
ಅಹಮ್ಮದಾಬಾದ್(ನ.09): ಬಿಜೆಪಿ ಭದ್ರಕೋಟೆ ಗುಜರಾತ್ ಛಿದ್ರಗೊಳಿಸಲು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ ಭಾರಿ ಯತ್ನಿಸುತ್ತಿದೆ. ಇತ್ತ ಬಿಜೆಪಿ ಕೋಟೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಹೀಗಾಗಿ ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಖುದ್ದು ನರೇಂದ್ರ ಮೋದಿ ಈಗಾಗಲೇ ಗುಜರಾತ್‌ನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಇದು ಬಿಜೆಪಿ ಪಾಳಯದ ಆತ್ಮಿವಿಶ್ವಾಸ ಹೆಚ್ಚಿಸಿದೆ. ಆದರೆ ಭಾರಿ ಸಮಾವೇಶಕ್ಕೆ ತಯಾರಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಚುನಾವಣೆ ಸಮೀಪದಲ್ಲೇ ಇಬ್ಬರು ನಾಯಕರು ಪಕ್ಷ ತೊರೆದಿದ್ದಾರೆ. ಇಬ್ಬರು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ.
ಮಂಗಳವಾರ ಕಾಂಗ್ರೆಸ್ ಹಿರಿಯ ನಾಯಕ ಮೊಹನ್ ಸಿನ್ಹ ರಥವಾ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಇಂದು(ಬುಧವಾರ) ಕಾಂಗ್ರೆಸ್ ಶಾಸಕ ಭಗವಾನ್‌ಬಾಯಿ ಬರದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಲಾಲ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕನಾಗಿರುವ ಬರದ್ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬರದ್ ಬಿಜೆಪಿ ಸೇರಿಕೊಂಡಿದ್ದಾರೆ.
ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ
ಗುಜರಾತ್‌ನ ಒಬಿಸಿ ಸಮುದಾಯವಾದ ಅಹಿರ್ ಸಮುದಾಯದ ನಾಯಕನಾಗಿರುವ ಬರದ್, ತಲಾಲ್ ಕ್ಷೇತ್ರದಲ್ಲಿ ಪ್ರಬಲ ನಾಯಕನಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಲಾಲ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಇದೀಗ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಅದೇ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಲಿದ್ದಾರೆ.
ಮಂಗಳವಾರ ಮೊಹನ್ ಸಿನ್ಹ ರಾಥವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರು. ಕಾಂಗ್ರೆಸ್ ಪಕ್ಷದಿಂದ 11 ಬಾರಿ ಗೆಲುವು ಸಾಧಿಸಿ ಶಾಸಕಾಗಿರುವ ಮೊಹನ್ ಸಿನ್ಹ ರಾಜೀನಾಮೆ ಬೆನ್ನಲ್ಲೇ, ಇದೀಗ ಬರದ್ ಕೂಡ ಬಿಜೆಪಿ ಸೇರಿಕೊಂಡಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆಡಳಿತ ಪಕ್ಷದ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತನಾಗಿಿ ಬಿಜೆಪಿ ಸೇರಿಕೊಂಡಿದ್ದೇನೆ ಎಂದು ಮೊಹನ್ ಸಿನ್ಹ ಹೇಳಿದ್ದರು.
ಗುಜರಾತ್ ಚುನಾವಣೆ: ಒಂದೇ ಕ್ಷೇತ್ರದಿಂದ ಕಣಕ್ಕಿಳಿದ ರವೀಂದ್ರ ಜಡೇಜಾ ಪತ್ನಿ, ಸೋದರಿ
ಗುಜರಾತ್: ಹಿರಿಯ ಬಿಜೆಪಿಗ ವ್ಯಾಸ್ ರಾಜೀನಾಮೆ
ಚುನಾವಣೆ ಸಮೀಪದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಜಯನಾರಾಯಣ್ ವ್ಯಾಸ್ (75), ಆಡಳಿತಾರೂಢ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಈ ವೇಳೆ ತಮ್ಮ ಮುಂದಿನ ನಡೆ ಬಗ್ಗೆ ಯಾವುದೇ ಸ್ಪಷ್ಟಮಾಹಿತಿ ನೀಡದೇ ಇದ್ದರೂ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ‘ರಾಜ್ಯದಲ್ಲಿ ಬಿಜೆಪಿ ಕಟ್ಟಲು ಸಹಾಯ ಮಾಡಿದ್ದ ವ್ಯಾಸ್‌ರನ್ನು ಪಕ್ಷ ಕಡೆಗಣಿಸುತ್ತಿದೆ’ ಎಂಬ ಮಾತು ಇತ್ತೀಚೆಗೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅವರು ರಾಜೀನಾಮೆ ನೀಡಿದ್ದಾರೆ. ವ್ಯಾಸ್ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಗುಜರಾತ್‌ನ ಕಾಂಗ್ರೆಸ್ ಉಸ್ತುವಾರಿ ರಘು ಶರ್ಮಾ ಅವರನ್ನು ಭೇಟಿ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಸ್ ಮುಂದಿನ ನಡೆ ತೀವ್ರ ಕುತೂಹಲ ಸೃಷ್ಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.