ಬ್ಲಾಕ್‌ಮೇಲ್ ರಾಜಕಾರಣ ಮಾಡಿ ಮುಖ್ಯಮಂತ್ರಿಯಾದರು ಎಂದು ತಮ್ಮ ವಿರುದ್ಧ ಆರೋಪ ಮಾಡಿದ ರಮೇಶ್ ಜಾರಕಿಹೊಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನಿಡಿದ್ದಾರೆ.
ಬೆಂಗಳೂರು [ನ.17]: ರಮೇಶ್ ಜಾರಕಿಹೊಳಿಗೆ ಎರಡು ನಾಲಿಗೆ ಇವೆ. ಇಬ್ಬಂದಿ ರಾಜಕಾರಣ ಮಾಡುವುದು ಅವರ ಚಾಳಿ. ಹಿಂದೆ ನನ್ನನ್ನು ಗುರು ಎನ್ನುತ್ತಿದ್ದ ಅವರು ಮಂತ್ರಿ ಮಾಡುವಂತೆ ನನಗೆ ದುಂಬಾಲು ಬಿದ್ದಿದ್ದರು. ಈಗ ಏನೇನೋ ಮಾತನಾಡುತ್ತಿದ್ದಾರೆ. ಅಂತಹ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ...
ಇದು ಬ್ಲಾಕ್‌ಮೇಲ್ ರಾಜಕಾರಣ ಮಾಡಿ ಮುಖ್ಯಮಂತ್ರಿಯಾದರು ಎಂದು ತಮ್ಮ ವಿರುದ್ಧ ಆರೋಪ ಮಾಡಿದ ರಮೇಶ್ ಜಾರಕಿಹೊಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ತಿರುಗೇಟು.
ಹೊಸಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಶನಿವಾರ ಪ್ರಚಾರಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಮೇಶ್ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಮೇಶ್ ಜಾರಕಿಹೊಳಿಗೆ ಎರಡು ನಾಲಿಗೆಗಳಿವೆ. ಅವರದ್ದು ಇಬ್ಬಂದಿ ರಾಜಕಾರಣ. ಇಬ್ಬಂದಿ ರಾಜಕಾರಣದ ಚಾಳಿ ಇರುವವರಿಗೆ ಏನು ಹೇಳಲಾಗುತ್ತದೆ? ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಪಾಪ ಏನೇನೋ ಮಾತನಾಡುತ್ತಿದ್ದಾರೆ. ಅಂತಹ ಮಾತುಗಳಿಗೆ ಏನು ಹೇಳಲಿ? ಅವುಗಳಿಗೆಲ್ಲಾ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಮ್ಮ ಸ್ವಾರ್ಥಕ್ಕಾಗಿ ನನಗೆ ಸಚಿವ ಸ್ಥಾನ ನೀಡಿದರು ಎಂಬ ರಮೇಶ್ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾರ್ಥಕ್ಕಾಗಿ ಯಾರಾದರೂ ಸಚಿವ ಸ್ಥಾನ ನೀಡುತ್ತಾರೇನ್ರೀ? ಸಚಿವ ಸ್ಥಾನ ನೀಡುವಂತೆ ರಮೇಶ್ ಜಾರಕಿಹೊಳಿ ದುಂಬಾಲು ಬಿದ್ದಿದ್ದರು. ಹೀಗಾಗಿ ಸಚಿವನನ್ನಾಗಿ ಮಾಡಲಾಯಿತು ಅಷ್ಟೆಎಂದರು.
ಕಾಂಗ್ರೆಸ್‌ನಲ್ಲಿ ನೀವೇ ಜೂನಿಯರ್ ಅಂತ ಅವರು ಆರೋಪಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ರಮೇಶ್ ಜಾರಕಿಹೊಳಿ ಮೊದಲು ಸಿದ್ದರಾಮಯ್ಯ ನಮ್ಮ ಗುರುಗಳು ಎನ್ನುತ್ತಿದ್ದರು. ಪಾಪ ಈಗ ಏನೇನೋ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅದಕ್ಕೆಲ್ಲಾ ಉತ್ತರ ಕೊಡಲಾಗುವುದಿಲ್ಲ ಎಂದರು.
ಎಂಟಿಬಿಗೆ ಮೂರನೇ ಸ್ಥಾನ:
ಎಂ.ಟಿ.ಬಿ. ನಾಗರಾಜ್ ಹೊಸಕೋಟೆ ಜನರಿಗೆ ಮೋಸ ಮಾಡಿ, ಕಾಂಗ್ರೆಸ್‌ಗೆ ಮೋಸ ಮಾಡಿ ಅಧಿಕಾರ, ಹಣಕ್ಕಾಗಿ ಬೇರೆ ಪಕ್ಷ ಸೇರಿದ್ದಾರೆ. ಹಾಗಾಗಿ ಕ್ಷೇತ್ರದ ಜನರು ಅವರನ್ನು ಸೋಲಿಸಿ ಮೂರನೇ ಸ್ಥಾನಕ್ಕೆ ಇಳಿಸಲಿದ್ದಾರೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.
ನಾಗರಾಜ್ ಅವರು ಹಿಂದೆ ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎನ್ನುತ್ತಿದ್ದರು. ಈಗ ಎದೆಯಲ್ಲಿ ಯಡಿಯೂರಪ್ಪ ಇರಬಹುದು. ಹೊಸಕೋಟೆಯ ಜನ ಸ್ವಾಭಿಮಾನಿಗಳು. ಕಳೆದ ಚುನಾವಣೆಯಲ್ಲಿ ನಾಗರಾಜ್ ಅವರನ್ನು ಗೆಲ್ಲಿಸಿದ್ದರು. ಆದರೆ ನಾಗರಾಜ್ ಅವರನ್ನು ಈಗ ಸುಪ್ರೀಂಕೋರ್ಟ್ ಅನರ್ಹಗೊಳಿಸಿದೆ. ಹಣ, ಅಧಿಕಾರಕ್ಕಾಗಿ ಬೇರೆ ಪಕ್ಷ ಸೇರಿ, ಅನರ್ಹ ಎಂಬ ಕಳಂಕ ಹೊತ್ತು ಬಂದಿರುವುದರಿಂದ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಾಗಾಗಿ ಜನ ಅವರನ್ನು ತಿರಸ್ಕರಿಸಿ ಕಾಂಗ್ರೆಸ್‌ನ ಹಾಲಿ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರನ್ನು ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ ಎಂದರು.
ಪ್ರತಿಸ್ಪರ್ಧಿಗಳಾದ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ಅವರು ಎಷ್ಟನೇ ಸ್ಥಾನಕ್ಕೆ ಇಳಿಯಬಹುದು ಎಂಬ ಪ್ರಶ್ನೆಗೆ, ನಾಗರಾಜ್ ಮೂರನೇ ಸ್ಥಾನಕ್ಕೆ, ಶರತ್ 2ನೇ ಸ್ಥಾನಕ್ಕೆ ಇಳಿಯಲಿದ್ದಾರೆ ಎಂದರು.