'ಕಾಂಗ್ರೆಸ್‌ ಏಕಾಂಗಿ ಹೋರಾಟ, ಡಿಕೆಶಿ ಹೇಳಿದ ಅಚ್ಚರಿ ಅಭ್ಯರ್ಥಿ ನನಗೆ ಗೊತ್ತಿಲ್ಲ '

By Kannadaprabha NewsFirst Published Oct 1, 2020, 7:34 AM IST
Highlights

ಬೈ ಎಲೆಕ್ಷನ್ನಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ| ಜೆಡಿಎಸ್‌ ಜೊತೆ ಮೈತ್ರಿ ತಳ್ಳಿಹಾಕಿದ ಸಿದ್ದರಾಮಯ್ಯ| ಡಿಕೆಶಿ ಹೇಳಿದ ಅಚ್ಚರಿ ಅಭ್ಯರ್ಥಿ ನನಗೆ ಗೊತ್ತಿಲ್ಲ ಎಂದ ಮಾಜಿ ಸಿಎಂ

ಬೆಂಗಳೂರು(ಅ,01): ರಾಜರಾಜೇಶ್ವರಿನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿದ್ದು, ಹೋರಾಟ ಮಾಡಲು ನಮಗೆ ಶಕ್ತಿ ಇದೆ. ಹೀಗಾಗಿ ನಾವು ಏಕಾಂಗಿಯಾಗಿಯೇ ಹೋರಾಟ ಮಾಡುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಅಚ್ಚರಿಯೋ ನನಗೆ ಗೊತ್ತಿಲ್ಲ. ಯಾವ ಅಚ್ಚರಿ ಅಭ್ಯರ್ಥಿಯಪ್ಪಾ ಎಂದು ಡಿ.ಕೆ.ಶಿವಕುಮಾರ್‌ಗೆ ಕೇಳುತ್ತೇನೆ’ ಎಂದು ಹೇಳಿದರು.

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾದಲ್ಲಿ ಜೆಡಿಎಸ್‌ ಶಾಸಕ ಸತ್ಯನಾರಾಯಣ ಅವರ ನಿಧನದಿಂದ ಹಾಗೂ ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಮುನಿರತ್ನ ಬಿಜೆಪಿಗೆ ಹೋಗಿದ್ದರಿಂದ ಚುನಾವಣೆ ಬಂದಿದೆ. ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಈಗಲೇ ಚುನಾವಣೆ ನಡೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಅಭ್ಯರ್ಥಿಯ ಯಾರು ಎಂಬುದು ತೀರ್ಮಾನ ಆಗಿಲ್ಲ. ಅಚ್ಚರಿ ಅಭ್ಯರ್ಥಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಶಿರಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ. ಕಳೆದ ಬಾರಿ ಮಾಜಿ ಸಚಿವ ಟಿ.ಬಿ.ಜಯಚಂದ್ರ 12-13 ಸಾವಿರ ಮತಗಳಿಂದ ಸೋತಿದ್ದರು. ಹೀಗಾಗಿ ಈ ಬಾರಿಯೂ ಅವರಿಗೆ ಟಿಕೇಟ್‌ ನೀಡಲಾಗುತ್ತಿದೆ. ನಮಗೆ ಯಾವ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಕೊರತೆ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಕನಿಷ್ಠ 8-10 ಮಂದಿ ಅಭ್ಯರ್ಥಿಗಳು ಇರುತ್ತಾರೆ. ಹೀಗಾಗಿ ನಾವು ಏಕಾಂಗಿಯಾಗಿ ಹೋರಾಡಿ ಎರಡೂ ಕ್ಷೇತ್ರ ಗೆಲ್ಲುತ್ತೇವೆ. ಯಾರ ಬೆಂಬಲವೂ ಅಗತ್ಯವಿಲ್ಲ ಎಂದು ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದರು.

