ದಿಲ್ಲಿ ತಲುಪಿದ ಕರ್ನಾಟಕದ ಮತಗಳವು ಹೋರಾಟ ಕಿಚ್ಚು- ಆಯೋಗದ ವಿರುದ್ಧ ವಿಪಕ್ಷ ಪ್ರತಿಭಟನೆ

Kannadaprabha News   | Kannada Prabha
Published : Aug 12, 2025, 05:11 AM IST
Rahul Gandhi Detained During INDIA Bloc Protest Over Voter List Revision

ಸಾರಾಂಶ

ಮತಗಳವಿನ ಆರೋಪದ ಕುರಿತು ಸಾಕ್ಷ್ಯ ನೀಡುವಂತೆ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದ್ದಕ್ಕೆ ರಾಜ್ಯದ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಭಾರೀ ಮತಗಳವು ನಡೆದಿತ್ತು ಎಂದು ಆರೋಪಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್‌, ಇದೀಗ ಈ ಹೋರಾಟದ ಕಿಚ್ಚನ್ನು ದೆಹಲಿಗೆ ಕೊಂಡೊಯ್ದಿದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ಸೋಮವಾರ ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ.

ಆದರೆ ಸಂಸತ್ತಿನಿಂದ ಆಯೋಗದ ಕಚೇರಿಗೆ ಹೋಗುವ ವೇಳೆ ಮಾರ್ಗಮಧ್ಯದಲ್ಲಿಯೇ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಪ್ರತಿಭಟನಾಕಾರರನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಸೀರೆ ಉಟ್ಟ ಹಲವು ಮಹಿಳಾ ನಾಯಕರು ಪೊಲೀಸ್ ಬ್ಯಾರಿಕೇಡ್‌ ಹತ್ತಿ ಮುಂದೆ ಸಾಗಲು ಯತ್ನಿಸಿದ ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದ ಹೈಡ್ರಾಮಾದ ಘಟನೆಗಳಿಗೆ ಪ್ರತಿಭಟನೆ ಸಾಕ್ಷಿಯಾಗಿದೆ. ಹೀಗೆ ವಶಕ್ಕೆ ಪಡೆದ ನಾಯಕರನ್ನು 3 ಗಂಟೆಗಳ ಬಳಿಕ ಬಿಡುಗಡೆ ಮಾಡಲಾಗಿದೆ.

ಪ್ರತಿಭಟನೆ : ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇಂಡಿಯಾ ಮಿತ್ರಪಕ್ಷಗಳ 30ಕ್ಕೂ ಅಧಿಕ ಸಂಸದರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಂಸತ್ತಿನಿಂದ ಆರಂಭಿಸಿ ಚುನಾವಣಾ ಆಯೋಗದ ಕಚೇರಿವರೆಗೆ ಕೆಲವು ಕಿ.ಮೀ. ಉದ್ದಕ್ಕೂ ಮೆರವಣಿಗೆ ನಡೆಯಿತು. ಆದರೆ ಮಾರ್ಗಮಧ್ಯದಲ್ಲಿಯೇ ಪೊಲೀಸರು ಅವರನ್ನು ತಡೆದಿದ್ದರಿಂದ ಹೈಡ್ರಾಮಾ ಸೃಷ್ಟಿಯಾಯಿತು. ಈ ನಡುವೆ ತಮ್ಮನ್ನು ವಶಕ್ಕೆ ಪಡೆದ ಕ್ರಮದ ಬಗ್ಗೆ ಇಂಡಿಯಾ ಕೂಟದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಆಯೋಗಕ್ಕೆ ದೂರು ನೀಡಲು ಹೊರಟ ನಮ್ಮನ್ನು ದೂರು ನೀಡದಂತೆ ತಡೆಯಲಾಗಿದೆ. ಚುನಾವನಾ ಆಯೋಗವನ್ನು ಚೋರಿ ಆಯೋಗವನ್ನಾಗಿ ಮಾಡಲು ನಾವು ಬಿಡುವುದಿಲ್ಲ’ ಎಂದು ಗುಡುಗಿದರು.

