* ಕಲಬುರಗಿ ಮಹಾನಗರ ಪಾಲಿಕೆ ಎಲೆಕ್ಷನ್ ರಿಸಲ್ಟ್
* ಬಿಜೆಪಿಗೆ ಶಾಪವಾಯ್ತಾ ಶುಕ್ರವಾರದ ಮತದಾನ?
* ಹೀಗೊಂದು ಚರ್ಚೆ ಹುಟ್ಟುಹಾಕಿದ ಬಿಜೆಪಿ ನಾಯಕ
ಕಲಬುರಗಿ, (ಸೆ.06): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇಂದು (ಸೆ.06) ಪ್ರಕಟವಾಗಿದೆ. ಆದ್ರೆ, ಮತದಾನ ಶುಕ್ರವಾರ ನಡೆದಿದ್ದರಿಂದ ಬಿಜೆಪಿಗೆ ಶಾಪವಾಯ್ತಾ ಎನ್ನುವ ಚರ್ಚೆಗಳು ಶುರುವಾಗಿವೆ.
ಹೌದು....ಹೀಗೊಂದು ಚರ್ಚೆಯನ್ನು ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ ಬಿಜೆಪಿ ಉಸ್ತುವಾರಿ, ವಿಧಾನಪರಿಷತ್ ಸದಸ್ಯ ರವಿ ಕುಮಾರ್ ಹುಟ್ಟುಹಾಕಿದ್ದಾರೆ.
undefined
ಈ ಬಗ್ಗೆ ಇಂದು (ಸೆ.07) ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರವಿಕುಮಾರ್, ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತವಿಲ್ಲ. ಅಧಿಕಾರ ಹಿಡಿಯಲು ಜೆಡಿಎಸ್ ಸಹಕಾರ ಕೇಳುತ್ತಿದ್ದೇವೆ. ಶುಕ್ರವಾರ ಮತದಾನವಾಗಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಬೇರೆ ದಿನ ಮತದಾನವಾಗಿದ್ದರೆ ಬಿಜೆಪಿ ಇನ್ನೂ 4- 5 ಸ್ಥಾನ ಗೆಲ್ಲುತ್ತಿತ್ತು ಎಂದು ಹೇಳಿದರು.
ಕಲಬುರಗಿ ಅತಂತ್ರ : 4 ಸ್ಥಾನದಲ್ಲಿ ಗೆದ್ದ ಜೆಡಿಎಸ್ ಕಿಂಗ್ ಮೇಕರ್
ಶುಕ್ರವಾರ, ಶ್ರಾವಣದ ಕೊನೆಯ ಶುಕ್ರವಾರವಾಗಿತ್ತು. ಹೀಗಾಗಿ ಜನರು ಪೂಜೆಯಲ್ಲಿಯೇ ಹೆಚ್ಚು ತೊಡಗಿಕೊಂಡಿದ್ದರು. ಮನೆಯಲ್ಲಿಯೇ ಪೂಜೆಯಲ್ಲಿ ಹೆಚ್ಚು ನಿರತರಾಗಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕಿಲ್ಲ. ಹೀಗಾಗಿ ಈ ಬಾರಿ ಕೇವಲ 49.92 ರಷ್ಟ ಮಾತ್ರ ಮತದಾನವಾಗಿದೆ. ಒಂದು ವೇಳೆ ಇನ್ನು ಶೇಕಡಾ ಎರಡರಿಂದ ಮೂರರಷ್ಟು ಮತದಾನವಾಗಿದ್ದರೆ, ಬಿಜೆಪಿ ಇನ್ನು ಕೆಲ ಸ್ಥಾನಗಳನ್ನು ಗೆಲ್ಲುತ್ತಿತ್ತು ಎನ್ನುವುದು ಬಿಜೆಪಿ ನಾಯಕರ ಮಾತು.
ಇನ್ನು ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನ, ಬಿಜೆಪಿ 23 ಸ್ಥಾನ, ಜೆಡಿಎಸ್ 4 ಸ್ಥಾನದಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಕೇವಲ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ವಿನಃ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಸಿಕ್ಕಿಲ್ಲ. ಆದ್ರೆ, ಬಿಜೆಪಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದ್ದು, ಬಿಜೆಪಿ ನಾಯಕರಲ್ಲಿ ಸಾರ್ಥಕ ಮನೋಭಾವ ಇದೆ. ಇನ್ನು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಲು ಬಿಜೆಪಿ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳವು ತಂತ್ರರೂಪಿಸುತ್ತಿದೆ. ಕಾಂಗ್ರೆಸ್ ಸಹ ಜೆಡಿಎಸ್ ಸಹಕಾರ ಕೇಳುತ್ತಿದೆ.
ಒಟ್ಟಿನಲ್ಲಿ ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಹಿಂದುಳಿದ ವರ್ಗ (ಬ) ಮೀಸಲಾತಿ ಇದ್ದು, ಯಾವ ಪಕ್ಷ ಅಧಿಕಾರಕ್ಕೇರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.