ಜಾಲತಾಣಗಳಲ್ಲಿ ಎಷ್ಟೋ ಅನಗತ್ಯ ಹಾಗೂ ನೈಜತೆಯಿಲ್ಲದ ಮಾಹಿತಿಗಳು ಹರಿದಾಡುತ್ತಿವೆ. ಅವುಗಳನ್ನು ತನಿಖೆಯಲ್ಲಿ ಸಾಕ್ಷ್ಯವನ್ನಾಗಿಸಿ ಅಳವಡಿಸಿಕೊಳ್ಳಲು ಬರುವುದಿಲ್ಲ ಎಂದು ಹೇಳಿದೆ.
ಗೌರವಾನ್ವಿತ ವಿಧಾನಸಭಾ ಸದಸ್ಯರಾದ ಸುದ್ದಿಗೋಷ್ಠಿಯಲ್ಲಿ ಆಡಿಯೋ ಕ್ಲಿಪ್ಪಿಂಗ್ ಅನ್ನು ಹಾಜರುಪಡಿಸಿ, ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇನ್ನು ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದ್ದೀರಿ. ಅದನ್ನು ಗಮನಿಸಿದ ಬಳಿಕ ಮಾಧ್ಯಮದವರ ಮುಂದೆ ಆಡಿಯೋ ಕ್ಲಿಪ್ಪಿಂಗ್ ಅನ್ನು ಹಾಜರುಪಡಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿರುತ್ತೀರಿ ಎಂದು ಭಾವಿಸಿ ನೋಟಿಸ್ ನೀಡಲಾಗಿತ್ತು. ಆದರೆ, ನೀವು ಸಾಕ್ಷಿಗಳನ್ನು ಒದಗಿಸಿಲ್ಲ ಎಂದು ಸಿಐಡಿ ತನ್ನ ಮತ್ತೊಂದು ನೋಟಿಸ್‌ನಲ್ಲಿ ತಿಳಿಸಿದೆ.