ಬ್ಯಾರಿಕೇಡ್‌ ಹಾರಲು ಯತ್ನ:

ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಕಾರರು ಮುಂದೆ ಸಾಗದಂತೆ ತಡೆಯಲು ಯತ್ನಿಸಿದರು. ಆದರೆ ಹಲವು ಸಂಸದರು ರಸ್ತೆ ಮೇಲೆಯೇ ಕುಳಿತು ಘೋಷಣೆ ಕೂಗತೊಡಗಿದರು. ಸೀರೆಯುಟ್ಟು ಬಂದಿದ್ದ ಸಂಸದೆಯರಾದ ಮಹುವಾ ಮೊಯಿತ್ರಾ, ಸಂಜನಾ ಜಾಟವ್ ಹಾಗೂ ಜ್ಯೋತಿಮಣಿ ಮುಂತಾದವರು ಬ್ಯಾರಿಕೇಡ್‌ಗಳನ್ನು ಹತ್ತಿ ಪೊಲೀಸರಿಗೆ ಸವಾಲೆಸೆದರು. ಈ ನಡುವೆ ಮಹುವಾ ಹಾಗೂ ಟಿಎಂಸಿ ಸಂಸದೆ ಮಿತಾಲಿ ಬೇಗ್‌ ಮೂರ್ಛೆ ಹೋದರು. ಅವರು ಚೇತರಿಸಿಕೊಳ್ಳಲು ರಾಹುಲ್‌ ಗಾಂಧಿ ಸಹಾಯ ಮಾಡಿದರು.ಆ ಬಳಿಕ ಖರ್ಗೆ, ರಾಹುಲ್‌, ಪ್ರಿಯಾಂಕಾ ಗಾಂಧಿ ಸೇರಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಸಂಸತ್‌ ಮಾರ್ಗದ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. 3 ಗಂಟೆಗಳ ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

ಸಂವಿಧಾನದ ಉಳಿವಿಗೆ ಹೋರಾಟಈ ಹೋರಾಟ ರಾಜಕೀಯವಾದದ್ದಲ್ಲ. ಇದು ಸಂವಿಧಾನವನ್ನು ರಕ್ಷಿಸುವ ಗುರಿ ಹೊಂದಿದೆ. ಈ ಹೋರಾಟ ‘ಒಬ್ಬ ವ್ಯಕ್ತಿ, ಒಂದು ಮತ’ಕ್ಕಾಗಿ ನಡೆಯುತ್ತಿದೆ. ನಾವು ಸ್ವಚ್ಛ ಮತ್ತು ಶುದ್ಧ ಮತದಾರರ ಪಟ್ಟಿಯನ್ನು ಬಯಸುತ್ತೇವೆ.-ರಾಹುಲ್ ಗಾಂಧಿ, ಲೋಕಸಭೆ ವಿಪಕ್ಷ ನಾಯಕಪ್ರಜಾಪ್ರಭುತ್ವ ಉಳಿಸಲು ಪ್ರತಿಭಟನೆ ಮತಚೋರಿ ಮತ್ತು ಬಿಹಾರ ಮತಪಟ್ಟಿ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಯು ಜನರ ಮತದಾನದ ಹಕ್ಕನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟವಾಗಿದೆ. ಇಂಡಿಯಾ ಒಕ್ಕೂಟವು ಈ ಬಿಜೆಪಿಯ ಪಿತೂರಿಯನ್ನು ಬಹಿರಂಗಪಡಿಸುತ್ತದೆ.

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ

ರಾಗಾಗೆ ನೋಟಿಸ್‌ ವಿರುದ್ಧ ಕೈ ಆಕ್ಷೇಪ ಆಯೋಗದ ಕ್ರಮಕ್ಕೆ ತೀವ್ರ ಆಕ್ಷೇಪ

ಬೆಂಗಳೂರು: ಮತಗಳವಿನ ಆರೋಪದ ಕುರಿತು ಸಾಕ್ಷ್ಯ ನೀಡುವಂತೆ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದ್ದಕ್ಕೆ ರಾಜ್ಯದ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಲೋಪಗಳ ಬಗ್ಗೆ ಜನಪ್ರತಿನಿಧಿಗಳಾಗಿ ನಾವು ಮಾಡಿರುವ ಆರೋಪ ಸಂಬಂಧ ತಮ್ಮ ಬಳಿಯ ದಾಖಲೆ ಪರಿಶೀಲಿಸಿ ತಪ್ಪು ಬಗೆಹರಿಸುವ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಜವಾಬ್ದಾರಿ ಚುಣಾವಣಾ ಆಯೋಗದ್ದು. ಅದನ್ನು ಬಿಟ್ಟು ನಮ್ಮನ್ನೇ ದಾಖಲೆ ಕೇಳುವುದಲ್ಲ. ದಾಖಲೆ ಕೊಡಲು ನಾವು ಶಾಲಾ ಮಕ್ಕಳಲ್ಲ. ನೋಟಿಸ್‌ಗೆಲ್ಲಾ ನಾವು ಹೆದರುವುದಿಲ್ಲ’ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!