ಎಪಿಎಂಸಿ, ಭೂ ಸುಧಾರಣೆ ಹೋರಾಟ ಇನ್ನೂ ಆರಂಭ:

ಎಪಿಎಂಸಿ, ಕಾರ್ಮಿಕ ಕಾಯಿದೆ ಹಾಗೂ ಭೂ ಸುಧಾರಣೆ ತಿದ್ದುಪಡಿಗಳ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಇನ್ನೂ ಇದು ಆರಂಭ ಮಾತ್ರ. ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಈಗಿರುವ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿ ತಾಲೂಕು ಕೇಂದ್ರಗಳಿಗೆ ಸೀಮಿತವಾಗಿರುವ ಎಪಿಎಂಸಿ ಮಾರುಕಟ್ಟೆಯನ್ನು ಪ್ರತಿ ಗ್ರಾಮ ಪಂಚಾಯತಿಗೂ ವಿಸ್ತರಿಸುವುದಾಗಿ ಹೇಳಿತ್ತು. ಬಿಜೆಪಿಯವರು ನಮ್ಮ ಪ್ರಣಾಳಿಕೆಯ ಆಯ್ದ ಭಾಗವನ್ನು ಮಾತ್ರ ಜನರಿಗೆ ತೋರಿಸಿ, ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಎಪಿಎಂಸಿ ಕಾಯಿದೆ ಹಾಗೂ ಭೂ ಸುಧಾರಣಾ ಕಾಯಿದೆ ತಿದ್ದುಪಡಿಗಳು ಮೇಲ್ಮನೆಯಲ್ಲಿ ಚರ್ಚೆಗೆ ಬರಲೇ ಇಲ್ಲ. ಇನ್ನು ಕಾರ್ಮಿಕ ಕಾಯಿದೆ ಪರ ಬಹುಮತವೇ ಇಲ್ಲ. ಹೀಗಾಗಿ ಈ ಕಾಯ್ದೆಗಳ ಜಾರಿಗೆ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸಬೇಕು. ಈಗಿನ್ನೂ ಹೋರಾಟದ ಕಿಚ್ಚು ಆರಂಭವಾಗಿದ್ದು, ಇದು ಇಲ್ಲಿಗೆ ನಿಲ್ಲುವುದಿಲ್ಲ. ಸರ್ಕಾರವು ವಿವಾದಿತ ಕಾಯಿದೆಗಳನ್ನು ವಾಪಸು ಪಡೆಯಲೇಬೇಕು ಎಂದು ಒತ್ತಾಯಿಸಿದರು.

ಮೊದಲು ಗೊಂಡ, ರಾಜಗೊಂಡವನ್ನು ಎಸ್‌ಟಿಗೆ ಸೇರಿಸಿ

ಕುರುಬ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸಬೇಕು ಎಂಬ ಕುರಿತು ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ನಡೆದ ಸಭೆಯ ಬಗ್ಗೆ ಮಾತನಾಡಿದ ಅವರು, ನನ್ನನ್ನು ಕರೆದಿಲ್ಲ. ಹೀಗಾಗಿ ಭಾಗವಹಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೀದರ್‌, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಗೊಂಡ, ರಾಜಗೊಂಡ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದೆ. ಈಶ್ವರಪ್ಪನವರು ಮೊದಲು ಈ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಲಿ, ಆಮೇಲೆ ಬೇರೆಯ ಮಾತು ಎಂದು ಹೇಳಿದರು.

ನಾನು ಸಾಮಾಜಿಕ ನ್ಯಾಯದ ಪರವಾಗಿರುವವನು. ಈಶ್ವರಪ್ಪ ಬಿಜೆಪಿ ನಾಯಕರು. ರಾಜಕೀಯವಾಗಿ ನಾವು ಶತ್ರುಗಳು. ಆದರೆ ವೈಯಕ್ತಿಕವಾಗಿ ನಾವು ಸ್ನೇಹಿತರು. ಅವರ ಜೊತೆಗೆ ಸಭೆ ನಡೆಸಲು ಎಚ್‌.ಎಂ. ರೇವಣ್ಣ ಸೇರಿದಂತೆ ಯಾರು ಹೋದರೂ ನನ್ನ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

click me!