ಯಾವ್ ಕಾರಣಕ್ಕೂ ಹೀಗ್ ಮಾಡ್ಬೇಡಿ : BSY ಗೆ ಸಿದ್ದರಾಮಯ್ಯ ಪತ್ರ

By Kannadaprabha NewsFirst Published Dec 3, 2020, 9:20 AM IST
Highlights

ಯಾವ್ ಕಾರಣಕ್ಕೂ ಹೀಗೆ ಮಾಡ್ಬೇಡಿ ಎಂದು ಮಾಜಿ ಸಿಎಂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. 

ಬೆಂಗಳೂರು (ಡಿ.03):  ಇಂದಿರಾ ಕ್ಯಾಂಟೀನ್‌ ಸ್ಥಗಿತಗೊಳಿಸಲು ಸರ್ಕಾರ ವ್ಯವಸ್ಥಿತವಾಗಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚದೆ, ಕೂಡಲೇ ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಹಸಿದವರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಲು ಮುಖ್ಯಮಂತ್ರಿಗಳೇ ಖುದ್ದಾಗಿ ಆಸಕ್ತಿ ವಹಿಸಿ ಇಂದಿರಾ ಕ್ಯಾಂಟೀನ್‌ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಮಿಕರು, ಬಡವರು ಮುಂತಾದವರ ಹಸಿವನ್ನು ನೀಗಿಸಲು ಬಿಬಿಎಂಪಿ ಹಾಗೂ ರಾಜ್ಯಾದ್ಯಂತ ಎಲ್ಲ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ವ್ಯವಸ್ಥಿತರವಾಗಿ ಮುಚ್ಚಲು ಹುನ್ನಾರ ನಡೆಸುತ್ತಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ ಬಿಡುಗಡೆ ಮಾಡಬೇಕಾದ ಹಣವನ್ನು ನಿಗದಿತವಾಗಿ ಬಿಡುಗಡೆ ಮಾಡದೇ ಸತಾಯಿಸಲಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಕ್ಯಾಂಟೀನ್‌ಗಳಿಗೆ 28 ಕೋಟಿ ರು. ಬಿಡುಗಡೆ ಮಾಡದೆ ಕಳೆದ ಆರು ತಿಂಗಳಿಂದ ಬಾಕಿ ಉಳಿಸಿಕೊಂಡಿದೆ.

ಮುಖ್ಯಮಂತ್ರಿಗಳೇ ಗಮನಿಸಿ; ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಿ ..

198 ಕ್ಯಾಂಟೀನ್‌ಗಳಿಗೆ ನೀರಿನ ಸಂಪರ್ಕ ಮತ್ತು ಸ್ಯಾನಿಟರಿ ಲೈನ್‌ನ್ನು ಕೂಡ ಜಲಮಂಡಳಿ ಕಡಿತಗೊಳಿಸಿದೆ. ಅಲ್ಲದೆ 12 ಅಡುಗೆ ಮನೆಗಳಿಗೂ ನೀರಿನ ಸಂಪರ್ಕ ನಿಲ್ಲಿಸಲಾಗಿದೆ. ಈ ರೀತಿಯ ಹಲವು ಹುನ್ನಾರಗಳನ್ನು ನಡೆಸುವ ಮೂಲಕ ಬಿಜೆಪಿಯು ಹಸಿದವರ, ಬಡವರ, ದೀನರ ಪರವಾಗಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಇತ್ತೀಚೆಗೆ ಸರ್ಕಾರ ಹಲವು ದುಂದುವೆಚ್ಚ, ಅನಗತ್ಯ ಯೋಜನೆ ಕೈಗೊಳ್ಳುತ್ತಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ನೀಡಬೇಕೆಂದು ಪತ್ರ ಬರೆದಿದ್ದರೂ ಹಸಿದವರ ಹೊಟ್ಟೆತುಂಬಿಸಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

click me!