ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡಲು ಪ್ರಮುಖ ಕಾರಣವೇನು..?

By Kannadaprabha NewsFirst Published Jul 25, 2021, 9:38 AM IST
Highlights
  • ಬಿಜೆಪಿ ಸರ್ಕಾರ ಜನರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲ
  • ಮುಖ್ಯಮಂತ್ರಿ ಬದಲಾವಣೆ ವಿಚಾರ ಇದೀಗ ಸದ್ದು ಮಾಡುತ್ತಿದೆ
  • ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಕ್ರೋಶ 

 ತುಮಕೂರು (ಜು.25):  ಬಿಜೆಪಿ ಸರ್ಕಾರ ಜನರ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದರಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರ ಇದೀಗ ಸದ್ದು ಮಾಡುತ್ತಿದೆ. ಈ ನಾಯಕತ್ವ ಬದಲಾವಣೆಯೂ ಬಿಜೆಪಿಯವರ ಮತ್ತೊಂದು ನಾಟಕದ ಮುಖವಾಡ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಪಂಚ ಜಿಲ್ಲೆಗಳ ವಿಭಾಗೀಯ ಮಟ್ಟದ ಕಾಂಗ್ರೆಸ್‌ ನಾಯಕರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ ಸರ್ಕಾರ. ಇದು ಜನರಿಂದ ಆಯ್ಕೆಯಾದ ಸರ್ಕಾರವಲ್ಲ ಎಂದು ಹರಿಹಾಯ್ದರು. ರಾಜ್ಯ ಬಿಜೆಪಿ ಸರ್ಕಾರ ಹೈಜಾಕ್‌ ಸರ್ಕಾರ. ಪ್ಯಾರಾಚೂಟ್‌ ಸರ್ಕಾರ. ಈ ಸರ್ಕಾರಕ್ಕೆ ಜನರ ಹಿತಕಾಪಾಡುವುದು ಮುಖ್ಯವಲ್ಲ. ಅಧಿಕಾರವೇ ಮುಖ್ಯವಾಗಿದೆ ಎಂದು ಛೇಡಿಸಿದರು.

ಮುಂದಿನ ಸಿಎಂ ಹೇಳಿಕೆ ನೀಡದಂತೆ ಜಮೀರ್‌ಗೆ, ಸುರ್ಜೇವಾಲಾ ವಾರ್ನ್..!

ಕೊರೋನಾ ಸಂದರ್ಭದಲ್ಲಿ ಜನತೆ ಸಂಕಷ್ಟಅನುಭವಿಸುತ್ತಿದ್ದರೂ ಬಿಜೆಪಿ ನಾಯಕರಿಗೆ ಜನರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ ಇಲ್ಲ. ನಾಯಕತ್ವ ಬದಲಾವಣೆಯೇ ಮುಖ್ಯವಾಗಿದೆ. ಈ ನಾಯಕತ್ವ ಬದಲಾವಣೆಯೂ ಬಿಜೆಪಿಯವರ ಮತ್ತೊಂದು ನಾಟಕದ ಮುಖವಾಡವಾಗಿದೆ ಎಂದು ದೂರಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜನರಿಂದ ಆಯ್ಕೆಯಾಗಿಲ್ಲ. ಶಾಸಕರನ್ನು ಹೈಜಾಕ್‌ ಮಾಡಿ ಅಧಿಕಾರಕ್ಕೆ ಬಂದಿದೆ. ಇಂತಹ ಸರ್ಕಾರಕ್ಕೆ ಜನರ ನಾಡಿ ಮಿಡಿತ ಎಲ್ಲಿ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಇದ್ದರು.

ಸಂಕಲ್ಪ ಯಾತ್ರೆಗೆ ಚಿಂತನೆ: ಡಿಕೆಶಿ

ತುಮಕೂರು: ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಬಲವರ್ಧನೆಗಾಗಿ ಬ್ಲಾಕ್‌ ಕಾಂಗ್ರೆಸ್‌ ಮಟ್ಟದಿಂದ ಸಂಕಲ್ಪ ಯಾತ್ರೆ ನಡೆಸುವ ಚಿಂತನೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯದಲ್ಲೇ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ಘೋಷಣೆಯಾಗಲಿವೆ. ಈ ಚುನಾವಣೆಗೆ ಈಗಿನಿಂದಲೇ ಚಿಂತನಾ-ಮಂಥನಾ ನಡೆಸಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಒಬ್ಬ ಭ್ರಷ್ಟಹೋಗಿ ಇನ್ನೊಬ್ಬ ಭ್ರಷ್ಟಸಿಎಂ ಬರ್ತಾರೆ: ಸಿದ್ದು

ತುಮಕೂರು: ಒಬ್ಬ ಭ್ರಷ್ಟಮುಖ್ಯಮಂತ್ರಿ ಬದಲಾಗಿ ಮತ್ತೊಬ್ಬ ಭ್ರಷ್ಟಮುಖ್ಯಮಂತ್ರಿ ಬರಲಿದ್ದಾರೆ. ಈಗಿರುವ ಮುಖ್ಯಮಂತ್ರಿ ಅಧಿಕಾರದಿಂದ ಕೆಳಗಿಳಿದರೆ ಆ ಜಾಗಕ್ಕೆ ಮತ್ತೊಬ್ಬ ಭ್ರಷ್ಟಮುಖ್ಯಮಂತ್ರಿ ಬರಲಿದ್ದಾರೆ. ಅದರಲ್ಲಿ ವಿಶೇಷ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾವೇಕೆ ನಾವೇಕೆ ತಲೆಕೆಡಿಸಿಕೊಳ್ಳೋಣ? ನಮ್ಮದೇನಿದ್ದರೂ ಬಿಜೆಪಿಯವರು ಅಧಿಕಾರದಿಂದ ತೊಲಗಬೇಕು ಎಂಬುದಷ್ಟೆಉದ್ದೇಶ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೂ ನೆರೆ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ಪಕ್ಷದವರಿಗೆ ಜನರ ಹಿತಾಸಕ್ತಿಗಿಂತ ಅಧಿಕಾರವೇ ಮುಖ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

click me!